
ಪಿಟಿಐ ಬರೇಲಿ (ಸೆ.28): ದೇಶದ ಅನೇಕ ಕಡೆ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿರುವ ‘ಐ ಲವ್ ಮೊಹಮ್ಮದ್’ ಅಭಿಯಾನವನ್ನು ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಸ್ಥಳೀಯ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಾಜಾ ಖಾನ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ತೌಕೀರ್ ರಾಜಾ ಐ ಲವ್ ಮೊಹಮ್ಮದ್ ಆಂದೋಲನಕ್ಕೆ ಕರೆ ನೀಡಿದ್ದರು. ಇದು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿತ್ತು. ಇದಲ್ಲದೆ, ಶುಕ್ರವಾರ ರಾತ್ರಿ ವಿಡಿಯೋ ಹೇಳಿಕೆ ನೀಡಿ, ಗಲಾಟೆ ಮಾಡಿದವರಿಗೆ ಅಭಿನಂದನೆ ಸಲ್ಲಿಸಿದ್ದರು ಹಾಗೂ ಪೊಲೀಸರ ಕ್ರಮ ಖಂಡಿಸಿದ್ದರು. ಅಲ್ಲದೆ. ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದಿದ್ದರು. ಹೀಗಾಗಿ ರಾಜಾ ಹಾಗೂ ಹಿಂಸೆಗೆ ಕಾರಣರಾದರು ಎನ್ನಲಾದ ಇತರ 7 ಜನರನ್ನು ಬಂಧಿಸಲಾಗಿದೆ ಹಾಗೂ ಕೋರ್ಟು ಅವರನ್ನು 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಇದನ್ನೂ ಓದಿ: ಐ ಲವ್ ಮೊಹಮ್ಮದ್ ವಿವಾದ : ಬರೇಲಿಯಲ್ಲಿ ಹಿಂಸೆ
ಇದೇ ವೇಳೆ, 40 ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, 1,700 ಅಪರಿಚಿತ ಜನರ ವಿರುದ್ಧ ಗಲಭೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಸದ್ಯ ಪರಿಸ್ಥಿತಿ ಶಾಂತಿಯುತವಾಗಿದ್ದು, ನಿಯಂತ್ರಣದಲ್ಲಿದೆ’ ಎಂದು ಬರೇಲಿ ಎಸ್‌ಎಸ್‌ಪಿ ಅನುರಾಗ್ ಆರ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯಲ್ಲಿ ‘ಐ ಲವ್ ಮೊಹಮ್ಮದ್’ ಅಭಿಯಾನಕ್ಕೆ ರಾಜಾ ಕರೆ ನೀಡಿದ್ದರು. ಆದರೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಕೊನೇ ಕ್ಷಣದಲ್ಲಿ ಅವರು ಪ್ರದರ್ಶನ ರದ್ದು ಮಾಡಿದ್ದರು. ಇದರಿಂದ ಕೋಪಗೊಂಡ ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಘರ್ಷಣೆಯಲ್ಲಿ 10 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ 2 ನಗರ ಉದ್ವಿಗ್ನ:
ಬರೇಲಿ ಘರ್ಷಣೆಗಳ ನಂತರ ಬಾರಾಬಂಕಿ, ಮೌ ಜಿಲ್ಲೆಗಳಲ್ಲಿ ಐ ಲವ್ ಮೊಹಮ್ಮದ್ ಪೋಸ್ಟರ್ ಅಂಟಿಸಿ ಅಭಿಯಾನ ನಡೆಸಲು ಯತ್ನಿಸಲಾಗಿದೆ. ಹೀಗಾಗಿ ಅಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಪಡೆಗಳನ್ನು ನಿಯೋಜಿಸಲಾಗಿದೆ
ಐ ಲವ್ ಮೊಹಮ್ಮದ್ ಎಂಬ ಪೋಸ್ಟರ್ ಅಭಿಯಾನ ಈದ್ ಹಬ್ಬದ ವೇಳೆ ಸೆ.4ರಂದು ಉತ್ತರ ಪ್ರದೇಶದ ಬರೇಲಿ ಹಾಗೂ ಕಾನ್ಪುರದಲ್ಲಿ ಆರಂಭವಾಗಿತ್ತು. ಇದು ದೇಶದ ಇತರೆಡೆ ಬಳಿಕ ವ್ಯಾಪಿಸಿತ್ತು. ಇದಕ್ಕೆ ಪ್ರತಿಯಾಗಿ ಕೆಲವು ಹಿಂದೂ ಕಾರ್ಯಕರ್ತರು ‘ಐ ಲವ್ ಮಹಾದೇವ’ ಅಭಿಯಾನ ಆರಂಭಿಸಿದ್ದರು.
ಒಬ್ಬ ಮೌಲಾನಾ ರಾಜ್ಯದಲ್ಲಿ ಯಾರು ಅಧಿಕಾರದಲ್ಲಿದ್ದಾರೆ ಎಂಬುದನ್ನು ಮರೆತಂತಿದೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಯತ್ನಕ್ಕೆ ನಾನು ಅವಕಾಶ ನೀಡಲ್ಲ. ಇಂಥದ್ದು ಇದು 2017ಕ್ಕಿಂತ ಮೊದಲು ನಡೆಯುತ್ತಿತ್ತೇ ವಿನಾ ಈಗಲ್ಲ. ನಾವು ಕಲಿಸಿದ ಪಾಠವು ಭವಿಷ್ಯದ ಪೀಳಿಗೆಗಳು ಗಲಭೆ ಮಾಡುವ ಮೊದಲು 2 ಬಾರಿ ಯೋಚಿಸುವಂತೆ ಮಾಡುತ್ತವೆ.
ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ