ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಸುದೀರ್ಘ ಭಾಷಣ ಮಾಡಿದ್ದಾರೆ.
ದೇಶದಲ್ಲಿಂದು ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವದ ಕಿಚ್ಚು ಕಾಣಿಸುತ್ತಿದೆ. ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ದೇಶ ಸ್ವಾತಂತ್ರ್ಯ ಪಡೆಯಲು ಪಟ್ಟ ಕಷ್ಟಗಳ ಬಗ್ಗೆ ಮಾತನಾಡಿದರು. ಹಾಗೂ, ದೇಶದ ಕನಸಿನ ಬಗ್ಗೆ, ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಹೊಸ ಘೋಷ ವಾಕ್ಯವನ್ನು ಹುಟ್ಟುಹಾಕಿದ್ದಾರೆ.
ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್, ಜೈ ಕಿಸಾನ್ ಎಂದು ಹೇಳಿದ್ದರು. ನಂತರ, ಅಟಲ್ ಬಿಹಾರಿ ವಾಜಪೇಯಿ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಘಾನ್ ಎಂದು ಹೇಳಿದ್ದರು. ಪ್ರಧಾನಿ ಮೋದಿ ತಮ್ಮ ಇಂದಿನ ಭಾಷಣದಲ್ಲಿ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಘಾನ್ ಹಾಗೂ ಜೈ ಅನುಸಂಧಾನ್ ಎಂದು ಹೇಳಿ ಹೊಸ ಘೋಷ ವಾಕ್ಯವನ್ನೇ ಮೋದಿ ತಮ್ಮ ಭಾಷಣದ ವೇಳೆ ಹೇಳಿದ್ದಾರೆ.
undefined
ಇದನ್ನು ಓದಿ: Indian Independence Day: ನಮ್ಮ ತಿರಂಗಕ್ಕೆ ಇರುವ ಶಕ್ತಿ, ಅಮೃತ ಮಹೋತ್ಸವದಲ್ಲಿ ಅನಾವರಣಗೊಂಡಿದೆ: ಮೋದಿ...
ಇನ್ನು, ದಂಡಿಯಾತ್ರೆ ಮೂಲಕ ಆರಂಭವಾದ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶದ ಮೂಲೆ, ಮೂಲೆಗೂ ಹಬ್ಬಿತು. ಆದಿವಾಸಿ ನಾಯಕರು ಅರಣ್ಯದಲ್ಲಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯ ಹೋರಾಟದ ಎಲ್ಲ ಬಗೆಯಲ್ಲೂ ಇಡೀ ದೇಶ ಪಾಲ್ಗೊಂಡಿದ್ದು ನಮ್ಮ ಸೌಭಾಗ್ಯ ಎಂದೂ ಹೇಳಿದರು. ಅಲ್ಲದೆ, ನೆಹರೂ, ವಲ್ಲಭಬಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಶ್ಯಾಮ್ ಪ್ರಸಾದ್ ಮುಖರ್ಜಿ, ಲೋಹಿಯಾ ಉಪಾಧ್ಯ, ವಿನೋಬಾಭಾವೆ ಸೇರಿ ಮಹಾ ಪುರುಷರಿಗೆ ನಮನ ಸಲ್ಲಿಸುವ ದಿನ ಎಂದರು.
ಹಾಗೂ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ವೀರ್ ಸಾವರ್ಕರ್ ಅವರಿಗೆ ದೇಶದ ಜನರು ಕೃತಜ್ಞರಾಗಿದ್ದಾರೆ. ಮಂಗಲಪಾಂಡೆ, ತಾತ್ಯಾಟೋಪಿ, ಭಗತ್ ಸಿಂಗ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾಹ್ ಖಾನ್ ಮುಂತಾದ ಕ್ರಾಂತಿವೀರರಿಗೆ ದೇಶದ ಕೃತಜ್ಞತೆ ಇದೆ ಎಂದೂ ಹೇಳಿದರು. ಬ್ರಿಷಟಿರ ವಿರುದ್ಧ ಹೋರಾಡಿದ ಈ ಎಲ್ಲ ಕ್ರಾಂತಿವೀರರಿಗೆ ದೇಶ ಋಣಿಯಾಗಿದೆ. ರಾಣಿ ಲಕ್ಷ್ಮೀಬಾಯಿ, ದುರ್ಗಾಬಾಯಿ, ರಾತ್ರಿ ಚೆನ್ನಮ್ಮ, ಬೇಗಂ ಹಝರತ್ ಸೇರಿದಂತೆ ಭಾರತೀಯ ನಾರೀ ಶಕ್ತಿ , ಸ್ವಾತಂತ್ರ್ಯಕ್ಕಾಗಿ ಸಮಾನವಾಗಿ ಹೋರಾಡಿತು ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
‘ನಮ್ಮ ತಿರಂಗ’ ಇಂದು ಸಂಭ್ರಮದಿಂದ ಹಾರಾಡುತ್ತಿದೆ. ಇದು ಐತಿಹಾಸಿಕ ದಿನ, ಹೊಸ ಸಂಕಲ್ಪ, ಹೊಸ ಸಾಮರ್ಥ್ಯದಿಂದ ಹೊಸ ಹೆಜ್ಜೆ ಇಡುವ ದಿನ. ಸ್ವಾತಂತ್ರ್ಯ ಹೋರಾಟದ ಮೂಲದ ಗುಲಾಮಗಿರಿಯಿಂದ ಹೊರಬಂದಿದ್ದೇವೆ. ದೇಶದ ಮೂಲೆ, ಮೂಲೆಯಲ್ಲೂ ಗುಲಾಮಗಿರಿಯ ವಿರುದ್ಧ ಹೋರಾಟ ನಡೆಯಿತು. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಭಾರತೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರಿಗೆ ನಮನ ಸಲ್ಲಿಸುವ ದಿನ ತ್ಯಾಗ, ಬಲಿದಾನ ಮಾಡಿದವರ ಆಸೆ, ಕನಸುಗಳನ್ನು ಈಡೇರಿಸುವ ಸಂಕಲ್ಪ ತೊಡಬೇಕಿದೆ ಎಂದೂ ಕೆಂಪುಕೋಟೆಯಲ್ಲಿ ಮೋದಿ ತಿಳಿಸಿದ್ದಾರೆ.
75 ವರ್ಷದಲ್ಲಿ ಅನೇಕ ಏಳು- ಬೀಳು, ಕಷ್ಟಗಳನ್ನು ಎದುರಿಸಿದ್ದೇವೆ. ಇವೆಲ್ಲದರ ಮಧ್ಯೆ, 75 ವರ್ಷದಲ್ಲಿ ದೇಶದ ಸಂಕಲ್ಪ ಈಡೇರಿಸಲು ಶ್ರಮಿಸಿದ ಸೈನಿಕರು, ಕಾರ್ಮಿಕರು, ಪೊಲೀಸರು, ಜನಪ್ರತಿನಿಧಿಗಳು ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುವ ದಿನವಿದು ಎಂದೂ ಮೋದಿ ಧ್ವಜಾರೋಹಣದ ಬಗ್ಗೆ ಹೇಳಿದರು.
ಹಾಗೆ, ಪಂಚ ಪ್ರಾಣಗಳ ಈಡೇರಿಕೆಗೆ ಸಂಕಲ್ಪ ತೊಡೋಣ ಎಂದೂ ಮೋದಿ ಹೇಳಿದರು. ಆ ಪಂಚಪ್ರಾಣಗಳು ಹೀಗಿವೆ..
1. ಇಡೀ ದೇಶದ ಅಭಿವೃದ್ಧಿಗೆ ಸಂಕಲ್ಪ
2. ಗುಲಾಮಿತನದ ಮನಸ್ಥಿತಿಯಿಂದ ಹೊರಬರೋಣ. ಗುಲಾಮಿತನದ ಒಂದೇ ಒಂದು ಅಂಶವಿದ್ದರೂ ಅದನ್ನು ಕಿತ್ತೊಗೆಯೋಣ
3. ನಮ್ಮ ಪರಂಪರೆಯ ಬಗ್ಗೆ ಎಲ್ಲವೂ ಗರ್ವ ಪಡುವಂತೆ ಮಾಡೋಣ
4. ಏಕತೆಯಿಂದ ಬದುಕೋಣ.
ಎಲ್ಲರೂ ಒಂದೇ ಎಂಬ ಏಕತೆ ಕಾಪಾಡಿಕೊಳ್ಳೋಣ
5. ನಾಗರಿಕರ ಕರ್ತವ್ಯ ಮರೆಯದಿರೋಣ.
ಕರ್ತವ್ಯ ನಿಭಾಯಿಸುವಲ್ಲಿ ಪ್ರಧಾನಿ, ಸಿಎಂ ಹೊರತಲ್ಲ. ಎಲ್ಲರೂ ತಮ್ಮ ಕರ್ತವ್ಯ ಮರೆಯಬಾರದು. ಸಂಕಲ್ಪ ಶಕ್ತಿಯೇ ಅತಿದೊಡ್ಡ ಶಕ್ತಿ ಎಂಬುದನ್ನು ತೋರಿಸಬೇಕಿದೆ. ಭಾರತದಲ್ಲಿ ಇಂದು ರಾಜಕೀಯ ಸ್ಥಿರತೆ ಇದೆ. ಭಾರತವನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. 2047ರ ಸ್ವಾತಂತ್ರ್ಯೋತ್ಸವ ಶತಮಾನೋತ್ಸವಕ್ಕೆ ಎಲ್ಲ ಹೋರಾಟಗಾರರ ಕನಸು ನನಸಾಗಿಸುವ ಪಣ ತೊಡೋಣ ಎಂದು ಕೆಂಪುಕೋಟೆಯಲ್ಲಿ ಮೋದಿ ಹೇಳಿದರು.