ಬಂಡೀಪುರಕ್ಕೆ ಹೆದ್ದಾರಿ ಪ್ರಾಧಿಕಾರದ ರಸ್ತೆ ಅಗಲೀಕರಣ ಕಂಟಕ, ಕಾಡು ಕಡಿಸಲು ಯೋಜನೆ!

By Kannadaprabha News  |  First Published Aug 25, 2021, 8:05 AM IST

* ಬಂಡೀಪುರ ಅರಣ್ಯಕ್ಕೆ ಹೆದ್ದಾರಿ ಪ್ರಾಧಿಕಾರದ ಅಗಲೀಕರಣ ಸಂಚಕಾರ

* ರಸ್ತೆ ವಿಸ್ತರಣೆಗೆ ಕಾಡು ಕಡಿಸಲು ಯೋಜನೆ

* ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ


ಬೆಂಗಳೂರು(ಆ.25): ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಈಗ ರಾಜ್ಯದ ಮತ್ತೊಂದು ಹುಲಿ ಸಂರಕ್ಷಿತ ಅರಣ್ಯದಲ್ಲಿ ಅನಗತ್ಯವಾಗಿ ಕಾಡು ಕಡಿಸುವ ಯೋಜನೆಯೊಂದಕ್ಕೆ ಮುಂದಾಗಿದ್ದು, ಪರಿಸರ ಪ್ರೇಮಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ಪ್ರಾಧಿಕಾರವು ಈ ಬಾರಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯದ ಮೇಲೆ ಕಣ್ಣು ಹಾಕಿದ್ದು, ಈ ಮಹತ್ವದ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹಾದು ಹೋಗುವ ಗುಂಡ್ಲುಪೇಟೆ- ಕೊಯಮತ್ತೂರು ರಾಷ್ಟಿ್ರಯ ಹೆದ್ದಾರಿ(181) ಅಗಲೀಕರಣ ಮಾಡುವುದಕ್ಕೆ ಮುಂದಾಗಿದೆ.

Tap to resize

Latest Videos

ಈ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹಾಲಿ ಇರುವ ರಸ್ತೆಯನ್ನು ಸುಮಾರು 13.2 ಕಿಲೋ ಮೀಟರ್‌ ದೂರದವರೆಗೆ ಅಗಲೀಕರಣ ಮಾಡಲು 9.45 ಹೆಕ್ಟೇರ್‌ ಅರಣ್ಯಭೂಮಿ ನೀಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದೆ. ಬೆಂಗಳೂರಿನಲ್ಲಿರುವ ಪ್ರಾಧಿಕಾರದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಅವರು ಮೈಸೂರಿನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಅವರಿಗೆ ಮೇ 29 ರಂದು ಪತ್ರ ಬರೆದು, ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಅಡ್ಡಿಯಿಲ್ಲದಂತೆ ಅನುಮತಿ ಪಡೆಯಬೇಕು ಎಂದು ಕೋರಿದ್ದಾರೆ.

ಕಾನೂನು ಉಲ್ಲಂಘನೆ:

ಪ್ರಸ್ತುತ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವ ಮಾರ್ಗ ಪರಿಸರ ಮೌಲ್ಯಮಾಪನ ಅಧಿಸೂಚನೆ 2006ರ ಪ್ರಕಾರ ‘ಎ’ ದರ್ಜೆಯ ಯೋಜನೆಯಾಗಿದೆ. ಅಲ್ಲದೆ, ಬಂಡೀಪುರ ಹುಲಿ ಸಂರಕ್ಷಣಾ ಧಾಮವು ಪರಿಸರ ಸೂಕ್ಷ್ಮವಲಯವಾಗಿದ್ದು, ಈ ಯೋಜನೆಗೆ ಅನುಮತಿ ನೀಡುವ ಮುನ್ನ ಈ ಭಾಗದಲ್ಲಿನ ಪರಿಸರಕ್ಕೆ ಆಗುತ್ತಿರುವ ಪರಿಣಾಮವನ್ನು ಮಾಪನ ಮಾಡುವುದು ಕಡ್ಡಾಯವಾಗಿದೆ. ಆದರೆ, ಪ್ರಾಧಿಕಾರ ಸಲ್ಲಿಸಿರುವ ಅರ್ಜಿಯಲ್ಲಿ ಪರಿಸರದ ಮೇಲಿನ ಪರಿಣಾಮ ಮಾಪನದ ಮಾಡುವ ಅವಶ್ಯಕತೆಯಿಲ್ಲ ಎಂದು ವಾದ ಮಾಡಲಾಗಿದೆ. ಇದು ಕಾನೂನಿನ ಸ್ಪಷ್ಟಉಲ್ಲಂಘನೆಯಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಮೊದಲಿಗೆ ಕರ್ನಾಟಕ:

ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಣಾ ಧಾಮಕ್ಕೆ ಹೊಂದಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಎರಡೂ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಹಾದು ಹೋಗಲಿದೆ. ಪ್ರಾರಂಭದಲ್ಲಿ ಕರ್ನಾಟಕದಲ್ಲಿ ಮಾತ್ರ ರಸ್ತೆ ಅಗಲೀಕರಣಕ್ಕೆ ಅನುಮತಿ ಕೇಳಿದ್ದು, ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿಯೂ ಅನುಮತಿ ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ಎರಡು ವನ್ಯಜೀವಿ ಧಾಮಗಳಲ್ಲಿ ಸುಮಾರು 30 ಕಿ.ಮೀ. ಉದ್ದದ ರಸ್ತೆಯನ್ನು ಅಗಲೀಕರಣ ಮಾಡುವ ಉದ್ದೇಶ ಪ್ರಾಧಿಕಾರದ್ದು. ಹೀಗೆ 30 ಕಿ.ಮೀ. ರಸ್ತೆ ಅಗಲೀಕರಣ ಮಾಡಬೇಕಿದ್ದರೆ ಆಗ ಅದಕ್ಕೆ ಹಲವು ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇದನ್ನು ತಪ್ಪಿಸಲು ಪ್ರಾಧಿಕಾರವು ಪ್ರಸ್ತುತ ಕೇವಲ ಕರ್ನಾಟಕದ ಭಾಗದ ಅರಣ್ಯದಲ್ಲಿ ಮಾತ್ರ ಅಗಲೀಕರಣದ ಪ್ರಸ್ತಾವನೆ ಸಲ್ಲಿಸಿದೆ. ಈ ಕಾರ್ಯ ಮುಗಿದ ನಂತರ ತಮಿಳುನಾಡು ಭಾಗದ ರಸ್ತೆ ಕೈಗೆತ್ತಿಕೊಳ್ಳುವ ತಂತ್ರ ಪ್ರಾಧಿಕಾರದ್ದು ಎಂದು ವನ್ಯಜೀವಿ ತಜ್ಞರು ಆರೋಪಿಸುತ್ತಾರೆ.

ಏನೇನು ಅನಾಹುತ?:

ಒಂದು ವೇಳೆ ಪ್ರಾಧಿಕಾರ ಉದ್ದೇಶಿಸಿದಂತೆ ಈ ರಸ್ತೆಯ ಅಗಲೀಕರಣ ಉಂಟಾದರೆ ಅತಿಯಾದ ವಾಹನಗಳ ಓಡಾಟದಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಇತ್ಯಾದಿಗಳಿಂದ ವನ್ಯಜೀವಿಗಳ ವರ್ತನೆಗಳ ಮೇಲೆ ಗಂಭೀರ ಪ್ರಭಾವ ಬೀರಲಿದೆ. ಈ ಮಾರ್ಗದಲ್ಲಿ ಹುಲಿ, ಆನೆ, ಚಿರತೆ, ಜಿಂಕೆ, ಕಡವೆ, ಕಾಡು ಕುರಿ, ಕಿರುಬ ಬೆಕ್ಕು ಸೇರಿ ಇತರೆ ಪ್ರಾಣಿಗಳು ಅತೀ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಮೃತಪಟ್ಟಿವೆ. ಜೊತೆಗೆ, ಸರೀಸೃಪಗಳು, ಹಕ್ಕಿಗಳು ತಮ್ಮ ಜೀವ ಕಳೆದುಕೊಂಡಿವೆ. ಇದೇ ಕಾರಣದಿಂದ ತುರ್ತು ವಾಹನಗಳು ಮತ್ತು 16 ಸಾರ್ವಜನಿಕ ಬಸ್‌ಗಳನ್ನು ಹೊರತುಪಡಿಸಿ ಮತ್ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ಅಂತಹ ಮಾರ್ಗದಲ್ಲಿ ಇದೀಗ ಈ ಯೋಜನೆಗೆ ಅನುಮತಿ ಸಿಕ್ಕಲ್ಲಿ ಮತ್ತಷ್ಟುವ್ಯನ್ಯಜೀವಿಗಳು ಜೀವ ಕಳೆದುಕೊಳ್ಳಲು ಕಾರಣವಾಗಲಿದೆ ಎಂಬುದು ಸಾರ್ವಜನಿಕರ ಆತಂಕವಾಗಿದೆ.

ಎನ್‌ಡಬ್ಲ್ಯೂಬಿಯ ಉಪ ಸಮಿತಿ ತಿಳಿಸಿರುವುದೇನು?

ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಆವಾಸಸ್ಥಾನಗಳ ಮೂಲಕ ಹಾದು ಹೋಗುವ ರಸ್ತೆಗಳನ್ನು ಯಥಾಸ್ಥಿತಿಯಲ್ಲಿ ರಕ್ಷಿಸಬೇಕು. ಪ್ರಸ್ತುತ ಇರುವ ಅಗಲದಲ್ಲಿಯೇ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಅಗಲೀಕರಣಕ್ಕೆ ಮುಂದಾಗಬಾರದು. ಡಾಂಬರು ರಸ್ತೆ ಹಾಳಾಗದಂತೆ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಡಾಂಬರು ಸಮೇತ ಅಗಲೀಕರಣಕ್ಕೆ ಅವಕಾಶ ನೀಡಬಾರದು ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ(ಎನ್‌ಡಬ್ಲ್ಯೂಬಿ)ಯ ಉಪ ಸಮಿತಿ ಮಾರ್ಗ ಸೂಚಿಗಳನ್ನು ನೀಡಿದೆ.

ಏನಿದು ಯೋಜನೆ?

- ಗುಂಡ್ಲುಪೇಟೆ- ಕೊಯಮತ್ತೂರು ಹೆದ್ದಾರಿ ಅಗಲೀಕರಣಕ್ಕೆ ಯೋಜನೆ

- ಹುಲಿ ಸಂರಕ್ಷಿತ ಅರಣ್ಯದಲ್ಲಿ ಹಾದು ಹೋಗುವ ರಸ್ತೆ ವಿಸ್ತರಣೆಗೆ ಸಿದ್ಧತೆ

- ಬಂಡೀಪುರ ವ್ಯಾಪ್ತಿಯಲ್ಲಿ 13.2 ಕಿ.ಮೀ. ಉದ್ದದ ರಸ್ತೆ ಅಗಲೀಕರಣ

- ಇದಕ್ಕಾಗಿ 9.45 ಹೆಕ್ಟೇರ್‌ ಅರಣ್ಯ ಭೂಮಿ ಕೇಳಿದ ಹೆದ್ದಾರಿ ಪ್ರಾಧಿಕಾರ

- ಕರ್ನಾಟಕ- ತ.ನಾಡಲ್ಲಿ 30 ಕಿ.ಮೀ. ಉದ್ದದ ರಸ್ತೆ ವಿಸ್ತರಣೆ ಪ್ರಸ್ತಾವ

- ಮೊದಲಿಗೆ ಕರ್ನಾಟಕದಲ್ಲಿ ಕಾಮಗಾರಿ ಆರಂಭಕ್ಕೆ ಯತ್ನ: ಆರೋಪ

click me!