ನಾಳೆ ಜಾರ್ಖಂಡ್, ವಯನಾಡ್‌ನಲ್ಲಿ ಮತದಾನ; ಪ್ರಮುಖ ಅಭ್ಯರ್ಥಿಗಳ್ಯಾರು?

By Kannadaprabha News  |  First Published Nov 12, 2024, 7:36 AM IST

ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ, ಕೇರಳದ ವಯನಾಡ್‌ ಸೇರಿದಂತೆ 2 ಲೋಕಸಭೆ ಕ್ಷೇತ್ರ ಮತ್ತು 34 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬುಧವಾರ ನಡೆಯಲಿವೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ವಯನಾಡ್‌ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ.


ರಾಂಚಿ/ವಯನಾಡ್‌: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ, ಕೇರಳದ ವಯನಾಡ್‌ ಸೇರಿದಂತೆ 2 ಲೋಕಸಭೆ ಕ್ಷೇತ್ರ ಮತ್ತು 34 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬುಧವಾರ ನಡೆಯಲಿವೆ. ಈ ನಿಮಿತ್ತ ಸೋಮವಾರ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ ಬಿತ್ತು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಬುಧವಾರ ಮೊದಲ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ನ.23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇಲ್ಲಿ ಕಾಂಗ್ರೆಸ್-ಜೆಎಂಎಂ ಕೂಟ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ನಡುವೆ ನೇರ ಹಣಾಹಣಿ ಇದೆ. ಇತ್ತೀಚೆಗೆ ಜೆಎಂಎಂ ತೊರೆದು ಬಿಜೆಪಿ ಸೇರಿದ್ದ ಚಂಪೈ ಸೊರೇನ್‌ ಈ ಹಂತದ ಪ್ರಮುಖ ಅಭ್ಯರ್ಥಿ.

ಜಾರ್ಖಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರಾದ ಜೆ.ಪಿ. ನಡ್ಡಾ, ಅಮಿತ್‌ ಶಾ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚಾರ ಗಮನ ಸೆಳೆಯಿತು.

Tap to resize

Latest Videos

ಇನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್‌ ಕ್ಷೇತ್ರದಲ್ಲಿ ಮೊದಲ ಬಾರಿ ಅವರ ಸೋದರಿ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಗಾ ಗಾಂಧಿ ಚುನಾವಣೆ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ನವ್ಯಾ ಹರಿದಾಸ್‌ ಹಾಗೂ ಎಲ್‌ಡಿಎಫ್‌ನಿಂದ ಸತ್ಯನ್‌ ಮೊಕೇರಿ ಸ್ಪರ್ಧಿಸಿದ್ದಾರೆ.

ಸುಳ್ಳು ಆರೋಪ ಮಾಡುತ್ತಿರುವ ರಾಹುಲ್‌ಗೆ ಛೀಮಾರಿ ಹಾಕಿ: ಆಯೋಗಕ್ಕೆ ಬಿಜೆಪಿ ದೂರು
‘ಮಹಾರಾಷ್ಟ್ರ ಚುನಾವಣೆ ವೇಳೆ ಸುಳ್ಳು ಆರೋಪಗಳನ್ನು ಮಾಡಿ ಪ್ರಚಾರ ಮಾಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಛೀಮಾರಿ ಹಾಕಬೇಕು, ವಾಗ್ದಂಡನೆ ವಿಧಿಸಬೇಕು ಮತ್ತು ಅವರ ಪ್ರಚಾರಕ್ಕೆ ನಿರ್ಬಂಧ ಹೇರಬೇಕು’ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ. ‘ಚುನಾವಣಾ ಪ್ರಚಾರದ ವೇಳೆ ಸುಳ್ಳು ಆರೋಪ ಮಾಡಬಾರದು ಎಂದು ಆಯೋಗ ಸೂಚಿಸಿತ್ತು. ಆದರೂ ರಾಹುಲ್‌ ಅವರು ಮಹಾರಾಷ್ಟ್ರಕ್ಕೆ ಬರಬೇಕಾದ ಉದ್ದಿಮೆಯ ಅವಕಾಶಗಳನ್ನು ಇತರ ರಾಜ್ಯಗಳು ಕಸಿದಿವೆ ಎಂದು ಆರೋಪಿಸಿದ್ದಾರೆ. ಬಿಜೆಪಿಯು ಸಂವಿಧಾನ ಹತ್ತಿಕ್ಕಲು ಬಯಸುತ್ತದೆ ಎಂದಿದ್ದಾರೆ. ಇವೆಲ್ಲ ಸುಳ್ಳು ಆರೋಪಗಳು’ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ನಾಯಕ ಅರ್ಜುನ್‌ ರಾಮ್‌ ಮೇಘ್ವಾಲ್‌ ನೇತೃತ್ವದ ಬಿಜೆಪಿ ನಿಯೋಗ ದೂರಿದೆ.

‘ಆ್ಯಪಲ್‌ ಐಫೋನ್‌ಗಳು ಮತ್ತು ಬೋಯಿಂಗ್‌ನ ವಿಮಾನಗಳನ್ನು ಮಹಾರಾಷ್ಟ್ರದ ಬದಲು ಬೇರೆ ರಾಜ್ಯಗಳಲ್ಲಿ ತಯಾರಿಸಲಾಗುತ್ತಿದೆ ಎಂಬ ಹೇಳಿಕೆ ಸುಳ್ಳು. ವಾಸ್ತವವಾಗಿ, 2024-25ರ ಏಪ್ರಿಲ್ ನಿಂದ ಜೂನ್ ವರೆಗೆ ಒಟ್ಟು ₹70,795 ಕೋಟಿ ರು. ಬಂಡವಾಳ ಮಹಾರಾಷ್ಟ್ರಕ್ಕೆ ಹರಿದುಬಂದಿದ್ದು, ಎಫ್‌ಡಿಐನಲ್ಲಿ (ವಿದೇಶಿ ನೇರ ಹೂಡಿಕೆ) ಅಗ್ರಸ್ಥಾನದಲ್ಲಿದೆ. ರಾಹುಲ್ ಹೇಳಿಕೆಗಳು ಮಹಾರಾಷ್ಟ್ರದ ಯುವಕರನ್ನು ಪ್ರಚೋದಿಸುತ್ತಿವೆ ಹಾಗೂ ರಾಜ್ಯ ರಾಜ್ಯಗಳ ನಡುವೆ ದ್ವೇಷ ಸೃಷ್ಟಿಸುತ್ತವೆ. ಇದು ಅತ್ಯಂತ ಅಪಾಯಕಾರಿ’ ಎಂದಿದೆ.

‘ರಾಹುಲ್‌ ನಿರಂತರವಾಗಿ ಕೇವಲ ಮಹಾರಾಷ್ಟ್ರ ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ವಿರುದ್ಧ ಸುಳ್ಳು, ಪರಿಶೀಲಿಸದ ಮತ್ತು ಆಧಾರರಹಿತ ಆರೋಪ ಮಾಡುತ್ತಿದ್ದಾರೆ’ ಎಂದು ಬಿಜೆಪಿ ನಿಯೋಗ ದೂರಿದೆ.

ಸಮಾಜ ವಿಭಜನೆಗೆ ದೇಶ ವಿರೋಧಿಗಳ ಯತ್ನ: ಮೋದಿ
‘ಕೆಲವು ‘ದೇಶವಿರೋಧಿಗಳು’ ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಜನರು ಅವರ ಉದ್ದೇಶಗಳ ಗಂಭೀರತೆಯನ್ನು ಅರ್ಥಮಾಡಿಕೊಂಡು ಅವರನ್ನು ಸೋಲಿಸಲು ಒಗ್ಗೂಡಬೇಕಾದ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಒತ್ತಿ ಹೇಳಿದ್ದಾರೆ.

ಗುಜರಾತ್‌ನ ವಡ್ತಲ್‌ ಪಟ್ಟಣದ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ 200 ನೇ ವಾರ್ಷಿಕೋತ್ಸವದಂದು ಭಕ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ನಾಗರಿಕರ ನಡುವಿನ ಏಕತೆ ಮತ್ತು ರಾಷ್ಟ್ರದ ಸಮಗ್ರತೆ ಮುಖ್ಯವಾಗಿದೆ. ಆದರೆ, ದುರದೃಷ್ಟವಶಾತ್ ಕೆಲ ಹಿತಾಸಕ್ತಿಗಳು ಸಂಕುಚಿತ ಮನೋಭಾವದ ಮೂಲಕ ನಮ್ಮ ಸಮಾಜವನ್ನು ಜಾತಿ, ಧಾರ್ಮಿಕ, ಭಾಷಾವಾರು, ಪುರುಷರು-ಮಹಿಳೆಯರು, ಗ್ರಾಮ-ನಗರದ ರೇಖೆಗಳ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

ಇದನ್ನೂ ಓದಿ: 

‘ನಾವು ಈ ದೇಶವಿರೋಧಿಗಳ ಉದ್ದೇಶಗಳ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರನ್ನು ಸೋಲಿಸಲು ಒಂದಾಗಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮೊದಲ ಪ್ರಮುಖ ಹೆಜ್ಜೆ ಆತ್ಮನಿರ್ಭರತೆ (ಸ್ವಾವಲಂಬನೆ)’ ಎಂದು ಮೋದಿ ಹೇಳಿದರು.

‘ಇಂದು, ನಾನು ಭೇಟಿಯಾಗುವ ಬಹುತೇಕ ವಿಶ್ವ ನಾಯಕರು ಭಾರತೀಯ ಯುವಕರು ತಮ್ಮ ದೇಶಗಳಿಗೆ ಬಂದು ಕೆಲಸ ಮಾಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಯುವಕರು ಭಾರತ ಮತ್ತು ಪ್ರಪಂಚದ ಅಗತ್ಯಗಳನ್ನು ಪೂರೈಸಲು ಸಮರ್ಥರಾಗಿದ್ದಾರೆ’ ಎಂದು ಪ್ರಧಾನಿ ಹೆಮ್ಮೆಯಿಂದ ನುಡಿದರು.

ಇದನ್ನೂ ಓದಿ: ಪಾಕಿಸ್ತಾನದಿಂದ ಬಿಜೆಪಿ ನಾಯಕ, ನಟ ಮಿಥುನ್ ಚಕ್ರವರ್ತಿಗೆ ಜೀವ ಬೆದರಿಕೆ!

click me!