
ನವದೆಹಲಿ: ‘ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಬಳಿ 3 ದೇಶಗಳ ಪಾಸ್‌ಪೋರ್ಟ್ ಇವೆ. ಜತೆಗೆ ಅವರು ದುಬೈನಲ್ಲಿ ಆಸ್ತಿ ಹೊಂದಿದ್ದಾರೆ. ಆದರೆ ಈ ಬಗ್ಗೆ ಅವರು ಬಹಿರಂಗಪಡಿಸಿಲ್ಲ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಿನಿಕಿ ಬಳಿ ಯುಎಇ, ಈಜಿಪ್ಟ್, ಆಂಟಿಗುವಾ ಮತ್ತು ಬಾರ್ಬುಡಾದ ಪಾಸ್‌ಪೋರ್ಟ್‌ಗಳಿವೆ. ಜತೆಗೆ ದುಬೈನಲ್ಲಿ ಅವರು 2 ಆಸ್ತಿ ಹೊಂದಿದ್ದಾರೆ. ಇದರ ಉಲ್ಲೇಖ ಬಿಸ್ವಾರ ಅಫಿಡವಿಟ್‌ನಲ್ಲಿ ಇಲ್ಲ’ ಎಂದು ಆರೋಪಿಸಿದರು.
ಖೇರಾ ಮಾಡಿದ ಆರೋಪಗಳು ಸುಳ್ಳು ಎಂದಿರುವ ಬಿಸ್ವಾ, ‘ಅವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಾನು ಮತ್ತು ನನ್ನ ಪತ್ನಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ’ ಎಂದಿದ್ದಾರೆ. ಚುನಾವಣಾ ಸಮಯದಲ್ಲೇ ನಡೆಯುತ್ತಿರುವ ಈ ವಾಗ್ವಾದ ಮಹತ್ವ ಪಡೆದುಕೊಂಡಿದೆ.
ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಪ್ರತಿ ಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಲವಂತವಾಗಿ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಮೋದಿ ಸರ್ಕಾರದ ಈ ಕ್ರಮ ಕೇವಲ ದೊಡ್ಡ ಹಾಗೂ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯಗಳಿಗಷ್ಟೇ ಅನುಕೂಲ ಮಾಡಿಕೊಡಲಿದೆ. ಇದು ಸಮೂಹ ನಾಶದ ಆಯುಧ ಎಂದು ಗಂಭೀರ ಆರೋಪ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಮೋದಿ ಅವರು ಜನರನ್ನು ತಪ್ಪುದಾರಿಗೆಳೆಯುವ ಹೇಳಿಕೆ ನೀಡುವುದರಲ್ಲಿ ನಿಪುಣರು. ಲೋಕಸಭಾ ಸ್ಥಾನಗಳ ಸಂಖ್ಯೆ ಶೇ.50ರಷ್ಟು ಹೆಚ್ಚಾದರೆ ದಕ್ಷಿಣದ ರಾಜ್ಯಗಳಿಗೆ ಯಾವುದೇ ತೊಂದರೆ ಆಗಲ್ಲ ಎಂದು ಹೇಳಿದ್ದಾರೆ. ಆದರೆ, ಇದು ಜನರ ಕಣ್ಣಿಗೆ ಮಣ್ಣೆರಚುವ ಹೇಳಿಕೆ. ಉದಾಹರಣೆಗೆ ಕೇರಳ ಮತ್ತು ಉತ್ತರಪ್ರದೇಶ ನಡುವೆ ಸದ್ಯ 60 ಲೋಕಸಭಾ ಕ್ಷೇತ್ರಗಳ ಅಂತರ ಇದೆ. ಮೋದಿ ಅವರ ಪ್ರಸ್ತಾಪಿತ ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾಪದಿಂದ ಈ ಅಂತರ 90ಕ್ಕೇರಲಿದೆ. ಅದೇ ರೀತಿ ಉತ್ತರಪ್ರದೇಶ ಮತ್ತು ತಮಿಳುನಾಡು ನಡುವಿನ ಲೋಕಸಭಾ ಕ್ಷೇತ್ರಗಳ ಅಂತರ ಈಗಿನ 41ರಿಂದ 61ಕ್ಕೇರಲಿದೆ’ ಎಂದಿದ್ದಾರೆ.
ಮೋದಿ ಅವರು ಬಲವಂತವಾಗಿ ಜಾರಿಗೊಳಿಸಲುದ್ದೇಶಿರುವ ಲೋಕಸಭಾ ಕ್ಷೇತ್ರಗಳನ್ನು ಶೇ.50ರಷ್ಟು ಹೆಚ್ಚಿಸುವ ವಿಧೇಯಕವು ದೊಡ್ಡ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯಗಳಿಗೆ ಅನುಕೂಲವಾಗಲಿದೆ. ದೊಡ್ಡ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಇನ್ನಷ್ಟು ಹೆಚ್ಚಳ ಆಗಲಿವೆ. ಈ ಅನ್ಯಾಯ ಕೇವಲ ದಕ್ಷಿಣದ ರಾಜ್ಯಗಳಿಗೆ ಮಾತ್ರವಲ್ಲ, ಪಂಜಾಬ್, ಹರ್ಯಾಣ, ಈಶಾನ್ಯ ರಾಜ್ಯಗಳಿಗೂ ಆಗಲಿದೆ ಎಂದು ಜೈರಾಂ ರಮೇಶ್ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ