ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ನಾಯಕರ ಹೇಳಿಕೆಯಿಂದ ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಗೃಹ ಸಚಿವರ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಮಾಚುಕತೆ ನಡೆಸಿದ್ದಾರೆ.
ನವದೆಹಲಿ(ಡಿ.14): ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಸಮಸ್ಯೆ ದಿನಕ್ಕೊಂದು ಹೇಳಿಕೆಯಿಂದ ಉದ್ವಿಘ್ನಗೊಳ್ಳುತ್ತಿದೆ. ರಾಜಕೀಯ ನಾಯಕರ ಭೇಟಿ, ಹೇಳಿಕೆಯಿಂದ ಬೆಳಗಾವಿ ಗಡಿ ಕೊತ ಕೊತ ಕುದಿಯುತ್ತಿದೆ. ಎರಡು ರಾಜ್ಯಗಳು ಚರ್ಚಿಸಿ ಸಮಸ್ಯೆ ಬಗೆಹರಿಸುವ ಸ್ಥಿತಿ ಸದ್ಯಕ್ಕಿಲ್ಲ. ಪರಿಸ್ತಿತಿ ಕೈಮೀರುತ್ತಿರುವುದಕ್ಕಿಂತ ಮೊದಲೇ ಸಮಸ್ಯೆ ಬಗೆಹರಿಸಲು ಇದೀಗ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಗಡಿ ವಿಚಾರದಲ್ಲಿ ಕರ್ನಾಟಕದ ವಾದ ಮುಂದಿಟ್ಟಿದ್ದಾರೆ. ಇಷ್ಟೇ ಅಲ್ಲ ಪರಿಹಾರ ಸೂತ್ರವನ್ನು ತಿಳಿಸಿದ್ದಾರೆ.
ಬೆಳಗಾವಿ ಗಡಿ ಸಮಸ್ಯೆ ಉಲ್ಬಣಿಸುತ್ತಿರುವ ಕಾರಣ ಕರ್ನಾಟಕ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಅಮಿತ್ ಶಾ ಬುಲಾವ್ ನೀಡಿದ್ದರು. ಗಡಿ ಸಮಸ್ಯೆ ಬಗೆಹರಿಸಿ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು. ಇದರಂತೆ ಸಿಎಂ ಬೊಮ್ಮಾಯಿ ಗಡಿ ವಿವಾದದ ಇತಿಹಾಸ, ಗಡಿ ಸಮಸ್ಯೆ ಕುರಿತ ವರದಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಅಮಿತ್ ಶಾ ಮುಂದಿಟ್ಟಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ನಿಯೋಗ ಅಮಿತ್ ಶಾ ಭೇಟಿ ಮಾಡಿ ಕರ್ನಾಟಕದ ವಿರುದ್ದ ದೂರು ನೀಡಿತ್ತು. ಇದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದರು. ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಹಿಂದೆಯೂ ಸಹ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ. ಈ ಪ್ರಕರಣ ಸುಪ್ರೀಂಕೋರ್ಚ್‌ನಲ್ಲಿದೆ. ನ್ಯಾಯಾಲಯದಲ್ಲಿ ನಮ್ಮ ನ್ಯಾಯ ಸಮ್ಮತ ವಿಚಾರ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಬೆಳಗಾವಿಗೆ ಪವಾರ್ ಭೇಟಿಯಿಂದ ಬಿಗುವಿನ ವಾತಾವಾರಣ
ಗಡಿ ವಿವಾದದ ಕಿಚ್ಚು ಜೋರಾಗಿರುವ ಮಧ್ಯೆಯೇ ಮಹಾರಾಷ್ಟ್ರದ ಎನ್‌ಸಿಪಿ ಶಾಸಕ ರೋಹಿತ್ ಪವಾರ ಅವರು ಬೆಳಗಾವಿಗೆ ಆಗಮಿಸಿ, ನಾಡದ್ರೋಹಿ ಎಂಇಎಸ್ ಮುಖಂಡರ ಜತೆಗೆ ಮಾತುಕತೆ ನಡೆಸಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪುಣೆ ಜಿಲ್ಲೆಯ ಕರ್ಜತ್ ಜಮ್ಕೆಡ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ರೋಹಿತ್, ಮಹಾವಿಕಾಸ ಆಘಾಡಿ ನಾಯಕರ ಸೂಚನೆ ಮೇರೆಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಕೊಲ್ಲಾಪುರ ಕೊಗನೊಳ್ಳಿ ಮಾರ್ಗವಾಗಿ ಸೋಮವಾರ ರಾತ್ರಿ ಆಗಮಿಸಿ, ಅನಾರೋಗ್ಯಕ್ಕೆ ತುತ್ತಾಗಿರುವ ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ ದಳವಿ ಮನೆಗೆ ಭೇಟಿ ನೀಡಿ, ಅವರ ಆರೋಗ್ಯವಿಚಾರಿಸಿದರು. ನಂತರ, ಗಡಿ ಹೋರಾಟದ ವೇಳೆ ಗೋಲಿಬಾರ್‌ನಲ್ಲಿ ಮೃತಪಟ್ಟವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ, ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಯಳ್ಳೂರ ಗ್ರಾಮದಲ್ಲಿರುವ ಮಹಾರಾಷ್ಟ್ರ ಹೈಸ್ಕೂಲ್‌ಗೆ ಭೇಟಿ ನೀಡಿದರು.