ಕೋಮಾದಲ್ಲಿದ್ದಾರೆಂದು 18 ತಿಂಗಳು ಐಟಿ ಅಧಿಕಾರಿಯ ಮೃತ ದೇಹ ಮನೆಯಲ್ಲಿಟ್ಟ ಕುಟುಂಬ

By Suvarna NewsFirst Published Sep 24, 2022, 7:50 PM IST
Highlights

ಕಳೆದ ವರ್ಷ ನಿಧನರಾದ ಆದಾಯ ತೆರಿಗೆ ಇಲಾಖೆ ನೌಕರನ ಮೃತ ದೇಹವನ್ನು ಕುಟುಂಬವು ಸುಮಾರು 18 ತಿಂಗಳ ಕಾಲ ಅವರು ಕೋಮಾದಲ್ಲಿದ್ದಾರೆ ಎಂದು ಭಾವಿಸಿ ಮನೆಯಲ್ಲಿಯೇ ಇರಿಸಿರುವ ಘಟನೆ ಲಖನೌದಲ್ಲಿ ನಡೆದಿದೆ 

ಲಖನೌ (ಸೆ. 24): ಕಳೆದ ವರ್ಷ ನಿಧನರಾದ ಆದಾಯ ತೆರಿಗೆ ಇಲಾಖೆ ನೌಕರನ ಮೃತ ದೇಹವನ್ನು ಕುಟುಂಬವು ಸುಮಾರು 18 ತಿಂಗಳ ಕಾಲ ಅವರು ಕೋಮಾದಲ್ಲಿದ್ದಾರೆ ಎಂದು ಭಾವಿಸಿ  ಮನೆಯಲ್ಲಿಯೇ ಇರಿಸಿರುವ ಘಟನೆ ಲಖನೌದಲ್ಲಿ ನಡೆದಿದೆ. 2021 ರ ಏಪ್ರಿಲ್ 22 ರಂದು ಕಾರ್ಡಿಯಾಕ್‌ ರೆಸ್ಪಿರೇಟರಿ ಸಿಂಡ್ರೋಮ್‌ನಿಂದ ಆದಾಯ ತೆರಿಗೆ ಅಧಿಕಾರಿ ದೀಕ್ಷಿತ್ ಸಾವನ್ನಪ್ಪಿದ್ದಾರೆ ಎಂದು ಖಾಸಗಿ ಆಸ್ಪತ್ರೆಯೊಂದು ಅವರ ಮರಣ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ ಎಂದು ಕಾನ್ಪುರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೃತದೇಹ ತೀರಾ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು, ಮ್ಯಾಜಿಸ್ಟ್ರೇಟ್ ಹಾಗೂ ಆರೋಗ್ಯ ಅಧಿಕಾರಿಗಳ ತಂಡ ರಾವತ್‌ಪುರ ಪ್ರದೇಶದ ದೀಕ್ಷಿತ್ ಅವರ ಮನೆಗೆ ತಲುಪಿದಾಗ, ಅವರ ಕುಟುಂಬ ಸದಸ್ಯರು ಅವರು ಜೀವಂತವಾಗಿದ್ದಾರೆ ಮತ್ತು ಕೋಮಾದಲ್ಲಿದ್ದಾರೆ ಎಂದು ತಿಳಿಸಿದರು ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಅಲೋಕ್ ರಂಜನ್ ಹೇಳಿದ್ದಾರೆ. 

ದೇಹದ ಮೇಲೆ 'ಗಂಗಾಜಲ' ಸಿಂಪಡಣೆ:  ಮೃತ ವ್ಯಕ್ತಿಯ ಪತ್ನಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಪತ್ನಿ ಪ್ರತಿದಿನ ಬೆಳಿಗ್ಗ ಕೊಳೆತ ದೇಹದ ಮೇಲೆ 'ಗಂಗಾಜಲ' ಸಿಂಪಡಿಸಿದ್ದಾರೆ. ಪತಿ ಕೋಮಾದಿಂದ ಹೊರಬರಲು ಇದು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದರು ಎನ್ನಲಾಗಿದೆ. ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ಕುಟುಂಬ ತಮ್ಮ ನೆರೆಹೊರೆಯವರಿಗೂ ತಿಳಿಸಿದ್ದರು. ಅವರ ಪತ್ನಿ ಮಾನಸಿಕವಾಗಿ ಅಸ್ಥಿರವಾಗಿರುವಂತೆ ತೋರುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2 ತಿಂಗಳ ಬಳಿಕ ಬಯಲಾಯ್ತು ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ: ಸವಾಲಾಗಿದ್ದ ಪ್ರಕರಣ ಭೇದಿಸಿದ ಪೊಲೀಸರು

ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಮಲೇಶ್ ದೀಕ್ಷಿತ್ ಕಳೆದ ವರ್ಷ ಏಪ್ರಿಲ್‌ನಲ್ಲಿ ನಿಧನರಾಗಿದ್ದರು. ಆದರೆ ಅವರ ಕುಟುಂಬವು ದೀಕ್ಷಿತ್ ಅಂತ್ಯಕ್ರಿಯೆಗಳನ್ನು ಮಾಡಲು ಹಿಂದೇಟು ಹಾಕಿತ್ತು. ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ಅವರು ನಂಬಿದ್ದರು ಎಂದು ವೈದ್ಯಾಧಿಕಾರಿ ಹೇಳಿದ್ದಾರೆ. 

"ಕಾನ್ಪುರದ ಆದಾಯ ತೆರಿಗೆ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ, ಅವರ ಕುಟುಂಬ ಪಿಂಚಣಿ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರಣ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದರು" ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. 

ಇನ್ನು ಪೊಲೀಸ್‌ ಹಾಗೂ ವೈದ್ಯಾಧಿಕಾರಿಗಳ ಹಾಗೂ ಪೊಲೀಸರ ತಂಡದ ಮನೆಗೆ ತೆರಳಿದಾಗ ಸಾಕಷ್ಟು ಮನವೊಲಿಕೆಯ ನಂತರ ಕುಟುಂಬ ಸದಸ್ಯರು ದೇಹವನ್ನು ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಆಸ್ಪತ್ರೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ದೀಕ್ಷಿತ್  ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.  ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಲು ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಮತ್ತು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

click me!