
ನವದೆಹಲಿ: ದೆಹಲಿಯತ್ತ ಹರಿಯುವ ಯಮುನಾ ನದಿಗೆ ಹರ್ಯಾಣದ ಬಿಜೆಪಿ ಸರ್ಕಾರ ವಿಷ ಬೆರೆಸಿ ನರಮೇಧ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ 2ನೇ ನೋಟಿಸ್‌ಗೆ ಸ್ವತಃ ಆಯೋಗದ ಕಚೇರಿಗೆ ತೆರಳಿ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಉತ್ತರ ನೀಡಿದ್ದಾರೆ.
ಅದರಲ್ಲಿ ‘ನಾನು ವಿಷ ಎಂದದ್ದು ನೀರಿನಲ್ಲಿರುವ ಅಮೋನಿಯಾಕ್ಕೆ. ಫೆ.5ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯ ಮೇಲೆ ಪ್ರಭಾವ ಬೀರಲು ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಯಮುನಾ ನದಿಗೆ ಅಮೋನಿಯಾ ಬೆರೆಸುವ ಮೂಲಕ ಸಾಮೂಹಿಕ ನರಮೇಧದ ಆರೋಪವನ್ನು ಆಪ್‌ನ ಮೇಲೆ ಹೊರಿಸುವ ಸಂಚು ರೂಪಿಸಿದ್ದರು’ ಎಂದು ಕೇಜ್ರಿವಾಲ್ ತಾವು ಸಲ್ಲಿಸಿದ 6 ಪುಟಗಳ ದೂರಿನಲ್ಲಿ ಆರೋಪಿಸಿದ್ದಾರೆ. ಕೇಜ್ರಿವಾಲ್‌ಗೆ ಸಿಎಂ ಆತಿಶಿ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಸಾಥ್ ನೀಡಿದ್ದು, ಈ ವೇಳೆ ಅಮೋನಿಯಾ ಬೆರೆತ ನೀರಿನ 6 ಬಾಟಲಿಗಳನ್ನೂ ಕೊಂಡೊಯ್ದಿದ್ದರು.
ಈ ವೇಳೆ ಮಾತನಾಡಿದ ಆಪ್ ಸಂಸದ ಸಂಜಯ್ ಸಿಂಗ್, ‘ದೆಹಲಿಗೆ ವಿಷಕಾರಿ ನೀರು ಕಳಿಸಲು ಬಿಜೆಪಿಗರು ಮಾಡುತ್ತಿರುವ ಸಂಚಿನ ಬಗ್ಗೆ ಕೇಜ್ರಿವಾಲ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಚುನಾವಣಾ ಆಯೋಗವು ಈ ಸಂಬಂಧ ತನಿಖೆ ನಡೆಸುವ ಭರವಸೆ ನೀಡಿದೆ’ ಎಂದರು.
ಇದನ್ನೂ ಓದಿ: ದೆಹಲಿ ಚುನಾವಣೆ: ಎಎಪಿ ಭರ್ಜರಿ ಭರವಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್, ಮೆಟ್ರೋದಲ್ಲಿ ಅರ್ಧ ರೇಟ್!
ಯಮುನಾ ನದಿಗೆ ಹರ್ಯಾಣ ಬಿಜೆಪಿಗರು ವಿಷ ಬೆರೆಸಿದ್ದಾರೆ ಎಂಬ ತಮ್ಮ ಆರೋಪ ಸಂಬಂಧ ಕೇಜ್ರಿವಾಲ್ ಬುಧವಾರ ಆಯೋಗಕ್ಕೆ ಉತ್ತರ ನೀಡಿದ್ದರು. ಆದರೆ ಉತ್ತರ ಸಮರ್ಪಕವಾಗಿಲ್ಲ. ದೆಹಲಿ ಜಲ ಮಂಡಳಿಯವರು ಎಲ್ಲಿ? ಯಾವಾಗ? ಹೇಗೆ ನೀರಿನ ಪರೀಕ್ಷೆ ಮಾಡಿದ್ದರು. ಮಾಡಿದ್ದ ಎಂಜಿನಿಯರ್ ಯಾರು? ನೀರಿನಲ್ಲಿ ಯಾವ ರೀತಿ ವಿಷಯ ಇತ್ತು? ಅದರ ಪ್ರಮಾಣವೇನು? ಅದರ ಗುಣಲಕ್ಷಣಗಳೇನು? ಯಮುನೆಯನ್ನು ವಿಷಯುಕ್ತಗೊಳಿಸಿದ್ದು ಹೇಗೆ? ಅದನ್ನು ಕುಡಿದರೆ ಸಾಮೂಹಿಕ ಹತ್ಯಾಕಾಂಡ ಆಗಿ ಹೋದೀತು ಎಂಬ ಆರೋಪಕ್ಕೆ ನಿರ್ದಿಷ್ಟ ಉತ್ತರ ನೀಡಿ ಎಂದು ಆಯೋಗ ಮತ್ತೆ ಕೇಜ್ರಿವಾಲ್‌ಗೆ ನೋಟಿಸ್ ನೀಡಿತ್ತು.
ವಿವಾದಕ್ಕೆ ಕಾರಣವೇನು?
ಚುನಾವಣೆ ಹೊತ್ತಿನಲ್ಲಿ ಆಪ್‌ಗೆ ಕಳಂಕ ಹೊರಿಸಲು ಬಿಜೆಪಿ ಸಂಚು ರೂಪಿಸಿದೆ. ಇದಕ್ಕಾಗಿಯೇ ಯಮುನಾ ನದಿಗೆ ವಿಷಪೂರಿತ ಕೈಗಾರಿಕಾ ತ್ಯಾಜ್ಯವನ್ನು ಉದ್ದೇಶಪೂರ್ವಕವಾಗಿ ಸೇರಿಸುತ್ತಿದೆ. ಈ ಮೂಲಕ ನದಿಯನ್ನು ವಿಷಪೂರಿತವಾಗಿ ಮಾಡುತ್ತಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪಿಸಿದ್ದರು.
ಇದನ್ನೂ ಓದಿ: ಅಭ್ಯರ್ಥಿಯ ಪಾದ ಮುಟ್ಟಿ 3 ಬಾರಿ ನಮಸ್ಕರಿಸಿದ ಪ್ರಧಾನಿ ಮೋದಿ; ಯಾರು ಈ ಬಿಜೆಪಿ ನಾಯಕ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ