ತಿಮ್ಮಪ್ಪಗೆ ಕೊರೋನಾ ಹೊಡೆತ: ಹುಂಡಿ ಸಂಗ್ರಹ ಸಾರ್ವಕಾಲಿಕ ಕನಿಷ್ಠ!

By Kannadaprabha NewsFirst Published May 4, 2021, 8:35 AM IST
Highlights

ತಿಮ್ಮಪ್ಪಗೆ ಕೊರೋನಾ ಹೊಡೆತ: ಹುಂಡಿ ಸಂಗ್ರಹ ಸಾರ್ವಕಾಲಿಕ ಕನಿಷ್ಠ| ಏ.29ರಂದು ಕೇವಲ 62 ಲಕ್ಷ ಸಂಗ್ರಹ| ಇದು ಏಕದಿನದ ಕನಿಷ್ಠ ಸಂಗ್ರಹದ ದಾಖಲೆ

ತಿರುಮಲ(ಮೇ.04): ಕೋವಿಡ್‌ 2ನೇ ಅಲೆ ತಿರುಪತಿ ತಿಮ್ಮಪ್ಪನ ದೇಗುಲದ ಹುಂಡಿ ಆದಾಯಕ್ಕೆ ಭಾರೀ ಹೊಡೆತ ನೀಡಿದೆ. ಏಪ್ರಿಲ್‌ 29ರಂದು ಹುಂಡಿಯಲ್ಲಿ ಕೇವಲ 62 ಲಕ್ಷ ರು. ಸಂಗ್ರಹವಾಗಿದ್ದು, ಸಾರ್ವಕಾಲಿಕ ಕನಿಷ್ಠವಾಗಿದೆ.

ಕೊರೋನಾ 1ನೇ ಅಲೆ ಮುಗಿದ ನಂತರ ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು. ಅನ್‌ಲಾಕ್‌ ಆದ ನಂತರ ತಿಮ್ಮಪ್ಪ ಗತವೈಭವಕ್ಕೆ ಮರಳಿ, ಒಂದೇ ತಿಂಗಳು 85 ಕೋಟಿ ರು. ಸಂಗ್ರಹವಾಗಿತ್ತು. ಏಪ್ರಿಲ್‌ ಮೊದಲಾರ್ಧದಲ್ಲಿ ನಿತ್ಯ 50 ಸಾವಿರ ಭಕ್ತರು ಬರುತ್ತಿದ್ದರು.

"

ಆದರೆ 2ನೇ ಅಲೆ ಅಬ್ಬರ ಹೆಚ್ಚಾದ ಕಾರಣ ಟಿಟಿಡಿ ಟಿಕೆಟ್‌ ನೀಡಿಕೆ ಕಡಿತಗೊಳಿಸಿತ್ತು. ಏಪ್ರಿಲ್‌ 15ರಿಂದ 30ರ ಅವಧಿಯ 5 ದಿನದಲ್ಲಿ ಮಾತ್ರ 20 ಸಾವಿರಕ್ಕೂ ಹೆಚ್ಚು ಭಕ್ತರು ಬಂದಿದ್ದಾರೆ. ಉಳಿದ 10 ದಿನದಲ್ಲಿ 20 ಸಾವಿರಕ್ಕಿಂತ ಕಡಿಮೆ ಭಕ್ತರು ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಏಪ್ರಿಲ್‌ 29ರಂದು 9,640 ಹಾಗೂ ಏಪ್ರಿಲ್‌ 30ರಂದು 6,431 ಭಕ್ತರಷ್ಟೇ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಈ ಅವಧಿಯಲ್ಲಿ ಏಪ್ರಿಲ್‌ 29ರಂದು ಹುಂಡಿಯಲ್ಲಿ ಕೇವಲ 62 ಲಕ್ಷ ರು. ಮಾತ್ರ ಸಂಗ್ರಹವಾಗಿದೆ. ಇದು ಸಾರ್ವಕಾಲಿಕ ಕನಿಷ್ಠ. ಆ ಪಾಕ್ಷಿಕದ ಉಳಿದ 14 ದಿನಗಳ ಪೈಕಿ 11 ದಿನ ಹುಂಡಿ ಸಂಗ್ರಹ ದಿನಕ್ಕೆ 2 ಕೋಟಿ ರು. ದಾಟಿಲ್ಲ. ಇನ್ನು 3 ದಿನ 1 ಕೋಟಿ ರು. ಕೂಡ ದಾಟಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!