ಅಸ್ಸಾಂನಲ್ಲಿ ಯುಸಿಸಿ ಮಸೂದೆ ಅಂಗೀಕಾರ: ದೇಶದ 4ನೇ ರಾಜ್ಯ, ಮದುವೆ, ಆಸ್ತಿ, ಡೈವೋರ್ಸ್‌ಗಿನ್ನು ಎಲ್ಲರಿಗೂ ಒಂದೇ ಕಾಯ್ದೆ

Gowthami K   | Kannada Prabha
Published : May 28, 2026, 02:50 PM IST
UCC

ಸಾರಾಂಶ

ಅಸ್ಸಾಂ ವಿಧಾನಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆ ಅಂಗೀಕಾರಗೊಂಡಿದೆ. ಈ ಮೂಲಕ, ಮದುವೆ, ವಿಚ್ಛೇದನ, ಮತ್ತು ಸಹಜೀವನಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗುವ ಹೊಸ ಕಾನೂನನ್ನು ಜಾರಿಗೆ ತಂದ ನಾಲ್ಕನೇ ರಾಜ್ಯವಾಗಿ ಅಸ್ಸಾಂ ಹೊರಹೊಮ್ಮಿದೆ.

ಗುವಾಹಟಿ: ವಿಪಕ್ಷಗಳ ವಿರೋಧದ ನಡುವೆಯೂ ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಮಸೂದೆ ಬುಧವಾರ ಅಂಗೀಕಾರವಾಗಿದೆ. ಈ ಮೂಲಕ, ಮದುವೆ, ವಿಚ್ಛೇದನ, ಉತ್ತರಾಧಿಕಾರ, ಸಹಜೀವನದಂತಹ ವಿಷಯಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಕಾನೂನು ಜಾರಿಗೆ ತಂದ 4ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಅಸ್ಸಾಂ ಪಾತ್ರವಾಗಿದೆ.

2016ರಲ್ಲೇ ರೂಪಿಸಲಾಗಿರುವ ಮಸೂದೆಯ ಬಗೆಗಿನ ಸುದೀರ್ಘ ಚರ್ಚೆಯ ಬಳಿಕ ಅದನ್ನು ಅಂಗೀಕಾರಕ್ಕಾಗಿ ಸದನದಲ್ಲಿ ಮಂಡಿಸುವಂತೆ ರಾಜ್ಯಪಾಲರು ಸಿಎಂ ಹಿಮಂತ ಬಿಸ್ವ ಶರ್ಮಾ ಅವರಿಗೆ ಸೂಚಿಸಿದರು. ಈ ವೇಳೆ, ಮಂಡನೆಗೂ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಿಸಬೇಕೆಂದು ಪಟ್ಟು ಹಿಡಿದ ವಿಪಕ್ಷದವರು ಬಾವಿಗೆ ಇಳಿದು ಪ್ರತಿಭಟಿಸಿದರು. ಇದನ್ನು ತಿರಸ್ಕರಿಸಿದ ಸ್ಪೀಕರ್‌, ಧ್ವನಿಮತಕ್ಕೆ ಅನುವು ಮಾಡಿಕೊಟ್ಟರು. ಬಳಿಕ ‘ಭಾರತ ಮಾತಾ ಕಿ ಜೈ’, ‘ಜೈ ಶ್ರೀರಾಮ್‌’ ಘೋಷಣೆಗಳ ನಡುವೆ ಮಸೂದೆ ಪಾಸ್‌ ಆಗಿದೆ ಎಂದು ಘೋಷಿಸಿದರು.

ಯುಸಿಸಿ ಅಡಿಯಲ್ಲಿ ಮದುವೆ ವಯಸ್ಸು ನಿಗದಿ, ಮದುವೆ, ವಿಚ್ಛೇದನ, ಸಹಜೀವನದ ನೋಂದಣಿ ಇತ್ಯಾದಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳು ಜಾರಿಗೆ ಬರಲಿದ್ದು, ಇವು ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯಿಸಲಿದೆ. ಈಗಾಗಲೇ ಉತ್ತರಾಖಡ ಮತ್ತು ಗುಜರಾತ್‌ನಲ್ಲಿ ಯುಸಿಸಿಯನ್ನು ಜಾರಿಗೆ ತರಲಾಗಿದೆ. ಗೋವಾದಲ್ಲಿ ಸ್ವಾತಂತ್ರ್ಯಪೂರ್ವದಿಂದಲೇ ಜಾರಿಯಲ್ಲಿದೆ.

ಮಸೂದೆಯಲ್ಲಿ ಏನಿದೆ?:

ಮದುವೆಯಾಗಲು ಸ್ತ್ರೀಗೆ ಕನಿಷ್ಠ 18 ಹಾಗೂ ಪುರುಷನಿಗೆ 21 ವರ್ಷ ಆಗಿರಬೇಕು. ಮದುವೆ ಮತ್ತು ವಿಚ್ಛೇದನ 60 ದಿನಗಳೊಳಗೆ ನೋಂದಣಿ ಆಗದಿದ್ದರೆ 10 ಸಾವಿರ ರು. ದಂಡ, ನಕಲಿ ದಾಖಲೆ ಒದಗಿಸಿದರೆ 3 ತಿಂಗಳು ಜೈಲು ಅಥವಾ 25 ಸಾವಿರ ರು. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ದ್ವಿಪತ್ನಿತ್ವ ಅಥವಾ ಬಹುಪತ್ನಿತ್ವ ಪಾಲಿಸುವವರಿಗೆ 7 ವರ್ಷ ಜೈಲು ಶಿಕ್ಷೆ.

ಸಹಜೀವನ ನಡೆಸುತ್ತಿರುವವರು 1 ತಿಂಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ವಿಫಲವಾದಲ್ಲಿ 3 ತಿಂಗಳು ಸೆರೆವಾಸ ಅಥವಾ 10 ಸಾವಿರು ರು. ದಂಡ ವಿಧಿಸಲಾಗುವುದು. ಒಂದೊಮ್ಮೆ ನೋಂದಣಿ ವೇಳೆ ವೈವಾಹಿಕ ಸಂಬಂಧ ಅಥವಾ ಇತರೆ ಮಾಹಿತಿ ಮುಚ್ಚಿಟ್ಟರೆ 3 ತಿಂಗಳು ಜೈಲು ಮತ್ತು 25 ಸಾವಿರ ರು. ದಂಡ ವಿಧಿಸಲಾಗುವುದು. ಅಕ್ರಮವಾಗಿ ವಿಚ್ಛೇದನ ಪಡೆಯುವವರಿಗೆ 3 ವರ್ಷ ಸೆರೆವಾಸದಂತಹ ಶಿಕ್ಷೆಗಳನ್ನು ವಿಧಿಸಲಾಗುವುದು. ಆದರೆ ಪರಿಶಿಷ್ಟ ಪಂಗಡಗಳನ್ನು ಮಾತ್ರ ಇದರಿಂದ ಹೊರಗಿಡಲಾಗುವುದು.

ಏನಿದು ಯುಸಿಸಿ?:

ಮದುವೆ, ವಿಚ್ಛೇದನ, ಉತ್ತರಾಧಿಕಾರ, ಸಹಜೀವನದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಯುಸಿಸಿ ಅಡಿ ಎಲ್ಲಾ ಧರ್ಮದವರಿಗೆ ಅನ್ವಯವಾಗುವ ಕಾನೂನನ್ನು ಜಾರಿಗೆ ತರಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಸು ಸಾಕಲು ಆಗ್ತಿಲ್ವಾ, ನಮಗೆ ಕೊಡಿ: ಗೋ ರಕ್ಷಣೆಗೆ ಸ್ವಾಮೀಜಿಯಿಂದ ಹೊಸ ವೇದಿಕೆ ಆರಂಭ
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಪಕ್ಷಕ್ಕೆ ಅಪಾಯ, ಡಿಕೆಶಿಗೆ ಅವಕಾಶ ಕೊಡದಿದ್ರೂ ತಪ್ಪಿದ್ದಲ್ಲ ತೊಂದ್ರೆ, ಕಾಂಗ್ರೆಸ್‌ನ ಮುಂದಿನ ನಡೆ ಏನು?