
ನವದೆಹಲಿ(ಸೆ.29): 18 ತಿಂಗಳ ಗಂಡು ಶಿಶುವನ್ನು ಅಪಹರಿಸಿ 45 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಕಾರಣಕ್ಕೆ ನಾಲ್ವರು ಪುರುಷರು ಹಾಗೂ ಒಬ್ಬ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಹೋಬಾದಿಂದ ಮಗುವನ್ನು ರಕ್ಷಿಸಲಾಗಿದೆ. ಬಂಧಿತರಲ್ಲಿ 54 ವರ್ಷದ ವ್ಯಕ್ತಿಯೊಬ್ಬರು ಸೇರಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ಆತನಿಗೆ ಗಂಡು ಮಗು ಇಲ್ಲದ ಕಾರಣ, ಆರೋಪಿಗೆ ಹಣ ನೀಡಿ ಮಗುವನ್ನು ಪಡೆದುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆ. 24 ರಂದು ಈ ಘಟನೆಯಾಗಿತ್ತು. ರಸ್ತೆಯಲ್ಲಿ ಹ್ಯಾಂಡಿಕ್ರಾಫ್ಟ್ ವಸ್ತುಗಳನ್ನು ಮಾರಾಟ ಮಾಡುವ ರಾಜಸ್ಥಾನದ ಮುಖೇಶ್ ಎನ್ನುವವರು ತಮ್ಮ ಮಗು ಕಾಣೆಯಾಗಿದೆ ಎಂದು ದೂರು ಕೊಟ್ಟಿದ್ದರು. ತಮ್ಮ ಕುಟುಂಬ ಜಾತ್ರೆಯಲ್ಲಿ ಭಾಗವಹಿಸಿತ್ತು.ನಂತರ ಗಂಗಾ ರಾಮ್ ಆಸ್ಪತ್ರೆಯ ಬಳಿ ಇರುವ ಪುಸಾ ರಸ್ತೆಯ ಫುಟ್‌ಪಾತ್‌ನಲ್ಲಿ ಮಲಗಿದ್ದಾಗ ಮಗು ನಾಪತ್ತೆಯಾಗಿದೆ ಎಂದು ದೂರು ಸಲ್ಲಿಸಿದ್ದರು.
ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡ ರಚಿಸಲಾಗಿತ್ತು. ತನಿಖಾಧಿಕಾರಿಗಳು "100 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ವಿಶ್ಲೇಷಿಸಿದರು ಮತ್ತು ರಾಜೇಂದರ್ ನಗರ, ಪ್ರಸಾದ್ ನಗರ, ಕನ್ನಾಟ್ ಪ್ಲೇಸ್, ಮಂದಿರ ಮಾರ್ಗ ಮತ್ತು ಪಹರ್‌ಗಂಜ್ ಸೇರಿದಂತೆ ಪ್ರದೇಶಗಳಲ್ಲಿ ಮರೆಮಾಚುವ ನಂಬರ್ ಪ್ಲೇಟ್ ಹೊಂದಿರುವ ಸ್ಕೂಟರ್‌ನಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಪತ್ತೆಹಚ್ಚಿದರು" ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ಹೇಳಿದ್ದಾರೆ.
ನಂತರ ಶಂಕಿತರು ಆರ್‌ಎಂಎಲ್ ಆಸ್ಪತ್ರೆಯ ಬಳಿ ಮಗುವನ್ನು ಬಿಳಿ ಕಾರಿನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ನವದೆಹಲಿಯ ಕಾಲಿ ಬಾರಿ ಲೇನ್‌ನಲ್ಲಿ ಪತ್ತೆಹಚ್ಚಲಾಗಿದ್ದು, ಅನಂತ್ (22), ರಾಜು ಅಲಿಯಾಸ್ ರಿಷಿ (24) ಮತ್ತು ಸಾಹಿಲ್ ಕುಮಾರ್ (21) ಎಂದು ಗುರುತಿಸಲಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು 17 ವರ್ಷದ ಬಾಲಕನನ್ನು ಸಹ ಬಂಧಿಸಲಾಗಿದೆ.
"ವಿಚಾರಣೆಯಲ್ಲಿ, ಮಗುವನ್ನು ಮಹೋಬಾದಲ್ಲಿ ಫೂಲನ್ ಶ್ರೀವಾಸ್ ಅಲಿಯಾಸ್ ಸಂತೋಷ್ ಎಂಬಾತನಿಗೆ ಮಾರಾಟ ಮಾಡಲಾಗಿದೆ ಎಂದು ಬಹಿರಂಗಪಡಿಸಿದರು, ಆತನನ್ನೂ ಬಂಧಿಸಲಾಗಿದೆ" ಎಂದು ವಲ್ಸನ್ ತಿಳಿಸಿದ್ದಾರೆ. ಶಿಶುವನ್ನು ಮಹೋಬಾದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಕುಟುಂಬಕ್ಕೆ ಅಪಾರ ಸಮಾಧಾನ ತಂದಿದೆ. ಪೊಲೀಸರು ಸ್ಕೂಟರ್, ಅಪರಾಧಕ್ಕೆ ಬಳಸಲಾದ ಕಾರು ಮತ್ತು 5,500 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳಿರುವ ಶ್ರೀವಾಸ್, ಗಂಡು ಮಗುವನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದ ಮತ್ತು ಮಗುವನ್ನು ಅಪಹರಿಸುವ ಯೋಜನೆ ರೂಪಿಸಿದ ದೆಹಲಿ ಮೂಲದ ಆರೋಪಿಗೆ 1 ಲಕ್ಷ ರೂ.ವರೆಗೆ ನೀಡುವುದಾಗಿ ಹೇಳಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.ಅವರು ಕರೋಲ್ ಬಾಗ್ ನಿಂದ ಬಾಲಕನನ್ನು ಅಪಹರಿಸಿ ಶ್ರೀವಾಸ್ ಗೆ 45,000 ರೂ.ಗೆ ಮಾರಾಟ ಮಾಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ