ತಗ್ಗದ ಮೋದಿ ಪ್ರಭಾವ: ನರೇಂದ್ರ ಈಗಲೂ ಮತ ಸೆಳೆವ ಬಲಶಾಲಿ ನಾಯಕ

By Kannadaprabha NewsFirst Published Dec 4, 2023, 6:30 AM IST
Highlights

ಕರ್ನಾಟಕದಲ್ಲಿನ ಬಿಜೆಪಿ ಸೋಲಿನ ಬಳಿಕ ದೇಶದಲ್ಲಿ ‘ಮೋದಿ ಅಲೆ’ ಕ್ಷೀಣಿಸಿದೆ ಎಂದು ಹುಯಿಲೆಬ್ಬಿಸಿದ್ದ ರಾಜಕೀಯ ಎದುರಾಳಿಗಳಿಗೆ ಭಾನುವಾರ ಪ್ರಕಟಗೊಂಡ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಭರ್ಜರಿ ಪ್ರತ್ಯುತ್ತರ ನೀಡಿದೆ.

ನವದೆಹಲಿ: ಕರ್ನಾಟಕದಲ್ಲಿನ ಬಿಜೆಪಿ ಸೋಲಿನ ಬಳಿಕ ದೇಶದಲ್ಲಿ ‘ಮೋದಿ ಅಲೆ’ ಕ್ಷೀಣಿಸಿದೆ ಎಂದು ಹುಯಿಲೆಬ್ಬಿಸಿದ್ದ ರಾಜಕೀಯ ಎದುರಾಳಿಗಳಿಗೆ ಭಾನುವಾರ ಪ್ರಕಟಗೊಂಡ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಭರ್ಜರಿ ಪ್ರತ್ಯುತ್ತರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಿಲ್ಲ. ಅವರ ಅಲೆ ಇನ್ನೂ ಬಲಶಾಲಿಯಾಗಿಯೇ ಇದೆ. ದೇಶದಲ್ಲಿ ಅವರಿನ್ನೂ ಭರಪೂರ ಮತ ಸೆಳೆಯಬಲ್ಲ ನಾಯಕ ಎಂಬುದನ್ನು ಈ ಫಲಿತಾಂಶ ನಿರೂಪಿಸಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಿಂದಿ ನಾಡಿನ ರಾಜ್ಯಗಳು. ಮಧ್ಯಪ್ರದೇಶದಲ್ಲಿ ಹಾಲಿ ಸಿಎಂ ಶಿವರಾಜ ಸಿಂಗ್‌ ಚೌಹಾಣ್‌ರಂತಹ ಪ್ರಭಾವಿ ನಾಯಕರು ಇದ್ದರು. ರಾಜಸ್ಥಾನದಲ್ಲಿ ವಸುಂಧರಾ ರಾಜೇ ಹಾಗೂ ಛತ್ತೀಸ್‌ಗಢದಲ್ಲಿ ರಮಣ್‌ ಸಿಂಗ್‌ರಂತಹ ಅನುಭವಿ ಧುರೀಣರು ಇದ್ದರು. ಆದರೆ ಅವರ್‍ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಬಿಂಬಿಸಲೇ ಇಲ್ಲ. ಬದಲಿಗೆ ನರೇಂದ್ರ ಮೋದಿ ಅವರ ಮುಖವನ್ನೇ ಮುಂದೆ ಮಾಡಿ ಚುನಾವಣೆಗೆ ಹೋಯಿತು. ಅದು ಫಲಿಸಿದೆ.

ರಾಜ್ಯಗಳ ಚುನಾವಣೆ ಸ್ಥಳೀಯ ವಿಚಾರವನ್ನು ಆಧರಿಸಿ ನಡೆಯುತ್ತವೆ ಎಂದು ಬಲವಾಗಿ ಬೇರೂರಿರುವ ನಂಬಿಕೆಯನ್ನು ಮೋದಿ ಮತ್ತೊಮ್ಮೆ ಸುಳ್ಳು ಮಾಡಿದ್ದಾರೆ. ಚುನಾವಣೆ ಇದ್ದ ಮೂರು ರಾಜ್ಯಗಳಲ್ಲಿ ಹೆಲಿಕಾಪ್ಟರ್‌ನಲ್ಲಿ ರಾಜ್ಯಗಳನ್ನು ಸುತ್ತಿ, ಮೂರೂ ರಾಜ್ಯಗಳಲ್ಲಿ 42 ರ್‍ಯಾಲಿ ಹಾಗೂ 5 ರೋಡ್‌ ಶೋಗಳಲ್ಲಿ ಭಾಗಿಯಾಗಿ ಮತದಾರರನ್ನು ತಲುಪುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸೋತಿದ್ದರೆ, ಇಂಡಿಯಾ ಕೂಟ ಮತ್ತಷ್ಟು ಬಲಶಾಲಿಯಾಗಿ ಪುಟಿದೇಳುವ ಸಾಧ್ಯತೆ ಇತ್ತು. ಆದರೆ ಬಿಜೆಪಿ ಮೂರು ರಾಜ್ಯಗಳನ್ನೂ ಬಾಚಿಕೊಂಡಿದೆ. ತನ್ಮೂಲಕ ಲೋಕಸಭೆ ಚುನಾವಣೆಯನ್ನು ಎದುರಾಳಿಗಳಿಗೆ ಮತ್ತಷ್ಟು ಕಠಿಣವಾಗಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿಮ್ಮ ಕನಸನ್ನು ಈಡೇರಿಸುವುದು ನನ್ನ ಸಂಕಲ್ಪ: ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ವಿಜಯೋತ್ಸವ ಭಾಷಣ

20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಮಧ್ಯಪ್ರದೇಶದಲ್ಲಿ ಭರ್ಜರಿ ಬಹುಮತ ಗಳಿಸಿರುವ ಬಿಜೆಪಿ, ಕಾಂಗ್ರೆಸ್‌ ಗೆದ್ದೇಬಿಟ್ಟಿತು ಎಂಬಂತಹ ವಾತಾವರಣವಿದ್ದ ಛತ್ತೀಸ್‌ಗಢದಲ್ಲೂ ಕೇಸರಿ ಪತಾಕೆ ಹಾರಿಸುವಲ್ಲಿ ಸಫಲವಾಗಿದೆ. ರಾಜಸ್ಥಾನದಲ್ಲಿ ಉಚಿತ ಕೊಡುಗೆಗಳ ಸುರಿಮಳೆಯನ್ನೇ ಸುರಿಸಿದ್ದ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಹೊರದಬ್ಬುವಲ್ಲಿ ಸಫಲವಾಗಿದೆ. ತನ್ಮೂಲಕ ಲೋಕಸಭೆ ಚುನಾವಣೆಯ ಸೆಮಿಫೈನಲ್‌ನಲ್ಲಿ 3-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

click me!