ಕಳೆದ ತಿಂಗಳ ಕೊನೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಜನರು ಸಾವಿ ಕಂಡಿದ್ದು, ಹಳ್ಳಿ ಹಳ್ಳಿಯೇ ನಿರ್ನಾಮವಾಗಿದೆ. ಅಪಾರ ಪ್ರಮಾಣದ ಕೃಷಿ ಭೂಮಿಯೂ ಕೊಚ್ಚಿ ಹೋಗಿದೆ.
ವಯನಾಡ್ (ಆ.20): ಭೀಕರ ಭೂಕುಸಿತದಿಂದಾಗಿ ತಮ್ಮವರೆಲ್ಲರನ್ನೂ ಕಳೆದುಕೊಂಡು ಕಂಗಾಲಾಗಿದ್ದ ವಯನಾಡ್ ಸಂತ್ರಸ್ತರಿಗೆ ಕೇರಳ ಸರ್ಕಾರ ಬಿಡುಗಡೆ ಮಾಡಿದ ಪರಿಹಾರ ಮೊತ್ತವನ್ನು ಗ್ರಾಮೀಣ ಬ್ಯಾಂಕ್ ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಬೆಳವಣಿಗೆಯು ಸಂತ್ರಸ್ತರಿಗೆ ಭಾರಿ ಆಘಾತವನ್ನು ಉಂಟು ಮಾಡಿದೆ. ಕೇರಳ ಗ್ರಾಮೀಣ ಬ್ಯಾಂಕ್‌ನ ನಡವಳಿಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಲ್ಪೆಟ್ಟಾದ ಗ್ರಾಮೀಣ ಬ್ಯಾಂಕ್ ಮುಂದೆ ವಿವಿಧ ರಾಜಕೀಯ ಪಕ್ಷಗಳು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಇದೊಂದು ಕ್ರೂರ ನಡವಳಿಕೆ ಎಂದು ಕೇರಳ ಸಹಕಾರ ಸಚಿವ ವಿ.ಎನ್.ವಾಸವನ್ ಟೀಕಿಸಿದ್ದಾರೆ. ಈ ನಡುವೆ, ಪರಿಹಾರ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ಮರಳಿಸುವಂತೆ ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಅವರು ಗ್ರಾಮೀಣ ಬ್ಯಾಂಕ್‌ಗೆ ಸೂಚನೆ ಕೊಟ್ಟಿದ್ದಾರೆ. ಮತ್ತೊಂದೆಡೆ, ದುರಂತ ಸಂಭವಿಸುವ ಮೊದಲಿನಿಂದಲೂ ಪ್ರತಿ ತಿಂಗಳು ಸಾಲಗಾರರ ಖಾತೆಯಿಂದ ಸಾಲದ ಕಂತು ಕಡಿತವಾಗುತ್ತಿತ್ತು. ಅದೇ ರೀತಿ ಈ ಬಾರಿಯೂ ಕಡಿತವಾಗಿದೆ ಎಂದು ಕೇರಳ ಗ್ರಾಮೀಣ ಬ್ಯಾಂಕ್‌ನ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಕೇರಳ ಗ್ರಾಮೀಣ ಬ್ಯಾಂಕ್‌ನ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜನ್ ಅವರು, ಸಾಲ ಮರುಪಾವತಿ ಅವಧಿ ಮುಂದೂಡುವುದು ಅಥವಾ ಬಡ್ಡಿ ವಿನಾಯಿತಿ ನೀಡುವುದು ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಪರಿಹಾರವೇ ಅಲ್ಲ. ಯಾರ್‍ಯಾರು ಸಾಲ ಪಡೆದಿದ್ದಾರೋ ಅವರ ಸಾಲವನ್ನೆಲ್ಲಾ ಮನ್ನಾ ಮಾಡಬೇಕು. ಏಕೆಂದರೆ, ಸಾಲಗಾರರ ಭೂಮಿ ಬಳಸಲು ಸಾಧ್ಯವೇ ಇಲ್ಲದಂತಾಗಿದೆ. ಸಾಲ ಮನ್ನಾ ಮಾಡಿದರೆ ಬ್ಯಾಂಕುಗಳಿಗೆ ಹೊರೆ ಏನೂ ಆಗುವುದಿಲ್ಲ ಎಂದು ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆಯಲ್ಲಿ ತಾಕೀತು ಮಾಡಿದ್ದಾರೆ.
ಆಗಿದ್ದೇನು?: ವಯನಾಡ್ ಭೂಕುಸಿತದಿಂದಾಗಿ ಅಲ್ಲಿನ ಸಂತ್ರಸ್ತರ ಆಸ್ತಿಪಾಸ್ತಿ ಎಲ್ಲವೂ ನಷ್ಟವಾಗಿತ್ತು. ಜೀವನ ಮಾಡುವುದೇ ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸಂತ್ರಸ್ತರಿಗೆ 10 ಸಾವಿರ ರು. ಪರಿಹಾರವನ್ನು ಖಾತೆಗೆ ಜಮೆ ಮಾಡಿತ್ತು. ಆದರೆ ಆ ಹಣದಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ಇಎಂಐ ಕಡಿತ ಮಾಡಿಕೊಂಡಿದೆ. ಈ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ ಶೇ.50 ಪಾಲು ಹೊಂದಿದೆ. ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಮೂಲಕ ಇನ್ನೂ ಶೇ.35ರಷ್ಟು ಪಾಲನ್ನು ಗಳಿಸಿದೆ. ಕೇರಳ ಸರ್ಕಾರ ಶೇ.15ರಷ್ಟು ಷೇರು ಹೊಂದಿದೆ.
Wayanad Landslide: ಆರೆಸ್ಸೆಸ್‌ನ ರಕ್ಷಣಾ ಕಾರ್ಯಕ್ಕೆ ಕ್ರಿಶ್ಚಿಯನ್ ಸಮುದಾಯದಿಂದ ಮೆಚ್ಚುಗೆ