
ನವದೆಹಲಿ(ಜ.04): ನ್ಯಾಯಾಧೀಶರಾಗಲು ಕನಿಷ್ಠ 3 ವರ್ಷಗಳ ವಕೀಲಿಕೆ ಕಡ್ಡಾಯಗೊಳಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.
ಈಗಿನ ನಿಯಮಗಳ ಪ್ರಕಾರ ಕಾನೂನು ಪದವೀಧರರು, ಪದವಿ ಪೂರ್ಣಗೊಳಿಸಿದ ತಕ್ಷಣವೇ ಯಾವುದೇ ವಕೀಲಿಕೆಯ ಅನುಭವವಿಲ್ಲದೇ ನ್ಯಾಯಾಧೀಶರ ಹುದ್ದೆಗಳ ಪರೀಕ್ಷೆಗಳಿಗೆ ಹಾಜರಾಗಬಹುದು.
ಆದರೆ ಇದನ್ನು ವಿರೋಧಿಸಿರುವ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ‘ನ್ಯಾಯಾಧೀಶ ಹುದ್ದೆಗೆ ಪರೀಕ್ಷೆ ಬರೆಯಲು ಕನಿಷ್ಠ 3 ವರ್ಷಗಳ ವಕೀಲಿಕೆ ಅನುಭವವನ್ನು ಕಡ್ಡಾಯಗೊಳಿಸಬೇಕು. ಇಲ್ಲದೇ ಹೋದರೆ ವಕೀಲಿಕೆ ಅನುಭವವಿಲ್ಲದೇ ನ್ಯಾಯಾಧೀಶ ಹುದ್ದೆಗೆ ಬರುವವರು ವಿಷಯಗಳನ್ನು ನಿಭಾಯಿಸುವಲ್ಲಿ ಅಸಮರ್ಥರಾಗಿರುತ್ತಾರೆ. ಅವರಿಗೆ ಪ್ರ್ಯಾಕ್ಟಿಕಲ್ ಅನುಭವ ಇರದ ಕಾರಣ ವಕೀಲರೆದುರು ವಿನಯದಿಂದ ನಡೆದುಕೊಳ್ಳುವುದಿಲ್ಲ. ಕಕ್ಷಿದಾರರು ಹಾಗೂ ವಕೀಲರ ಬೇಕು-ಬೇಡಗಳೂ ಅವರಿಗೆ ಗೊತ್ತಿರುವುದಿಲ್ಲ’ ಎಂದು ಹೇಳಿದೆ.
‘ಪ್ರಕರಣಗಳ ವಿಲೇವಾರಿ ವಿಳಂಬವಾಗಲು ವಕೀಲಿಕೆಯ ಅನುಭವ ಇಲ್ಲದಿರುವುದೂ ಮುಖ್ಯ ಕಾರಣ. ವಕೀಲಿಕೆ ತರಬೇತಿ ಹೊಂದಿರುವ ಅನುಭವಿ ನ್ಯಾಯಾಧೀಶರು ಬೇಗ ಪ್ರಕರಣ ವಿಲೇವಾರಿ ಮಾಡುತ್ತಾರೆ’ ಎಂದು ಕೌನ್ಸಿಲ್ ಅಭಿಪ್ರಾಯಪಟ್ಟಿದೆ.
ಜಡ್ಜ್ ಆಗಲು 3 ವರ್ಷದ ವಕೀಲಿಕೆ ಅನುಭವ ಅಗತ್ಯವಿಲ್ಲ ಎಂದು 2002ರಲ್ಲೇ ಸುಪ್ರೀಂ ಕೋರ್ಟ್ ನಿಯಮ ರೂಪಿಸಿತ್ತು. ಈಗ ಇದರ ಬದಲಾವಣೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಕೌನ್ಸಿಲ್ ಕಾರ್ಯದರ್ಶಿ ಶ್ರೀಮಂತೋ ಸೇನ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ