
ಯಶಸ್ಸು ಎನ್ನುವುದು ಯಾವಾಗಲೂ ಶ್ರೀಮಂತ ಕುಟುಂಬದಿಂದಲೇ ಆರಂಭವಾಗುವುದಿಲ್ಲ. ಮಹಾರಾಷ್ಟ್ರದ ಅಶೋಕ್ ಖಾಡೆ ಅವರ ಜೀವನ ಇದಕ್ಕೆ ಉತ್ತಮ ಉದಾಹರಣೆ. ಚಪ್ಪಲಿ ಹೊಲೆಯುತ್ತಿದ್ದ ತಂದೆ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ತಾಯಿಯ ಮಗನಾಗಿ ಬೆಳೆದ ಅವರು, ಕಷ್ಟಗಳನ್ನು ಮೆಟ್ಟಿನಿಂತು ಇಂದು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 2026ರಲ್ಲಿ ಅವರಿಗೆ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೆಡ್ ಗ್ರಾಮದಲ್ಲಿ ಜನಿಸಿದ ಅಶೋಕ್ ಖಾಡೆ ಆರು ಮಕ್ಕಳಲ್ಲಿ ಒಬ್ಬರು. ಬಾಲ್ಯದಲ್ಲೇ ಆರ್ಥಿಕ ಸಂಕಷ್ಟವನ್ನು ಕಂಡ ಅವರು, ಮುಂದೆ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿ ಬೆಳೆಸಿಕೊಂಡರು.
1975ರಲ್ಲಿ ಮುಂಬೈನ ಮಜಗಾಂವ್ ಡಾಕ್‌ನಲ್ಲಿ ಕೆಲಸಕ್ಕೆ ಸೇರಿದ ಅವರು ಆರಂಭದಲ್ಲಿ ವೆಲ್ಡಿಂಗ್ ಅಪ್ರೆಂಟಿಸ್ ಆಗಿ ತಿಂಗಳಿಗೆ ಸುಮಾರು ₹90 ಸಂಬಳ ಪಡೆಯುತ್ತಿದ್ದರು. ಕೆಲಸದ ಜೊತೆಯಲ್ಲೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಪೂರ್ಣಗೊಳಿಸಿದರು. ಬಳಿಕ ಡ್ರಾಫ್ಟ್ಸ್‌ಮನ್ ಹಾಗೂ ಕ್ವಾಲಿಟಿ ಕಂಟ್ರೋಲ್ ವಿಭಾಗದಲ್ಲಿ ಕೆಲಸ ಮಾಡಿದರು.
ಜರ್ಮನಿ ಪ್ರವಾಸ ಬದಲಿಸಿತು ಜೀವನ
ಭಾರತದ ಜಲಾಂತರ್ಗಾಮಿ ಯೋಜನೆಯ ಭಾಗವಾಗಿ ಪಶ್ಚಿಮ ಜರ್ಮನಿಗೆ ತೆರಳಿದ ಅನುಭವ ಅಶೋಕ್ ಖಾಡೆ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು. ಅಲ್ಲಿನ ಆಧುನಿಕ ಮೆರೈನ್ ಎಂಜಿನಿಯರಿಂಗ್ ಮತ್ತು ಗುಣಮಟ್ಟದ ಮಾನದಂಡಗಳ ಪರಿಚಯ ಮುಂದಿನ ಉದ್ಯಮಕ್ಕೆ ಭದ್ರ ಅಡಿಪಾಯವಾಯಿತು.
ಸಹೋದರರೊಂದಿಗೆ ಆರಂಭಿಸಿದ DAS Offshore
ಸುಮಾರು 15 ವರ್ಷಗಳ ಮಜಗಾಂವ್ ಡಾಕ್ ಅನುಭವದ ಬಳಿಕ ಅಶೋಕ್ ಖಾಡೆ ತಮ್ಮ ಸಹೋದರರಾದ ದತ್ತಾ ಮತ್ತು ಸುರೇಶ್ ಅವರೊಂದಿಗೆ DAS Offshore ಸಂಸ್ಥೆ ಆರಂಭಿಸಿದರು. ಸಣ್ಣ ಫ್ಯಾಬ್ರಿಕೇಷನ್ ಗುತ್ತಿಗೆದಾರ ಸಂಸ್ಥೆಯಾಗಿ ಆರಂಭವಾದ ಉದ್ಯಮ, ನಂತರ ಆಫ್‌ಶೋರ್ ಎಂಜಿನಿಯರಿಂಗ್, ಫ್ಯಾಬ್ರಿಕೇಷನ್ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆದಿತು.
ಸಂಸ್ಥೆ ONGC ಸೇರಿದಂತೆ ಪ್ರಮುಖ ಸಂಸ್ಥೆಗಳಿಗಾಗಿ ಹಲವು ಯೋಜನೆಗಳನ್ನು ಕೈಗೊಂಡಿದೆ. ಸರ್ಕಾರದ ಮಾಹಿತಿಯ ಪ್ರಕಾರ, DAS 270ಕ್ಕೂ ಹೆಚ್ಚು ಆಫ್‌ಶೋರ್ ಯೋಜನೆಗಳು ಹಾಗೂ 70ಕ್ಕೂ ಹೆಚ್ಚು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ.
ಬಡತನದಿಂದ ಪದ್ಮಶ್ರೀವರೆಗೆ!
ಇಂದು DAS Offshore ನ ವ್ಯವಹಾರ ₹350 ಕೋಟಿಗೂ ಮೀರಿದ ಮಟ್ಟ ತಲುಪಿದೆ. ಆರ್ಥಿಕ ಏರಿಳಿತಗಳ ನಡುವೆಯೂ ಸಂಸ್ಥೆಯನ್ನು ಮುನ್ನಡೆಸಿದ ಅಶೋಕ್ ಖಾಡೆ ಅವರಿಗೆ 2026ರ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಅವರ ಪಯಣ, ಕೌಶಲ್ಯ, ಪರಿಶ್ರಮ ಮತ್ತು ಧೈರ್ಯದಿಂದ ಹಿನ್ನೆಲೆಯನ್ನೇ ಬದಲಿಸಬಹುದು ಎಂಬುದಕ್ಕೆ ಪ್ರೇರಣಾದಾಯಕ ಉದಾಹರಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ