ಜುಲೈ 1ರಿಂದ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ, ಕಠಿಣ ಕ್ರಮಕ್ಕೆ ಸರ್ಕಾರ ಸಜ್ಜು!

Published : Jun 29, 2022, 08:42 AM IST
ಜುಲೈ 1ರಿಂದ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ, ಕಠಿಣ ಕ್ರಮಕ್ಕೆ ಸರ್ಕಾರ ಸಜ್ಜು!

ಸಾರಾಂಶ

* ಜು.1ರಿಂದ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಸಜ್ಜು: ಆ್ಯಪ್‌, ಕಂಟ್ರೋಲ್‌ ರೂಂ, ವಿಶೇಷ ತಂಡ ಸಿದ್ಧ * ಏಕಬಳಕೆ ಪ್ಲಾಸ್ಟಿಕ್‌ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ, ಬಳಕೆ ಎಲ್ಲವೂ ಬ್ಯಾನ್‌ * ನಾಡಿದ್ದಿನಿಂದ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ

ನವದೆಹಲಿ(ಜೂ.29): ಇನ್ನುಮುಂದೆ ತರಕಾರಿ ಅಥವಾ ದಿನಸಿ ತರಲು ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಹಿಡಿದು ಹೊರಗೆ ಹೋಗುವಂತಿಲ್ಲ. ತೀವ್ರತರ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕಬಳಕೆ (ಸಿಂಗಲ್‌ ಯೂಸ್‌) ಪ್ಲಾಸ್ಟಿಕ್‌ ದೇಶಾದ್ಯಂತ ಜು.1ರಿಂದ ನಿಷೇಧವಾಗಲಿದೆ. ಈ ಪ್ಲಾಸ್ಟಿಕ್‌ನ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಹಾಗೂ ಬಳಕೆ ಎಲ್ಲವನ್ನೂ ನಿಷೇಧಿಸಲಾಗಿದೆ. ಈ ಬಾರಿ ಕಟ್ಟುನಿಟ್ಟಾಗಿ ನಿಷೇಧ ಜಾರಿಗೊಳಿಸಲು ಆ್ಯಪ್‌, ಕಂಟ್ರೋಲ್‌ ರೂಮ್‌ಗಳು ಹಾಗೂ ವಿಶೇಷ ತಂಡಗಳೊಂದಿಗೆ ಕೇಂದ್ರ ಸರ್ಕಾರ ಸರ್ವರೀತಿಯಲ್ಲೂ ಸಜ್ಜಾಗಿದೆ.

ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ದೇಶಾದ್ಯಂತ ಪ್ಲಾಸ್ಟಿಕ್‌ ನಿಷೇಧದ ಉಸ್ತುವಾರಿ ನೋಡಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ವಿದೇಶಗಳಿಂದ ಏಕಬಳಕೆಯ ಪ್ಲಾಸ್ಟಿಕ್‌ ಯಾವುದೇ ರೂಪದಲ್ಲೂ ಆಮದಾಗದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಕಸ್ಟಮ್ಸ್‌ ಇಲಾಖೆಗೆ ಸೂಚಿಸಿದೆ. ಅಲ್ಲದೆ, ದೇಶದೊಳಗೂ ಇದನ್ನೂ ಉತ್ಪಾದನೆ ಹಾಗೂ ಬಳಕೆ ಮಾಡದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳು ಹಾಗೂ ವಿಶೇಷ ತಂಡಗಳನ್ನು ಸ್ಥಾಪಿಸಲಾಗಿದೆ.

ಜನರು ದೂರು ನೀಡಲು ಆ್ಯಪ್‌:

ಪ್ಲಾಸ್ಟಿಕ್‌ ನಿಷೇಧದ ನಿಯಮಗಳನ್ನು ಉಲ್ಲಂಘಿಸುವುದು ಕಂಡರೆ ಜನರೇ ದೂರು ನೀಡಲು ಅನುಕೂಲ ಮಾಡಿಕೊಡುವುದಕ್ಕೆ ಆ್ಯಪ್‌ ಬಿಡುಗಡೆ ಮಾಡಲಾಗುತ್ತಿದೆ. ಫೋಟೋ ತೆಗೆದು ಈ ಆ್ಯಪ್‌ನಲ್ಲಿ ಅಪ್‌ಡೇಟ್‌ ಮಾಡಿದರೆ ವಿಶೇಷ ತಂಡಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿವೆ.

19 ರೀತಿಯ ಪ್ಲಾಸ್ಟಿಕ್‌ ನಿಷೇಧ:

2021ರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು 2022ರಿಂದ 19 ರೀತಿಯ ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧಿಸುವ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಪ್ಲಾಸ್ಟಿಕ್‌ ಕಟ್ಲರಿಗಳು, ಸ್ಟ್ರಾಗಳು, ಕಲಕುವ ಕಡ್ಡಿಗಳು, ಚಾಕಲೇಟ್‌ಗಳಲ್ಲಿ ಬಳಸುವ ಪ್ಲಾಸ್ಟಿಕ್‌ ಕಡ್ಡಿಗಳು, ಪ್ಲಾಸ್ಟಿಕ್‌ ಬಲೂನ್‌ಗಳು, ಪ್ಲಾಸ್ಟಿಕ್‌ ಸ್ವೀಟ್‌ ಬಾಕ್ಸ್‌ಗಳು, ಇಯರ್‌ ಬಡ್‌ಗಳು, ಪ್ಯಾಕೇಜಿಂಗ್‌ಗೆ ಬಳಸುವ ತೆಳುವಾದ ಪ್ಲಾಸ್ಟಿಕ್‌ ಹಾಗೂ ಅಲಂಕಾರಕ್ಕೆ ಬಳಸುವ ಪಾಲಿಸ್ಟಿರೀನ್‌ ಮುಂತಾದವು ಜು.1ರಿಂದ ನಿಷೇಧವಾಗಲಿವೆ.

ಪರಿಸರ ಮಾಲಿನ್ಯ ತಡೆಯಲು 2022ರಿಂದ ದೇಶದಲ್ಲಿ ಕಟ್ಟುನಿಟ್ಟಾಗಿ ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ 2019ರಲ್ಲೇ ಘೋಷಿಸಿದ್ದರು.

ಎಷ್ಟುತೆಳುವಾದ ಪ್ಲಾಸ್ಟಿಕ್‌ ನಿಷೇಧ?

ದೇಶದಲ್ಲಿ ಹಲವು ವರ್ಷಗಳಿಂದ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಬಳಕೆಗೆ ನಿಷೇಧವಿದೆ. ಇನ್ನು, 2021ರ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಿಯಮಗಳ ಪ್ರಕಾರ ಕಳೆದ ವರ್ಷದ ಸೆ.30ರಂದು 75 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳು ನಿಷಿದ್ಧವಾಗಿವೆ. ಈ ವರ್ಷದ ಡಿ.31ರೊಳಗೆ 120 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಕ್ಯಾರಿಬ್ಯಾಗ್‌ ಹಾಗೂ ಇನ್ನಿತರ ರೀತಿಯ ಪ್ಲಾಸ್ಟಿಕ್‌ ವಸ್ತುಗಳು ನಿಷೇಧವಾಗಲಿವೆ.

ನಿಯಮ ಉಲ್ಲಂಘಿಸಿದರೆ ಏನು ಶಿಕ್ಷೆ?

ಜು.1ರಿಂದ ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧ ನಿಯಮ ಉಲ್ಲಂಘಿಸಿದರೆ 1986ರ ಪರಿಸರ ಸಂರಕ್ಷಣೆ ಕಾಯ್ದೆಯಡಿ ಐದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರು.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಅಲ್ಲದೆ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮುನ್ಸಿಪಾಲಿಟಿಗಳು ಹೊಂದಿರುವ ಬೇರೆ ಬೇರೆ ನಿಯಮಗಳಡಿ ಮತ್ತು ಇನ್ನಿತರ ಕೆಲ ದಂಡಸಂಹಿತೆಗಳ ಅಡಿಯಲ್ಲೂ ಶಿಕ್ಷೆ ವಿಧಿಸಲು ಸಾಧ್ಯವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇವಲ 1% ಜನರ ಕೈಯಲ್ಲಿ ಭಾರತದ 40% ಸಂಪತ್ತು, ವಿಶ್ವ ಅಸಮಾನತೆ ವರದಿ 2026 ರ ಭಯಾನಕ ಚಿತ್ರ!
ನ್ಯಾಯಾಂಗ ಬೆದರಿಸಿ ಶತಮಾನಗಳ ಕಾರ್ತಿಕ ದೀಪ ಸಂಪ್ರದಾಯ ಮುಗಿಸಲು ಡಿಎಂಕೆ ಯತ್ನ ಬಹಿರಂಗ