ಆಂಧ್ರಪ್ರದೇಶದ ರಾಮತೀರ್ಥದ ಶ್ರೀರಾಮ ವಿಗ್ರಹದ ಶಿರಚ್ಛೇದ| ದೇವಾಲಯ ಟ್ರಸ್ಟಿ, ಮಾಜಿ ಕೇಂದ್ರ ಸಚಿವ ರಾಜು ವಜಾ| ದೇವಾಲಯದ ಭದ್ರತೆ ವಿಚಾರದಲ್ಲಿ ತಮ್ಮ ಕೆಲಸ ನಿರ್ವಹಿಸಲು ವಿಫಲ
ವಿಜಯವಾಡ(ಜ.04): ಆಂಧ್ರಪ್ರದೇಶದ ರಾಮತೀರ್ಥದ ಶ್ರೀರಾಮ ವಿಗ್ರಹದ ಶಿರಚ್ಛೇದ ಘಟನೆ ಬಗ್ಗೆ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಮ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳ ಟ್ರಸ್ಟ್ ಅಧ್ಯಕ್ಷರಾಗಿದ್ದ ತೆಲುಗುದೇಶಂ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಅಶೋಕ್ ಗಜಪತಿರಾಜು ಅವರನ್ನು ರಾಜ್ಯ ಸರ್ಕಾರ ವಜಾ ಮಾಡಿದೆ.
ದೇವಾಲಯದ ಸಂಸ್ಥಾಪಕ ಅಧ್ಯಕ್ಷನಾಗಿದ್ದ ರಾಜು ಅವರು ದೇವಾಲಯದ ಭದ್ರತೆ ವಿಚಾರದಲ್ಲಿ ತಮ್ಮ ಕೆಲಸ ನಿರ್ವಹಿಸಲು ವಿಫಲರಾಗಿದ್ದಾರೆ. ಪ್ರತಿಮೆ ಧ್ವಂಸ ತಡೆಯುವಲ್ಲಿ ವಿಫಲರಾಗಿದ್ದೆ ಎಂದು ಹೇಳಿರುವ ರಾಜು ಅವರನ್ನು ಸರ್ಕಾರದ ಕಾರ್ಯದರ್ಶಿ ಗಿರಿಜಾ ಶಂಕರ್ ಅವರು ವಜಾ ಮಾಡಿದ್ದಾರೆ.
ಇನ್ನೊಂದೆಡೆ ರಾಜಮಂಡ್ರಿಯ ವಿಘ್ನೇಶ್ವರ ದೇವಾಲಯದಲ್ಲಿನ ಸುಬ್ರಹ್ಮಣ್ಯ ಪ್ರತಿಮೆ ಧ್ವಂಸ ಮಾಡಿದ ದುಷ್ಕರ್ಮಿಗಳ ಪತ್ತೆಗೆ 6 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸ್ಥಳದಲ್ಲಿನ ಸಿಸಿಟೀವಿ ಚಿತ್ರಗಳು ಅಸ್ಪಷ್ಟವಾಗಿರುವ ಕಾರಣ, ಘಟನೆ ನಡೆದ ದಿನದ ಈ ಸ್ಥಳದಲ್ಲಿನ ಮೊಬೈಲ್ ಕರೆಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.