ಹುಟ್ಟಿದ ಮರು ದಿನವೇ ಶಸ್ತ್ರಚಿಕಿತ್ಸೆಗಾಗಿ ದಿಲ್ಲಿ ಆಸ್ಪತ್ರೆ ಸೇರಿದ್ದ ಮಗು| ಶಸ್ತ್ರಚಿಕಿತ್ಸೆಗೆ ಒಳಗಾದ ಎಳೆ ಕೂಸಿಗೆ 1000 ಕಿ.ಮೀ ದೂರದಿಂದ ಎದೆಹಾಲು
ನವದೆಹಲಿ(ಜು.18): ಹುಟ್ಟಿದ ಮರು ದಿನವೇ ಶಸ್ತ್ರಚಿಕಿತ್ಸೆಗಾಗಿ ದಿಲ್ಲಿ ಆಸ್ಪತ್ರೆ ಸೇರಿದ್ದ ಮಗುವನ್ನು 1000 ಕಿ.ಮೀ ದೂರದಿಂದ ವಿಮಾನದ ಮೂಲಕ ಎದೆಹಾಲು ತಂದು ಬದುಕಿಸಿದ ಘಟನೆ ನಡೆದಿದೆ.
ಲಡಾಖ್‌ನ ಲೇಹ್ ಮೂಲದ ಜಿಕ್‌ಮೆಟ್ ವಾಂಗ್ಡು ಎಂಬುವರ ಪತ್ನಿ ಕಳೆದ ತಿಂಗಳು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆಗಾಗಿ ಮಗುವನ್ನು ದಿಲ್ಲಿಯ ಮ್ಯಾಕ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವಿಗೆ ಶಸ್ತ್ರಚಿಕಿತ್ಸೆ ಮೂಲಕ ಜನ್ಮ ನೀಡಿ ಬಳಲಿದ್ದ ತಾಯಿ ದಿಲ್ಲಿಗೆ ಬಂದಿರಲಿಲ್ಲ. ಏತನ್ಮಧ್ಯೆ, ತಾಯಿ ಹಾಲಿನಿಂದ ಮಾತ್ರ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದಿದ್ದರು ವೈದ್ಯರು.
ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಕಂದಮ್ಮ ಬಲಿ!
ಇಂಥ ಸಂದರ್ಭದಲ್ಲಿ ದಿಲ್ಲಿ-ಲೇಹ್ ಮಾರ್ಗದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ನೆರವಿನಿಂದಾಗಿ ಪ್ರತೀ ನಿತ್ಯ ಲೇಹ್‌ನಲ್ಲಿರುವ ತಾಯಿ ಹಾಲು ದಿಲ್ಲಿ ಆಸ್ಪತ್ರೆಯಲ್ಲಿರುವ ಕೂಸಿಗೆ ತಲುಪುತ್ತಿದೆ. ಹೀಗಾಗಿ ಹುಟ್ಟಿನಿಂದ ಗಾಳಿ ಮತ್ತು ಆಹಾರ ಪೈಪ್ ಸಂಪರ್ಕಿಸುವ ಜಾಗದಲ್ಲಿನ ಸಮಸ್ಯೆಯಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಗು ಪ್ರಾಣಾಪಾಯದಿಂದ ಬಚಾವಾಗಿದೆ.