ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ 'ಕೊಳಕು ಹಿಂದೂ ಧರ್ಮ' ಪಾಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಧರ್ಮವನ್ನು ಅನುಸರಿಸುತ್ತಿದ್ದೇನೆ ಎಂದಿದ್ದಾರೆ. ಬಿಜೆಪಿ ಮತ್ತು ಎಡಪಕ್ಷಗಳು ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ದೀದಿ ಹೇಳಿದ್ದಾರೆ.
ಕೋಲ್ಕತಾ (ಏ.1): ‘ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ. ಅವರು ಧರ್ಮಗಳ ನಡುವೆ ವಿಷ ಬೀಜ ಭಿತ್ತುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ರಂಜಾನ್ ಅಂಗವಾಗಿ ಕೋಲ್ಕತಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ನಾನು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಧರ್ಮವನ್ನು ಅನುಸರಿಸುತ್ತಿದ್ದೇನೆ. ಆದರೆ ಅವರು (ಬಿಜೆಪಿ) ಕೊಳಕು ಧರ್ಮವನ್ನು ಅನುಸರಿಸುತ್ತಿದ್ದಾರೆ. ಅವರ ಧರ್ಮ ನಿಜವಾದ ಹಿಂದುತ್ವದ ವಿರುದ್ಧವಾಗಿದೆ ಎಂದು ಆರೋಪಿಸಿದರು. ರಾಮ್ ಮತ್ತು ಬಾಮ್ (ಬಿಜೆಪಿ ಮತ್ತು ಎಡಪಕ್ಷಗಳು) ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ. ಆದರೆ ನಾನು ಅವಕಾಶ ನೀಡುವುದಿಲ್ಲ. ನಾನು ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ’ ಎಂದರು.
ಇದನ್ನೂ ಓದಿ: ಅಕ್ರಮ ಬಾಂಗ್ಲಾದೇಶಿಯರ ಬಳಿ ಬಂಗಾಳದ ಆಧಾರ ಕಾರ್ಡ್ ಪತ್ತೆ! ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ಗಂಭೀರ ಆರೋಪ!
ಬಿಜೆಪಿ ಕಿಡಿ:
ಸಿಎಂ ಮಮತಾ ಹೇಳಿಕೆಗೆ ಪ್ರತಿಕ್ರಿಯಸಿದ ಬಂಗಾಳ ಬಿಜೆಪಿ ಅಧ್ಯಕ್ಷ, ವಿಪಕ್ಷ ನಾಯಕ ಸುವೇಂದು ಅಧಿಕಾರಿ, ಕೊಳಕು ಧರ್ಮ ಯಾವುದಿದೆ? ಈ ಹಿಂದೆ ಹಿಂದೂಗಳ ಮೇಲೆ ಮಮತಾ ನಡೆಸಿದ ದಾಳಿಗಳ ಬಗ್ಗೆ ನೆನಪಿಲ್ಲವೇ. ಸಿಎಂ ಮಮತಾ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
'ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕೆಂದು ನಾನು ವಿನಂತಿಸುತ್ತೇನೆ. ಅವರು ಯಾವುದೇ ಗಲಭೆಯನ್ನು ಪ್ರಚೋದಿಸಲು ಅವಕಾಶ ನೀಡಬೇಕೆಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ನಾವು ಯಾರಿಗೂ ಗಲಭೆಯನ್ನು ಪ್ರಚೋದಿಸಲು ಬಿಡುವುದಿಲ್ಲ. ಅವರ ಕೆಲಸ ಗಲಭೆ ಸೃಷ್ಟಿಸುವುದು; ನನ್ನ ಕೆಲಸ ಅವರನ್ನು ತಡೆಯುವುದು" ಎಂದು ಬ್ಯಾನರ್ಜಿ ಹೇಳಿದರು.
ಇನ್ನು ಬಿಜೆಪಿ ಸಂಸದ ಸಾಮಿಕ್ ಭಟ್ಟಾಚಾರ್ಯ ಅವರು ಕಿಡಿಕಾರಿದ್ದು, ಬ್ಯಾನರ್ಜಿ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ವಾಗ್ದಾಳಿ ನಡೆಸಿದ ಅವರು, 'ಮಮತಾ ಹಿಂದೂ ವಿರೋಧಿ' ಎಂದು ಆರೋಪಿಸಿದರು.
ಮಮತಾ ಬ್ಯಾನರ್ಜಿ ಹಿಂದೂಗಳ ವಿರುದ್ಧ ಇದ್ದಾರೆ. ಅವರು ತುಷ್ಟೀಕರಣದಲ್ಲಿ ತೊಡಗಿದ್ದಾರೆ ಮತ್ತು ಹೇಗಾದರೂ ಮಾಡಿ ಶೇಕಡಾ 30 ರಷ್ಟು ಮುಸ್ಲಿಂ ಮತಗಳನ್ನು ಪಡೆಯಲು ಇಂಥ ಹೇಳಿಕೆ ನೀಡುತ್ತಿದ್ದಾರೆ. ಈದ್ ದಿನದಂದು ಯಾವ ಮುಖ್ಯಮಂತ್ರಿ ಹೀಗೆ ಮಾಡುತ್ತಾರೆ? ನನಗೆ ಒಂದು ಉದಾಹರಣೆ ಕೊಡಿ. ಮಮತಾ ಬ್ಯಾನರ್ಜಿ ಗಲಭೆಯನ್ನು ಪ್ರಚೋದಿಸಲು ಬಯಸುತ್ತಾರೆ. ಬಿಜೆಪಿ ವಿಭಜನೆ ಆಗಲು ಬಿಡುವುದಿಲ್ಲ' ಎಂದು ಅವರು ಹೇಳಿದರು.
ಆಕೆ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣರನ್ನು ಕೀಳಾಗಿ ನೋಡುತ್ತಿದ್ದಾಳೆ. ಈ ಹಿಂದೆ ದೇವಾಲಯಗಳನ್ನು ಒಡೆಯಿರಿ ಎಂದು ಹೇಳಿದ್ದಾರಲ್ಲ? ಅದ್ಹೇಗೆ ರಾಮಕೃಷ್ಣ, ವಿವೇಕಾನಂದರ ಧರ್ಮ ಪಾಲಿಸುತ್ತಾಳೆ? ಎಂದು ಕಿಡಿಕಾರಿದರು.
ಮಮತಾ ಬ್ಯಾನರ್ಜಿ ಹೇಳಿಕೆ ಸರಿಯಿದೆ:
ತೃಣಮೂಲ ಕಾಂಗ್ರೆಸ್ ಬ್ಯಾನರ್ಜಿಯವರ ಹೇಳಿಕೆಯನ್ನು ಬೆಂಬಲಿಸಿದೆ. ಮಮತ ಬ್ಯಾನರ್ಜಿ ಭಾಷಣವನ್ನು ಬಿಜೆಪಿ ತಿರುಚಿದೆ ಎಂದು ಆರೋಪಿಸಿದೆ. ಟಿಎಂಸಿ ನಾಯಕ ಕುನಾಲ್ ಘೋಷ್ ಮಾತನಾಡಿ, ಬ್ಯಾನರ್ಜಿಯವರ ಭಾಷಣವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ. 'ಮುಖ್ಯಮಂತ್ರಿ ಹೇಳಿದ್ದು ಸಂಪೂರ್ಣವಾಗಿ ಸರಿಯಿದೆ. ಬಿಜೆಪಿ ಮಮತಾ ಬ್ಯಾನರ್ಜಿ ಹೇಳಿದ್ದನ್ನು ತಿರುಚುತ್ತಿದೆ ಮತ್ತು ಸುಳ್ಳು ಸೃಷ್ಟಿಸಲು ಯತ್ನಿಸುತ್ತಿದೆ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಹಿಂದೂ ಧರ್ಮವನ್ನು ನಾವೆಲ್ಲರೂ ಒಪ್ಪುತ್ತೇವೆ. ಆದರೆ ಇಂದು ಬಿಜೆಪಿ ಏನು ಮಾಡ್ತಿದೆ? ಪಕ್ಷಪಾತದ ರಾಜಕೀಯ, ಮತ ಮಾರುಕಟ್ಟೆ, ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ನಾವು ಇಂಥ ವಿಕೃತ ಹಿಂದೂ ಧರ್ಮವನ್ನು ಬೆಂಬಲಿಸುವುದಿಲ್ಲ. ನಾವು ಮೂಲ ಹಿಂದೂ ಧರ್ಮವನ್ನು ಬೆಂಬಲಿಸುತ್ತೇವೆ ಎಂದು ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಯೋಗಿ ಆದಿತ್ಯನಾಥ್ ಸವಾಲು
ಬಿಜೆಪಿ ಹಿಂದೂಗಳಿಗೂ ಒಳ್ಳೇದಲ್ಲ, ಮುಸ್ಲಿಮರಿಗೂ ಒಳ್ಳೆಯದಲ್ಲ:
ಮಮತಾ ಬ್ಯಾನರ್ಜಿ ಬ್ರಾಹ್ಮಣ ಕುಟುಂಬದಿಂದ ಬಂದವರು ಮತ್ತು ಅವರು ಜಾತ್ಯತೀತರು ಮತ್ತು ಎಲ್ಲಾ ಧರ್ಮಗಳ ಜನರನ್ನು ಬೆಂಬಲಿಸುತ್ತಾರೆ. ಬಿಜೆಪಿ ಹಿಂದೂಗಳಿಗೂ ಒಳ್ಳೆಯದಲ್ಲ ಅಥವಾ ಅಲ್ಪಸಂಖ್ಯಾತರಿಗೂ ಒಳ್ಳೆಯದಲ್ಲ. ಅವರು ಮತ ಮಾರುಕಟ್ಟೆಯನ್ನು ಮಾತ್ರ ಮಾಡುತ್ತಾರೆ' ಎಂದು ಆರೋಪಿಸಿರು.