ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿದ್ದಾಜಿದ್ದಿನ ಕಣವಾಗಿರುವ ನಂದಿಗ್ರಾಮ ಕ್ಷೇತ್ರ ಸೇರಿದಂತೆ 69 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಬಂಗಾಳ ಹಾಗೂ ಅಸ್ಸಾಂ 2ನೇ ಹಂತದ ಚುನಾವಣೆ ಮಾಹಿತಿ ಇಲ್ಲಿದೆ.
ಕೋಲ್ಕತಾ(ಎ.01): ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನಸೆಳೆದಿದೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದಲ್ಲಿ 2ನೇ ಹಂತದ ಚುನಾವಣೆ ನಡೆದಿದೆ. ಬಂಗಾಳದ 2ನೇ ಹಂತದ ಚುನಾವಣೆಯಲ್ಲಿ ಶೇಕಡಾ 80.43ರಷ್ಟು ಮತದಾನವಾಗಿದ್ದರೆ, ಅಸ್ಸಾಂನಲ್ಲಿ ಶೇಕಡಾ 74.79ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಶೇ.79.79, ಅಸ್ಸಾಂನಲ್ಲಿ ಶೇ.72 ರಷ್ಟು ಮತದಾನ; ಹೇಗೆ ಸಾಧ್ಯ ಎಂದ ದೀದಿ!.
ಪಶ್ಚಿಮ ಬಂಗಾಳದ 69 ಕ್ಷೇತ್ರಗಳಿಗೆ 2ನೇ ಹಂತದ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ 30 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇಕಡಾ 79.79 ರಷ್ಟು ಮತದಾನವಾಗಿತ್ತು. ಇನ್ನು ಅಸ್ಸಾಂನಲ್ಲಿ 15 ಕ್ಷೇತ್ರಗಳಿಗೆ 2ನೇ ಹಂತದ ಮತದಾನವಾಗಿದೆ. ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಈ ವೇಳೆ ಶೇಕಡಾ 72.14 ರಷ್ಟು ಮತದಾನವಾಗಿತ್ತು.
ಬಂಗಾಳದಲ್ಲಿ 2ನೇ ಹಂತದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಮಾಜಿ ಆಪ್ತ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನೇರಾನೇರ ಸ್ಪರ್ಧೆಯ ನಂದಿಗ್ರಾಮ ಕ್ಷೇತ್ರಕ್ಕೂ 2ನೇ ಹಂತದಲ್ಲಿ ಮತದಾನ ನಡೆದಿದೆ. ನಂದಿಗ್ರಾಮದಲ್ಲಿ ಸೋಲುವ ಭೀತಿಯಲ್ಲಿರುವ ಮಮತಾ ಬ್ಯಾನರ್ಜಿ, ಮುಂದಿನ ಹಂತದ ಚುನಾವಣೆಯಲ್ಲಿ ಬೇರೋಂದು ಕ್ಷೇತ್ರ ನೋಡುವುದು ಒಳಿತು ಎಂದು ನರೇಂದ್ರ ಮೋದಿ ಪ್ರಚಾರದ ವೇಳೆ ಟಾಂಗ್ ನೀಡಿದ್ದರು.
ಸ್ವತ ಮಮತಾ ಬ್ಯಾನರ್ಜಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ಮತದಾನ ಕೇಂದ್ರಗಳಲ್ಲಿ ಹಿಂಸಾಚಾರ ಕೂಡ ನಡೆದಿದೆ. ಈ ಕುರಿತು ರಾಜ್ಯಪಾಲರಿಗೆ ಮಮತಾ ಬ್ಯಾನರ್ಜಿ ದೂರು ನೀಡಿದ್ದಾರೆ. ಇನ್ನು ಮಾಧ್ಯಮದ ಜೊತೆ ಮಾತನಾಡಿರುವ ಮಮತಾ, ಇಷ್ಟು ಕೆಟ್ಟ ಚುನಾವಣೆ ತನ್ನ ಜೀವಮಾನದಲ್ಲಿ ನೋಡಿಲ್ಲ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ. ನಂದಿಗ್ರಾಮದಲ್ಲಿ ಮಮತಾ ಬರ್ಜರಿ ಗೆಲುವು ದಾಖಲಿಸಿದ್ದಾರೆ. ಹೀಗಾಗಿ 2ನೇ ಕ್ಷೇತ್ರದ ಅವಶ್ಯಕತೆ ಇಲ್ಲ ಎಂದಿದೆ.