ಬಂದ್‌ನಿಂದಾಗಿ ಶಿರಡಿ ಸ್ತಬ್ಧ, 25 ಹಳ್ಳಿಗಳೂ ಬಂದ್‌!

Published : Jan 20, 2020, 08:17 AM ISTUpdated : Jan 20, 2020, 09:52 AM IST
ಬಂದ್‌ನಿಂದಾಗಿ ಶಿರಡಿ ಸ್ತಬ್ಧ,  25 ಹಳ್ಳಿಗಳೂ ಬಂದ್‌!

ಸಾರಾಂಶ

ಬಂದ್‌ನಿಂದಾಗಿ ಶಿರಡಿ ಸ್ತಬ್ಧ| ಶಿರಡಿ ಜತೆ 25 ಹಳ್ಳಿಗಳೂ ಬಂದ್‌| ದೇಗುಲ ಸುತ್ತ ರಾರ‍ಯಲಿ| ದರ್ಶನ ಅಬಾಧಿತ| ಅನಿರ್ದಿಷ್ಟ ಬಂದ್‌ ಯೋಜನೆ ಇಲ್ಲ| ಇಂದು ಮುಂಬೈನಲ್ಲಿ ಉದ್ಧವ್‌ ಠಾಕ್ರೆ ಸಭೆ

ಶಿರಡಿ[ಜ.20]: ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಪಾಥರಿ ಗ್ರಾಮವನ್ನು ಶಿರಡಿ ಸಾಯಿಬಾಬಾ ಅವರ ಜನ್ಮಸ್ಥಳ ಎಂದು ಪರಿಗಣಿಸುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ನಡೆಯನ್ನು ಖಂಡಿಸಿ ಭಾನುವಾರ ನಡೆಸಲಾದ ಶಿರಡಿ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಆದರೆ ದೇವಾಲಯ ಮಾತ್ರ ಎಂದಿನಂತೆ ತೆರೆದಿದ್ದು, ಸಾಯಿಬಾಬಾ ದರ್ಶನವು ಸುರಳೀತವಾಗಿ ನಡೆದಿದೆ.

ವಿವಾದ ದೊಡ್ಡದಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಉದ್ಧವ್‌ ಠಾಕ್ರೆ, ಸೋಮವಾರ ಮುಂಬೈನ ವಿಧಾನಸೌಧದಲ್ಲಿ ಈ ಕುರಿತ ಚರ್ಚೆಗೆ ಮಹತ್ವದ ಸಭೆ ಆಯೋಜಿಸಿದ್ದಾರೆ. ಈ ನಡುವೆ, ‘ಸೋಮವಾರದಿಂದ ಬಂದ್‌ ಇರುವುದಿಲ್ಲ’ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮುಂಚೆ ಅನಿರ್ದಿಷ್ಟಬಂದ್‌ ನಡೆಯಲಿದೆ ಎಂದು ಶಿರಡಿ ಟ್ರಸ್ಟ್‌ನ ಮಾಜಿ ಸದಸ್ಯರೊಬ್ಬರು ಹೇಳಿದ್ದರು.

ಸಾಯಿಬಾಬಾ ಜನ್ಮಸ್ಥಳ ವಿವಾದ, ಶಿರಡಿ ಅನಿರ್ದಿಷ್ಟಾವಧಿ ಬಂದ್!

ಶಿರಡಿ ಜತೆ 25 ಹಳ್ಳಿ ಬಂದ್‌:

ಭಾನುವಾರ ಶಿರಡಿಯಷ್ಟೇ ಅಲ್ಲ, ಸುತ್ತಮುತ್ತಲಿನ 25 ಹಳ್ಳಿಗಳಲ್ಲೂ ಬಂದ್‌ ಆಚರಿಸಲಾಯಿತು. ಬಂದ್‌ ಕಾರಣ ಶಿರಡಿಯಲ್ಲಿ ಅಂಗಡಿ-ಮುಂಗಟ್ಟುಗಳು, ವ್ಯಾಪಾರ ವಹಿವಾಟು, ಖಾಸಗಿ ಹೋಟೆಲ್‌ಗಳು ಮುಚ್ಚಿದ್ದವು. ಸಾರಿಗೆ ಸೇವೆ ಕೂಡ ಕೆಲಮಟ್ಟಿಗೆ ವ್ಯತ್ಯಯವಾಯಿತು. ಶಿರಡಿ ಜನರು ದೇವಾಲಯ ಸುತ್ತ ರಾರ‍ಯಲಿ ನಡೆಸಿದರು.

ಈ ಹಿನ್ನೆಲೆಯಲ್ಲಿ ಶಿರಡಿಗೆ ಆಗಮಿಸಿದ್ದ ಭಕ್ತರು ದೇವಸ್ಥಾನದ ಪ್ರಸಾದಾಲಯದಲ್ಲಿ ಭೋಜನ ಸ್ವೀಕರಿಸಿದರು. ಇನ್ನು ಶಿರಡಿಯ ಜನರೇ ಸ್ವಯಂಪ್ರೇರಿತರಾಗಿ ಯಾತ್ರಾರ್ಥಿಗಳಿಗೆ ಊಟ ಮತ್ತು ನೀರು ನೀಡಿ ಸೌಜನ್ಯ ಮೆರೆದರು.

ವಿವಾದದ ಬಗ್ಗೆ ಮಾತನಾಡಿದ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮಾಜಿ ಸದಸ್ಯ ಸಚಿನ್‌ ತಾಂಬೆ, ‘ಠಾಕ್ರೆ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು. ಪಾಥರಿ ಅಭಿವೃದ್ಧಿಗೆ ನಮ್ಮ ಬೆಂಬಲವಿದೆ. ಆದರೆ ಪಾಥರಿ ಗ್ರಾಮ ಸಾಯಿ ಜನ್ಮಸ್ಥಳ ಎಂಬ ಸಿಎಂ ಘೋಷಣೆ ಬಗ್ಗೆ ಮಾತ್ರ ನಮ್ಮ ವಿರೋಧ. ಸಾಯಿ ಅವರೇ ತಮ್ಮ ಜನ್ಮಸ್ಥಾನ ಪಾಥರಿ ಎಂದು ಯಾವತ್ತೂ ಹೇಳಿರಲಿಲ್ಲ’ ಎಂದಿದ್ದಾರೆ.

ಪ್ರವಾಸಿಗರ ಸಂಖ್ಯೆ ಕುಸಿತ:

ಇದಲ್ಲದೆ, ಭಾನುವಾರ ಸಂಜೆ ಸಚಿವ ಛಗನ್‌ ಭುಜಬಲ್‌ ಅವರು ಶಿರಡಿಗೆ ಆಗಮಿಸಿ ಜನರ ಮನವೊಲಿಕೆಗೆ ಯತ್ನಿಸಿದರು. ‘ವಿವಾದದಿಂದಾಗಿ ಶಿರಡಿಯ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತದೆ. ಭಾನುವಾರವೇ 10 ಸಾವಿರದಷ್ಟುಪ್ರವಾಸಿಗರ ಸಂಖ್ಯೆ ಕುಸಿತವಾಗಿದೆ. ಅನೇಕರು ಹೋಟೆಲ್‌ ಬುಕ್ಕಿಂಗ್‌ ರದ್ದು ಮಾಡಿದ್ದಾರೆ ಎಂದು ಕೇಳಿದ್ದೇನೆ. ಹೀಗಾಗಿ ಇಂತಹ ವಿವಾದಗಳನ್ನು ಸಾಯಿಬಾಬಾ ಕೂಡ ಬಯಸುವುದಿಲ್ಲ. ಬಂದ್‌ ನಡೆಸುವುದನ್ನು ಕೈಬಿಡಿ’ ಎಂದು ಮನವಿ ಮಾಡಿದರು.

‘ಮಾತುಕತೆಯ ಮೂಲಕ ಪಾಥರಿ ಹಾಗೂ ಶಿರಡಿ ಜನರು ಜನ್ಮಸ್ಥಾನ ವಿವಾದವನ್ನು ಬಗೆಹರಿಸಿಕೊಳ್ಳಬೇಕು’ ಎಂದು ಅವರು ಕೋರಿದರು.

ಶಿರಡಿ ಸಾಯಿ ಬಾಬಾ ಮಂದಿರಕ್ಕೆ ದಾಖಲೆಯ 287 ಕೋಟಿ ದೇಣಿಗೆ!

ವಿಶೇಷವೆಂದರೆ ಶಿವಸೇನೆಯ ಸಂಸದ ಸದಾಶಿವ ಲೋಖಂಡೆ ಕೂಡ ಬಂದ್‌ಗೆ ಬೆಂಬಲ ನೀಡಿದರು. ‘16ನೇ ವಯಸ್ಸಿಗೇ ಸಾಯಿಬಾಬಾ ಶಿರಡಿಗೆ ಬಂದರು. ಅವರು ತಮ್ಮ ಜಾತಿ-ಧರ್ಮವನ್ನು ಯಾವತ್ತೂ ಹೇಳಲಿಲ್ಲ. ಅವರ ಹೆಸರಿನಲ್ಲಿ ವಿಭಜನೆ ಬೇಡ. ವಿವಾದದ ಬಗ್ಗೆ ನಾನು ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು