Assam UCC Bill: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅಸ್ಸಾಂ ಸಜ್ಜು: ದೇಶದಲ್ಲಿ UCC ಅನುಷ್ಠಾನಗೊಳಿಸಿದ 3ನೇ ರಾಜ್ಯ, ಮೊದಲ ಎರಡು ರಾಜ್ಯಗಳಾವು?

Kannadaprabha News   | Kannada Prabha
Published : May 26, 2026, 06:03 AM IST
Assam UCC Bill Will Assam Become India s 3rd State to Implement Uniform Civil Code

ಸಾರಾಂಶ

ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಮಂಡಿಸಲಾಗಿದ್ದು, ಇದು ಅಂಗೀಕಾರವಾದರೆ ಯುಸಿಸಿ ಜಾರಿಗೊಳಿಸಿದ ಮೂರನೇ ರಾಜ್ಯವಾಗಲಿದೆ. ಈ ಮಸೂದೆಯು ವಿವಾಹ, ವಿಚ್ಛೇದನ, ಉತ್ತರಾಧಿಕಾರ, ಸಹಜೀವನಕ್ಕೆ ಸಂಬಂಧಿಸಿದಂತೆ ಎಲ್ಲಾ ಧರ್ಮಗಳಿಗೆ ಒಂದೇ ಕಾನೂನನ್ನು ಪ್ರಸ್ತಾಪಿಸುತ್ತದೆ. 

ಗುವಾಹಟಿ  (ಮೇ.26): ಮದುವೆ, ವಿಚ್ಛೇದನ, ಉತ್ತರಾಧಿಕಾರದಂತಹ ವಿಷಯಗಳಿಗೆ ಸಂಬಂಧಿಸಿ ಎಲ್ಲಾ ಧರ್ಮದವರಿಗೂ ಏಕರೂಪ ಕಾನೂನು ರೂಪಿಸುವ ಉದ್ದೇಶದ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಮಸೂದೆಯನ್ನು ಸೋಮವಾರ ಅಸ್ಸಾಂ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಮಸೂದೆ ಅಂಗೀಕಾರ ಪಡೆದು, ಕಾನೂನು ರೂಪ ಪಡೆದರೆ ಯುಸಿಸಿ ಜಾರಿಗೊಳಿಸಿದ 3ನೇ ರಾಜ್ಯ ಎಂಬ ದಾಖಲೆಗೆ ಅಸ್ಸಾಂ ಪಾತ್ರವಾಗಲಿದೆ.

ಈಗಾಗಲೇ ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಯುಸಿಸಿ ಜಾರಿಗೆ ಬಂದಿದೆ. ಗೋವಾದಲ್ಲಿ ಸ್ವತಂತ್ರಪೂರ್ವದಿಂದಲೇ ಇಂಥದ್ದೊಂದು ಕಾಯ್ದೆ ಜಾರಿಯಲ್ಲಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ‘ಈ ಮಸೂದೆಯು ಅಸ್ತಿತ್ವದಲ್ಲಿರುವ ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳ ಪ್ರಕಾರ ವಿವಾಹಗಳನ್ನು ನಡೆಸಲು ಅವಕಾಶ ನೀಡುವ ಮೂಲಕ ಅಸ್ಸಾಂನ ಸಾಂಸ್ಕೃತಿಕ ವೈವಿಧ್ಯತೆಯನ್ನು ರಕ್ಷಿಸುತ್ತದೆ. ಜತೆಗೆ ಆಸ್ತಿ ಹಂಚಿಕೆಯನ್ನೂ ನ್ಯಾಯಯುತವಾಗಿ ಮಾಡಲು ಅನುವು ಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ.

ಮಸೂದೆಯಲ್ಲಿ ಏನಿದೆ?:

ಮದುವೆಯಾಗಲು ಸ್ತ್ರೀಗೆ ಕನಿಷ್ಠ 18 ಹಾಗೂ ಪುರುಷನಿಗೆ 21 ವರ್ಷ ಆಗಿರಬೇಕು. ಮದುವೆ ಮತ್ತು ವಿಚ್ಛೇದನ 60 ದಿನಗಳೊಳಗೆ ನೋಂದಣಿ ಆಗದಿದ್ದರೆ 10 ಸಾವಿರ ರು. ದಂಡ, ನಕಲಿ ದಾಖಲೆ ಒದಗಿಸಿದರೆ 3 ತಿಂಗಳು ಜೈಲು ಅಥವಾ 25 ಸಾವಿರ ರು. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ದ್ವಿಪತ್ನಿತ್ವ ಅಥವಾ ಬಹುಪತ್ನಿತ್ವ ಪಾಲಿಸುವವರಿಗೆ 7 ವರ್ಷ ಜೈಲು ಶಿಕ್ಷೆ.

ಸಹಜೀವನ ನಡೆಸುತ್ತಿರುವವರು 1 ತಿಂಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ವಿಫಲವಾದಲ್ಲಿ 3 ತಿಂಗಳು ಸೆರೆವಾಸ ಅಥವಾ 10 ಸಾವಿರು ರು. ದಂಡ ವಿಧಿಸಲಾಗುವುದು. ಒಂದೊಮ್ಮೆ ನೋಂದಣಿ ವೇಳೆ ವೈವಾಹಿಕ ಸಂಬಂಧ ಅಥವಾ ಇತರೆ ಮಾಹಿತಿ ಮುಚ್ಚಿಟ್ಟರೆ 3 ತಿಂಗಳು ಜೈಲು ಮತ್ತು 25 ಸಾವಿರ ರು. ದಂಡ ವಿಧಿಸಲಾಗುವುದು. ಅಕ್ರಮವಾಗಿ ವಿಚ್ಛೇದನ ಪಡೆಯುವವರಿಗೆ 3 ವರ್ಷ ಸೆರೆವಾಸದಂತಹ ಶಿಕ್ಷೆಗಳನ್ನು ವಿಧಿಸಲಾಗುವುದು. ಆದರೆ ಪರಿಶಿಷ್ಟ ಪಂಗಡಗಳನ್ನು ಮಾತ್ರ ಇದರಿಂದ ಹೊರಗಿಡಲಾಗುವುದು.

ಏನಿದು ಯುಸಿಸಿ?:

ಮದುವೆ, ವಿಚ್ಛೇದನ, ಉತ್ತರಾಧಿಕಾರ, ಸಹಜೀವನದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಯುಸಿಸಿ ಅಡಿ ಎಲ್ಲಾ ಧರ್ಮದವರಿಗೆ ಅನ್ವಯವಾಗುವ ಕಾನೂನನ್ನು ಜಾರಿಗೆ ತರಲಾಗುತ್ತದೆ.

ಮಸೂದೆಯಲ್ಲಿ ಏನಿದೆ?

- ದ್ವಿಪತ್ನಿತ್ವ ಅಥವಾ ಬಹುಪತ್ನಿತ್ವ ಪಾಲಿಸುವವರಿಗೆ ಏಳು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ

- ಲಿವ್‌ ಇನ್‌ ಸಂಬಂಧದಲ್ಲಿರುವವರ ನೋಂದಣಿ ಕಡ್ಡಾಯ. ಇಲ್ಲವಾದರೆ 3 ತಿಂಗಳು ಜೈಲು

- ಮದುವೆ ಮತ್ತು ವಿಚ್ಛೇದನ ಆದ 60 ದಿನದಲ್ಲಿ ನೋಂದಣಿ ಆಗಬೇಕು. ಇಲ್ಲದಿದ್ದರೆ ದಂಡ

- ಮದುವೆಯಾಗಲು ಮಹಿಳೆಗೆ 18 ವರ್ಷ, ಪುರುಷನಿಗೆ 21 ವರ್ಷ ತುಂಬಿರಲೇಬೇಕು

- ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ವಿಧೇಯಕ ಮಂಡನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Fuel Shock: ಮತ್ತೆ ಪೆಟ್ರೋಲ್‌ ₹2.62, ಡೀಸೆಲ್‌ ₹2.71 ಹೆಚ್ಚಳ, 11 ದಿನದಲ್ಲಿ 4ನೇ ಸಲ ಏರಿಕೆ!
Troll: ರಾಮ್ ಚರಣ್ ಎಡವಟ್ಟಿಗೆ 'ಯಶ್' ಎಳೆದುತಂದಿದ್ದು ಯಾಕೆ? 'RRR' ಸ್ಟಾರ್ ನಟನೀಗ ಫುಲ್ ರೋಸ್ಟ್!