ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೂ ಮುನ್ನ ಏಷ್ಯಾನೆಟ್ ನ್ಯೂಸ್ ಅಯೋಧ್ಯೆಗೆ ತೆರಳಿದೆ. ಮಹಾ ಕಾರ್ಯಕ್ರಮಕ್ಕೆ ಅಯೋಧ್ಯೆ ಹೇಗೆ ತಯಾರಾಗುತ್ತಿದೆ ಎನ್ನುವ ವಿವರಗಳು ಇಲ್ಲಿವೆ.
ಅಯೋಧ್ಯೆ (ಡಿ.15): ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22 ರಂದು ನಡೆಯಲಿದೆ. ಈಗಾಗಲೇ ಈ ಕಾರ್ಯಕಮಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ 4 ಸಾವಿರ ಸಂತರು ಸೇರಿದಂತೆ 7 ಸಾವಿರ ಜನರಿಗೆ ಆಹ್ವಾನ ನೀಡಲಾಗಿದೆ. ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇಡಲಾಗಿದೆ. ಹೀಗಿರುವಾಗ ರಾಮನ ನಗರಕ್ಕೆ ಬರಲಿರುವ ಅತಿಥಿಗಳಿಗೆ ಉಳಿಯಲು ಎಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇರಬಹುದು. ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಬರುವ ಜನರಿಗೆ 3 ಸ್ಥಳಗಳಲ್ಲಿ (ಕರಸೇವಕಪುರಂ, ಮಣಿರಾಮ್ ದಾಸ್ ಕಂಟೋನ್ಮೆಂಟ್ ಮತ್ತು ಬಾಗ್ ಬಿಜೆಸಿ) ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಮತ್ತೊಂದೆಡೆ, 3 ಸ್ಥಳಗಳಲ್ಲಿ (ಬ್ರಹ್ಮಕುಂಡ್ ಗುರುದ್ವಾರ, ಸರಯು ಬೀಚ್ ಮತ್ತು ಗುಪ್ತರ್ ಘಾಟ್) ಸ್ಥಳೀಯ ಆಡಳಿತದಿಂದ ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ. ರಾಮಲಲ್ಲಾನ ಜೀವನದ ದೃಷ್ಟಿಯಿಂದ ಬ್ರಹ್ಮಕುಂಡ್ ಗುರುದ್ವಾರದ ಬಳಿ ಟೆಂಟ್ ಸಿಟಿಯನ್ನು ನಿರ್ಮಿಸಲಾಗಿದೆ ಎಂದು ಪಾಲಿಕೆ ಆಯುಕ್ತ ವಿಶಾಲ್ ಸಿಂಗ್ ಹೇಳುತ್ತಾರೆ.
ಟೆಂಟ್ ಸಿಟಿಯಲ್ಲಿ ಅಯೋಧ್ಯೆಯ ಸಾಂಸ್ಕೃತಿಕ ನೋಟ: ರಾಮ ಮಂದಿರದಿಂದ ಸುಮಾರು 600 ಮೀಟರ್ ದೂರದಲ್ಲಿರುವ ಬ್ರಹ್ಮಕುಂಡ್ ಗುರುದ್ವಾರದ ಬಳಿ ನಿರ್ಮಿಸಲಾದ ಟೆಂಟ್ ಸಿಟಿಯನ್ನು ಪ್ರವೇಶಿಸಿದ ತಕ್ಷಣ, ಭಗವಾನ್ ಶ್ರೀರಾಮನ ಚರಣ ಪಾದುಕೆ ಮತ್ತು ಭವ್ಯವಾದ ದೀಪಾಲಂಕಾರವು ಖಂಡಿತಾ ಎಲ್ಲರ ಗಮನಸೆಳೆಯಲಿದೆ. ಟೆಂಟ್ ಸಿಟಿ ಮಾಡುವ ಗುಜರಾತ್ ನ ಪ್ರವೇಗ್ ಕಂಪನಿಯ ಉದ್ಯೋಗಿ ನಿತಿನ್ ಯಾದವ್ ಈ ಬಗ್ಗೆ ಮಾತನಾಡಿದ್ದಯ, ಟೆಂಟ್ ಸಿಟಿಯಲ್ಲಿ ಸಾಂಸ್ಕೃತಿಕ ಸಂಕೇತಗಳಿಗೆ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ ಎನ್ನುತ್ತಾರೆ. ಪ್ರವೇಶ ದ್ವಾರದಿಂದ ಹಿಡಿದು ಡೇರೆಗಳಿಂದ ನಿರ್ಮಿಸಲಾದ ಐಷಾರಾಮಿ ಕೊಠಡಿಗಳವರೆಗೆ ಅಯೋಧ್ಯೆಯ ಸಾಂಸ್ಕೃತಿಕ ನೋಟವು ಗೋಚರಿಸುತ್ತದೆ. ಸಂಕೀರ್ಣದಲ್ಲಿ ಹಚ್ಚ ಹಸಿರಿನ ಹುಲ್ಲುಹಾಸಿನ ಎರಡೂ ಬದಿಗಳಲ್ಲಿ ಒಟ್ಟು 30 ಐಷಾರಾಮಿ ಕೊಠಡಿಗಳನ್ನು ಸಾಲಾಗಿ ನಿರ್ಮಿಸಲಾಗಿದೆ. ಇದು ಎಸಿಯಿಂದ ಗೀಸರ್‌ವರೆಗೆ ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿದೆ. ಪ್ರತಿ ಕೋಣೆಯ ಪಕ್ಕದಲ್ಲಿ ಸ್ನಾನಗೃಹಗಳು ಮತ್ತು ಶೌಚಾಲಯಗಳಿವೆ. ಹುಲ್ಲುಹಾಸಿನಲ್ಲೂ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
10 ವರ್ಷಗಳಿಗೆ ಗುತ್ತಿಗೆ: ಈ ಟೆಂಟ್ ಸಿಟಿಯು ಸರಿಸುಮಾರು 8000 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿದೆ ಎಂದು ನಿತಿನ್ ತಿಳಿಸಿದ್ದಾರೆ. ಈ ಭೂಮಿಯನ್ನು 10 ವರ್ಷಗಳ ಗುತ್ತಿಗೆಗೆ ತೆಗೆದುಕೊಳ್ಳಲಾಗಿದೆ. ಅಂದರೆ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರವೂ ಈ ಟೆಂಟ್ ಸಿಟಿ ಇರಲಿದೆ. ಪ್ರತಿ ಟೆಂಟ್‌ನಲ್ಲಿ ಇಬ್ಬರು ವ್ಯಕ್ತಿಗಳಿಗೆ ವಸತಿ ವ್ಯವಸ್ಥೆ ಇದೆ. ಆದರೆ ಅಗತ್ಯವಿದ್ದರೆ, ಮೂರು ಜನರು ಕೂಡ ಉಳಿದುಕೊಳ್ಳಬಹುದು. ಊಟದ ಹಾಲ್ ಕೂಡ ಇದ್ದು, ಇಲ್ಲಿ ತಂಗುವವರಿಗೆ ಹೋಟೆಲ್‌ನಂತಹ ಸೌಲಭ್ಯಗಳು ಸಿಗುತ್ತವೆ.
ಸರಯೂ ದಂಡೆಯಲ್ಲಿ 35 ರೂಮ್‌ಗಳ ಟೆಂಟ್ ಸಿಟಿ: ಸರಯೂ ತೀರದ ದಡದಲ್ಲಿರುವ ರಾಮಕಥಾ ವಸ್ತುಸಂಗ್ರಹಾಲಯದ ಹಿಂದೆ ಕೂಡ ಟೆಂಟ್ ಸಿಟಿಯನ್ನೂ ನಿರ್ಮಿಸಲಾಗುತ್ತಿದೆ. ಇದರಲ್ಲಿ 35 ಐಷಾರಾಮಿ ಕೊಠಡಿಗಳು ಇರಲಿದ್ದು, ಹೋಟೆಲ್‌ನಂತಹ ಸೌಲಭ್ಯಗಳೂ ಇರುತ್ತವೆ. ಡಿಸೆಂಬರ್ 15 ರಿಂದ ಆನ್‌ಲೈನ್ ಬುಕಿಂಗ್ ಪ್ರಾರಂಭವಾಗಲಿದೆ ಎಂದು ನಿತಿನ್ ಯಾದವ್ ಹೇಳುತ್ತಾರೆ. ಯಾರು ಬೇಕಾದರೂ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಕೊಠಡಿಗಳನ್ನು ಬುಕ್ ಮಾಡಬಹುದು. ಈ ಟೆಂಟ್ ಸಿಟಿ ವಿವಿಐಪಿಗಳಿಗೆ ಮಾತ್ರವೇ ಅಲ್ಲ. ಟೆಂಟ್ ಸಿಟಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಗಳೂ ಇದೆ. ಅಲ್ಲಿ ರಾಮಲೀಲಾ ಪ್ರದರ್ಶನವೂ ನಡೆಯಲಿದೆ. ಈ ಸಿಟಿಗೆ ಬಂದ ತಕ್ಷಣ ರಾಮ್‌ಧುನ್ ಕೇಳಿಸಲಿದೆ ಎನ್ನೋದು ನಿತಿನ್ ಅವರ ಮಾತು.
9000 ರೂ.ಗೆ ಬುಕ್ಕಿಂಗ್: ಬ್ರಹ್ಮಕುಂಡ್ ಟೆಂಟ್ ಸಿಟಿಯಲ್ಲಿ ಒಂದು ರಾತ್ರಿಗೆ 9 ಸಾವಿರಕ್ಕೆ ರೂಮ್ ಬುಕ್ ಮಾಡಬಹುದು. ಕುರ್ಚಿಯೊಂದಿಗೆ ಡ್ರೆಸ್ಸಿಂಗ್ ಟೇಬಲ್, ಸೋಫಾ ಸೆಟ್, ಸಣ್ಣ ಫ್ರಿಡ್ಜ್, ಟಿವಿ, ಟೀ ಮತ್ತು ಕಾಫಿ ಮೇಕರ್ ಜೊತೆಗೆ ಎಲೆಕ್ಟ್ರಿಕ್ ಕೆಟಲ್, ಬಿಸಿನೀರಿನ ಶವರ್, ಲಗೇಜ್ ಮತ್ತು ಶೂ ರ್ಯಾಕ್, ಸೆಕ್ಯುರಿಟಿ ಲಾಕರ್, ರೂಮ್ ಹೀಟರ್, ಇಂಟರ್‌ಕಾಮ್ ಸೌಲಭ್ಯ ಲಭ್ಯವಿರುತ್ತದೆ.
ಬಿಜೇಸಿಯಲ್ಲಿ ಸಾಧು-ಸಂತರ ವಾಸ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ರಾಮ ಮಂದಿರದ ಬಳಿಯ ಕರಸೇವಕ ಪುರಂನಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಟೆಂಟ್ ಸಿಟಿ ಸಿದ್ಧವಾಗಿದೆ. ಟಿನ್ ಶೀಟ್‌ಗಳಿಂದ ಸುತ್ತುವರಿದ ಕೋಣೆಗಳ ಸಾಲುಗಳಲ್ಲಿ ತಲಾ 10 ಹಾಸಿಗೆಗಳಿವೆ. ಇಲ್ಲಿ 1000 ಮಂದಿ ತಂಗಲು ಅವಕಾಶವಿದೆ ಎನ್ನುತ್ತಾರೆ ಅಲ್ಲಿದ್ದ ನೌಕರರು. ಮಣಿಪರ್ವತ ಸಮೀಪದ ಬಾಗ್ ಬಿಜೆಸಿಯಲ್ಲಿ 25 ಎಕರೆಯಲ್ಲಿ ಟೆಂಟ್ ಸಿಟಿ ನಿರ್ಮಾಣ ನಡೆಯುತ್ತಿದೆ. ದೇವಾಲಯದಿಂದ ಇದರ ದೂರ ಸುಮಾರು ಒಂದು ಕಿಲೋಮೀಟರ್. ಇಲ್ಲಿ 15000 ಜನರಿಗೆ ತಂಗಲು ವ್ಯವಸ್ಥೆ ಇದೆ. ಈ ಡೇರೆ ನಗರವನ್ನು 5 ನಗರಗಳಾಗಿ ವಿಂಗಡಿಸಲಾಗಿದೆ. ಇಡೀ ಟೆಂಟ್ ಸಿಟಿಯಲ್ಲಿ 4 ರಿಂದ 5 ರೆಸ್ಟೋರೆಂಟ್‌ಗಳು ಇರುತ್ತವೆ. ಪ್ರಾಣ ಪ್ರತಿಷ್ಠೆಗೆ ಆಹ್ವಾನ ಪಡೆದಿರುವ ಸಂತರು ಮತ್ತು ಸಾಧುಗಳಿಗೆ ಅಲ್ಲಿ ವಸತಿ ಕಲ್ಪಿಸಲಾಗುವುದು. ಹವನ ಕುಂಡಗಳನ್ನೂ ನಿರ್ಮಿಸಲಾಗುತ್ತಿದೆ. ರಾಮಮಂದಿರದಿಂದ 500 ಮೀಟರ್ ದೂರದಲ್ಲಿರುವ ಮಣಿರಾಮ್ ದಾಸ್ ಕಂಟೋನ್ಮೆಂಟ್‌ನಲ್ಲಿರುವ ಟೆಂಟ್ ಸಿಟಿಯಲ್ಲಿ 1200 ರಿಂದ 1500 ಜನರಿಗೆ ಅವಕಾಶ ಕಲ್ಪಿಸಲಾಗಿದೆ.
ಅಯೋಧ್ಯೆ ರಾಮಮಂದಿರದಲ್ಲಿ ಅಕ್ಷತೆ ಪೂಜೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ
ಗುಪ್ತರ್ ಘಾಟ್‌ನಲ್ಲಿ 20 ಎಕರೆಯಲ್ಲಿ 300 ಟೆಂಟ್‌ಗಳು: ಗುಪ್ತರ್ ಘಾಟ್‌ನಲ್ಲಿ 20 ಎಕರೆ ಪ್ರದೇಶದಲ್ಲಿ 300 ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ (ಎಡಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಟೆಂಟ್‌ನಲ್ಲಿ ಎರಡರಿಂದ ಮೂರು ಜನರು ಉಳಿಯಬಹುದು. ಅದರಂತೆ, ಸರಿಸುಮಾರು 1000 ಅತಿಥಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿದೆ. ಮಹಾನಗರ ಪಾಲಿಕೆಯೂ 5000 ಜನರಿಗೆ ವಸತಿ ವ್ಯವಸ್ಥೆ ಮಾಡುತ್ತಿದೆ. ಅಯೋಧ್ಯೆಯಲ್ಲಿ ಒಟ್ಟು 12ರಿಂದ 15 ಸಾವಿರ ಮಂದಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.