ಪತ್ನಿ ಸಾವನ್ನಪ್ಪಿದ ಕೆಲವೇ ಕ್ಷಣಗಳಲ್ಲಿ ಶಿಲಾದಿತ್ಯ ಚೇಟಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಲೇ ಪೊಲೀಸ್ ಇಲಾಖೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ದಿಸ್ಪುರ: ಪತ್ನಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸಾಂನ ಗೃಹ ಮತ್ತು ರಾಜಕೀಯ ಸರ್ಕಾರದ ಕಾರ್ಯದರ್ಶಿ ಐಪಿಎಸ್ ಅಧಿಕಾರಿ ಶಿಲಾದಿತ್ಯ ಚೇಟಿಯಾ ಆತ್ಮಹತ್ಯೆಗೆ ಶರಣಾದ ಅಧಿಕಾರಿ. ಪತ್ನಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ. ಶಿಲಾದಿತ್ಯ ಚೇಟಿಯಾ ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್, ಅಸ್ಸಾಂನ ಗೃಹ ಮತ್ತು ರಾಜಕೀಯ ಸರ್ಕಾರದ ಕಾರ್ಯದರ್ಶಿ ಶ್ರೀ ಶಿಲಾದಿತ್ಯ ಚೇಟಿಯಾ 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಪತ್ನಿ ಸಾವನ್ನಪ್ಪಿದ ಕೆಲವೇ ಕ್ಷಣಗಳಲ್ಲಿ ಶಿಲಾದಿತ್ಯ ಚೇಟಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಲೇ ಪೊಲೀಸ್ ಇಲಾಖೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಪತ್ನಿಯ ಅನಾರೋಗ್ಯದ ಹಿನ್ನೆಲೆ ಶಿಲಾದಿತ್ಯ ಚೇಟಿಯಾ ನಾಲ್ಕು ತಿಂಗಳು ರಜೆಯಲ್ಲಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಶಿಲಾದಿತ್ಯ ಕರ್ತವ್ಯಕ್ಕೆ ಹಿಂದಿರುಗಿದ್ದರು. ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಶಿಲಾದಿತ್ಯರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರು ಶಿಲಾದಿತ್ಯ ಮೃತರಾಗಿರೋದನ್ನು ಖಚಿತಪಡಿಸಿದ್ದಾರೆ.
ಅಸ್ಸಾಂ ಸರ್ಕಾರದಲ್ಲಿ ಕಾರ್ಯದರ್ಶಿಯಾಗುವ ಮೊದಲು, ಶಿಲಾದಿತ್ಯ ಚೇಟಿಯಾ ರಾಜ್ಯದ ಟಿನ್ಸುಕಿಯಾ ಮತ್ತು ಸೋನಿತ್‌ಪುರ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಸೇವೆ ಸಲ್ಲಿಸಿದ್ದರು. ಶಿಲಾದಿತ್ಯ ಆತ್ಮಹತ್ಯೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.