
ನವದೆಹಲಿ(ಆ.03): ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಸೇರಿದ ವ್ಯಕ್ತಿಯಾದ ಕಾರಣ, ಕೃಷ್ಣಾ ನದಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ನದಿ ನೀರು ಹಂಚಿಕೆ ಸಂಬಂಧ ಆಂಧ್ರ ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾನು ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ. ನಾನು ಎರಡು ರಾಜ್ಯಗಳಿಗೂ ಸೇರಿದವನು. ಕೇಂದ್ರದ ಮಧ್ಯಸ್ಥಿಕೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದ್ದರೆ ಬಗೆಹರಿಸಿಕೊಳ್ಳಿ, ಆಗದಿದ್ದಲ್ಲಿ ಈ ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುತ್ತೇನೆ’ ಎಂದು ಅವರು ಹೇಳಿದರು.
ಕೃಷ್ಣಾ ಮತ್ತು ಗೋದಾವರಿ ನದಿಗಳು ಆಂಧ್ರ ಹಾಗೂ ತೆಲಂಗಾಣ ಮೂಲಕ ಹರಿಯುತ್ತವೆ. ಆಂಧ್ರಪ್ರದೇಶ ವಿಭಜನೆ ಆದಾಗಿನಿಂದಲೂ ಈ ನದಿಗಳ ನೀರು ಹಂಚಿಕೆ ವಿಚಾರದಲ್ಲಿ ಪದೇಪದೆ ಘರ್ಷಣೆ ಆಗುತ್ತಲೇ ಇದೆ. ಈಗ ಎರಡೂ ರಾಜ್ಯಗಳ ಗಡಿಯಲ್ಲಿರುವ ಶ್ರೀಶೈಲ ಅಣೆಕಟ್ಟಿಗೆ ಸಂಬಂಧಪಟ್ಟ ವಿಚಾರದಲ್ಲಿ ವಿವಾದ ಎದ್ದಿದೆ.
ಕೃಷ್ಣಾ ನದಿಗೆ ಒಟ್ಟು ಆರು ಅಣೆಕಟ್ಟು ಕಟ್ಟಲಾಗಿದೆ. ಈ ನದಿ ನೀರು ಹಂಚಿಕೆ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ 34:66 ಪ್ರಮಾಣದಲ್ಲಿ ಇರಬೇಕು ಎಂದು ತಾತ್ಕಾಲಿಕ ಒಪ್ಪಂದ ಹೇಳುತ್ತದೆ. ಅಂದರೆ ತೆಲಂಗಾಣಕ್ಕೆ 299 ಟಿಎಂಸಿ ನೀರು ಹಾಗೂ ಆಂಧ್ರಪ್ರದೇಶಕ್ಕೆ 512 ಟಿಎಂಸಿ ನೀರು ಸೇರಬೇಕು. ಆದರೆ ಈ ಅನುಪಾತವನ್ನು ಮೀರಿ ತೆಲಂಗಾಣ ನೀರು ಪಡೆಯುತ್ತದೆ ಎಂಬುದು ಆಂಧ್ರದ ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ