ಬಂಗಾಳ, ಬಿಹಾರದಲ್ಲಿ ರಾಮನವಮಿ ಬೆಂಕಿ; ಶಾಂತವಾಗಿದ್ದ ಯುಪಿಯಲ್ಲಿ ಹೇಗಿತ್ತು ಗೊತ್ತಾ ಯೋಗಿ ಪ್ಲ್ಯಾನ್‌?

By Santosh NaikFirst Published Apr 5, 2023, 5:58 PM IST
Highlights

ರಾಮನವಮಿ ಶೋಭಾಯಾತ್ರೆ ಹಲವು ರಾಜ್ಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ, ಬಿಹಾರ ಹಾಗೂ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ಗಲಾಟೆಯಾಗಿವೆ. ಆದರೆ, ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಮಾತ್ರ ಎಲ್ಲವೂ ಶಾಂತಿಯುತವಾಗಿತ್ತು.
 

ನವದೆಹಲಿ (ಏ.5): ಇದು ಯೋಗಿ ಸರ್ಕಾರವನ್ನು ಹೊಗಳುವ ಮಾತಲ್ಲ. ಒಂದು ರಾಜ್ಯ ಮುಖ್ಯಮಂತ್ರಿ ಎಷ್ಟು ಸ್ಪಷ್ಟವಾಗಿ ನಿರ್ಧಾರ ಮಾಡಬೇಕು ಅನ್ನೋದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉದಾಹರಣೆ. ಇತ್ತೀಚೆಗೆ ನಡೆದ ರಾಮನವಮಿ ಸಂಭ್ರಮ, ಪಶ್ಚಿಮ ಬಂಗಾಳ, ಬಿಹಾರದಲ್ಲಿ ಕೋಲಾಹಲ ಎಬ್ಬಿಸಿದೆ. ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಕೂಡ ಹಿಂಸಾತ್ಮಕ ಘಟನೆಗಳಿಂದ ಹೊರತಾಗಿರಲಿಲ್ಲ. ಆದರೆ,ಯೋಗಿ ಆದಿತ್ಯನಾಥ್‌ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಸಾವಿರಾರು ರಾಮನವಮಿ ಶೋಭಾಯಾತ್ರೆಗಳೂ ನಡೆದರೂ ಎಲ್ಲಿಯೂ ಕೂಡ ಶಾಂತಿ ಕದಡಲಿಲ್ಲ. ಗಲಭೆ, ಹೊಡೆದಾಟ, ಊಹುಂ ಒಂದು ಸಣ್ಣ ವಿಚಾರಕ್ಕೂ ಉತ್ತರ ಪ್ರದೇಶ ಸಾಕ್ಷಿಯಾಗಲಿಲ್ಲ. ದೇಶದ ಅತೀದೊಡ್ಡ ರಾಜ್ಯ ಗರಿಷ್ಠ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದ್ದರೂ ಉತ್ತರ ಪ್ರದೇಶ ರಾಮನವಮಿ ಸಂದರ್ಭದಲ್ಲಿ ಶಾಂತವಾಗಿರೋದಕ್ಕೆ ಕಾರಣ ಸಿಎಂ ಯೋಗಿ ಆದಿತ್ಯನಾಥ್‌ ಅವರ ಸ್ಪಷ್ಟ ಆದೇಶ.

ಉತ್ತರ ಪ್ರದೇಶದಲ್ಲಿ ಒಂದೇ ಒಂದು ಹಿಂಸಾಚಾರದ ಘಟನೆ ವರದಿ ಆಗದೇ ಇರಲು ಕಾರಣವೇನು ಅನ್ನೋದೇ ಎಲ್ಲರ ಕುತೂಹಲ, 'ಕಳೆದ ವಾರ ನಡೆದ ರಾಮನವಮಿ ಮೆರವಣಿಗೆ ಸಮಯದಲ್ಲಿ ಒಂದೇ ಒಂದು ಹಿಂಸಾಚಾರ ನಡೆದಿಲ್ಲ. ಸಾವಿರಾರು ಶೋಭಾಯಾತ್ರೆ ನಡೆದರೂ ಎಲ್ಲಿಯೂ ಶಾಂತಿಭಂಗವಾಗಿಲ್ಲ. ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ನೇರ ಹಾಗೂ ಸ್ಪಷ್ಟವಾದ ಮಾರ್ಗವಿದೆ. ಅದೇನೆಂದರೆ, ಯಾರೇ ಆಗಿರಲಿ ಈಗಾಗಲೇ ಇರುವ ಸಂಪ್ರದಾಯದಲ್ಲಿಯೇ ತಮ್ಮ ಆಚರಣೆಗಳನ್ನು ಮಾಡಬೇಕು. ಹೊಸ ಆಚರಣೆಗಳನ್ನು ಯಾವುದೇ ಕಾರಣಕ್ಕೂ ಮಾಡುವಂತಿಲ್ಲ. ಶಾಂತಿ ಸಮಿತಿಯಲ್ಲಿರುವ ಎರಡೂ ಕಡೆಯ ಧಾರ್ಮಿಕ ನಾಯಕರೊಂದಿಗೆ ಸಭೆ, ಧರ್ಮ-ತಟಸ್ಥ ಧೋರಣೆ, ಹಾಗೇನಾದರೂ ಹಿಂಸಾಚಾರದಲ್ಲಿ ಭಾಗಿಯಾದಲ್ಲಿ ಗಂಭೀರ ಪರಿಣಾಮದ ಎಚ್ಚರಿಕೆ ನೀಡಲಾಗುತ್ತದೆ' ಎಂದು ಉತ್ತರ ಪ್ರದೇಶದ ಪೊಲೀಸ್‌ ಸಹಾಯಕ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌ ಹೇಳುವ ಮಾತು.

ಇಡೀ ದೇಶದಲ್ಲಿ ಎಷ್ಟು ರಾಮನವಮಿ ಶೋಭಾಯಾತ್ರೆ ಆಗುತ್ತದೆಯೋ, ಉತ್ತರಪ್ರದೇಶ ಒಂದೇ ರಾಜ್ಯದಲ್ಲಿ ಅದಕ್ಕಿಂತ ಹೆಚ್ಚಿ ಶೋಭಾಯಾತ್ರೆ ನಡೆಯುತ್ತದೆ. 'ಆದರೆ, ಹಬ್ಬವನ್ನು ಆಚರಣೆ ಮಾಡಲು ಯಾವುದೇ ಹೊಸ ಸಂಪ್ರದಾಯಕ್ಕೆ ಇಲ್ಲಿ ಅವಕಾಶವಿಲ್ಲ. ಅದು ರಾಮನವಮಿಯೇ ಆಗಿರಲಿ, ಮೊಹರಮ್‌ ಆಗಿರಲಿ. ಈಗಿರುವ ಸಂಪ್ರದಾಯದಂತೆಯೇ ಇವುಗಳು ನಡೆಯಬೇಕು. ಪ್ರತಿ ದೊಡ್ಡ ಉತ್ಸವಕ್ಕೂ ಮುನ್ನ ಎಲ್ಲಾ ಧಾರ್ಮಿಕ ನಾಯಕರನ್ನು ಒಟ್ಟಿಗೆ ಕರೆಯುತ್ತೇವೆ. ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಜಿಲ್ಲಾ ಮಟ್ಟದಲ್ಲಿ ಎಸ್‌ಪಿ ಉಸ್ತುವಾರಿಯಲ್ಲಿ ನಡೆಯುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡೋದು ಎಲ್ಲರ ಜವಾಬ್ದಾರಿ. ಇದಕ್ಕೆ ಬೇಕಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸರು ಅಲ್ಲಿನ ಧಾರ್ಮಿಕ ನಾಯಕರಿಗೆ ತಿಳಿಸುತ್ತಾರೆ ಎಂದು ಹೇಳಿದರು.

ಹಾಗೇನಾದರೂ ಹಿಂಸಾಚಾರದಲ್ಲಿ ಭಾಗಿಯಾದಲ್ಲಿ ಗಂಭೀರ ಪರಿಣಾಮ ಎಚ್ಚರಿಕೆಯನ್ನು ಧಾರ್ಮಿಕ ನಾಯಕರಿಗೆ ನೀಡಲಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದಲ್ಲಿ ಅದರ ವಸೂಲಾತಿಯನ್ನು ಮುಲಾಜಿಲ್ಲದೆ ಮಾಡುತ್ತೇವೆ. ದಂಡ ಕಟ್ಟಲು ವಿಫಲರಾದಲ್ಲಿ ಅದಕ್ಕೂ ಕಠಿಣ ನಿಯಮವಿದೆ. ಸರ್ಕಾರ ತಟಸ್ಥವಾಗಿದೆ ಮತ್ತು ಶಾಂತಿ ಕದಡಿದರೆ ಕ್ರಮ ಕೈಗೊಳ್ಳುತ್ತದೆ ಎಂಬ ಸಾಮಾನ್ಯ ಗ್ರಹಿಕೆ ರಾಜ್ಯದಲ್ಲಿದೆ' ಎಂದು ಕುಮಾರ್ ವಿವರಿಸಿದ್ದಾರೆ.

ಬಿಹಾರ ಹಾಗೂ ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ಮಸೀದಿ ಪಕ್ಕದಲ್ಲಿ ಹಾದು ಹೋಗುವಾಗ ಹಿಂಸಾಚಾರದ ಘಟನೆಗಳು ನಡೆದಿವೆ. ಇದನ್ನು ಮುಸ್ಲಿಂ ಪ್ರದೇಶಗಳು ಎಂದು ಹೇಳಲಾಗಿದ್ದು, ಕಲ್ಲುತೂರಾಟದ ಮೂಲಕ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿತ್ತು. ಆದರೆ, ಯುಪಿಯಲ್ಲೂ ಕೂಡ ಇದೇ ರೀತಿಯ ಸಮಸ್ಯೆಗಳಿದ್ದವು. ಅದು ಸಾಂಪ್ರದಾಯಿಕ ಮಾರ್ಗವಾಗಿದ್ದರೆ, ರಾಮನನವಿ ಮೆರವಣಿಗೆ ಮಸೀದಿ ಪಕ್ಕ ಹಾಗೂ ಮೊಹರಂ ಮೆರವಣಿಗೆ ದೇವಸ್ಥಾನದ ಪಕ್ಕ ಹಾದುಹೋಗುತ್ತದೆ. ಆದರೆ, ಹಿಂಸಾಚಾರ ಸೃಷ್ಟಿ ಮಾಡುವ ಉದ್ದೇಶದಲ್ಲಿಯೇ ಈ ಮಾರ್ಗ ಆಯ್ದುಕೊಂಡಿದ್ದರೆ, ಅದು ಯಾರೇ ಆಗಿರಲಿ, ಅನುಮತಿ ಸಿಗೋದಿಲ್ಲ.ಸಂಬಂಧಿತ ಸಮುದಾಯಗಳಿಗೆ ಮುಂಚಿತವಾಗಿಯೇ ಈ ಮುನ್ನೆಚ್ಚರಿಕೆಗಳನ್ನು ನೀಡಲಾಗಿರುತ್ತದೆ.

Latest Videos

ಮುಸ್ಲಿಮರಿದ್ದ ಕಡೆ ರಾಮನವಮಿ ಏಕೆ : ಮಮತಾ ಬ್ಯಾನರ್ಜಿ

ರಾಮನವಮಿ ಮೆರವಣಿಗೆ ಮಸೀದಿ ಪಕ್ಕದಿಂದ ಹಾದು ಹೋಗುವುದು ಸಾಂಪ್ರದಾಯಿಕ ಮಾರ್ಗವಾಗಿದ್ದರೆ, ಮೆರವಣಿಗೆ ಮಸೀದಿ ಪಕ್ಕದಿಂದ ಹಾದು ಹೋಗುವವರೆಗೂ ಮುಸ್ಲಿಂ ಸಮುದಾಯದ ಪ್ರಮುಖ ವ್ಯಕ್ತಿಗಳು ಹಾದಿಯಲ್ಲಿ ನಿಂತು, ಶಾಂತಿಯುತವಾಗಿ ಮೆರವಣಿಗೆ ಸಾಗುವ ವ್ಯವಸ್ಥೆ ಮಾಡಬೇಕು. ಇದು ಅವರ ಜವಾಬ್ದಾರಿ ಆಗಿರುತ್ತದೆ ಎಂದು ಶಾಂತಿ ಸಮಿತಿ ಸಭೆಯಲ್ಲಿ ತಿಳಿಸುತ್ತೇವೆ.ಮುಸಲ್ಮಾನರ ಹಬ್ಬಗಳ ಸಂದರ್ಭದಲ್ಲಿ, ನಾವು ಪ್ರಮುಖ ಹಿಂದೂ ನಾಯಕರಿಗೆ ಇದೇ ರೀತಿ ಮಾಡುವಂತೆ ಹೇಳುತ್ತೇವೆ. ಇದನ್ನು ಬಲವತವಾಗಿ ಹೇರೋದಿಲ್ಲ. ಪ್ರತಿಯೊಬ್ಬರ ಹಿತದೃಷ್ಟಿಯಿಂದ ಶಾಂತಿಯನ್ನು ಕಾಪಾಡಲು ಈ ಕ್ರಮ ಎಂದು ಅವರಿಗೆ ತಿಳಿಸುತ್ತೇವೆ ಎಂದಿದ್ದಾರೆ,

Indore Temple Tragedy: ದೇವಸ್ಥಾನದ ಮೇಲೂ ಬುಲ್ಡೋಜರ್‌ ಹತ್ತಿಸಿದ ನಗರ ಪಾಲಿಕೆ!

ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಕೋಮು ಹಿಂಸಾಚಾರ ತಡೆಗಟ್ಟಲು ಇರುವ 'ದುರ್ಬಲ ರಾಜಕೀಯ ಇಚ್ಛಾಶಕ್ತಿ' ಹಾಗೂ ಪಕ್ಷಪಾತದ ಧೋರಣೆಯೇ ಗಲಭೆಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಬಂದಿರುವ ವರದಿಯಲ್ಲಿ ತಿಳಿಸಲಾಗಿದೆ. ಎರಡೂ ರಾಜ್ಯದ ಮುಖ್ಯಮಂತ್ರಿಗಳಿಗೆ ಹಿಂಸಾಚಾರ ತಡೆಗಟ್ಟುವ ಮನಸ್ಸು ಇದ್ದಿರಲಿಲ್ಲ. ಆ ಕಾರಣಕ್ಕಾಗಿಯೇ ಗಲಭೆ ಉಂಟಾಗಿದೆ ಎಂದು ವರದಿಗಳು ಬಂದಿವೆ. ಕಳೆದ ವರ್ಷವೂ ರಾಮನವಮಿ ಮೆರವಣಿಗೆ ವೇಳೆ ಪಶ್ಚಿಮ ಬಂಗಾಳವು ಇದೇ ರೀತಿಯ ಘಟನೆಗಳನ್ನು ಎದುರಿಸಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಪಾಠ ಕಲಿತಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

click me!