ದೆಹಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿ ರವೀಂದ್ರ ನೇಗಿ ಅವರ ಪಾದಗಳನ್ನು ಮುಟ್ಟಿ ಮೂರು ಬಾರಿ ನಮಸ್ಕರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರವೀಂದ್ರ ನೇಗಿ ಯಾರೆಂಬ ಕುತೂಹಲ ಮೂಡಿದೆ.
ನವದೆಹಲಿ: ದೇಶದ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಕಮಲ ಬಾವುಟ ಹಿಡಿದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಬುಧವಾರ ದೆಹಲಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ರವೀಂದ್ರ ನೇಗಿ ಅವರ ಪಾದಗಳನ್ನು ಮುಟ್ಟಿ ಪ್ರಧಾನಿಗಳು ಮೂರು ಬಾರಿ ನಮಸ್ಕರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಜನರು ಈ ರವೀಂದ್ರ ನೇಗಿ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಬುಧವಾರ ದೆಹಲಿಯ ಕರವಾಲ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಪ್ರಚಾರ ನಡೆಸಿದ್ದರು.
ಚುನಾವಣಾ ಪ್ರಚಾರದ ವೇದಿಕೆ ಮೇಲೆ ಬಂದ ಪಟ್ಟರ್‌ಗಂಜ್ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ, ಪ್ರಧಾನಿ ಮೋದಿ ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದರು. ಕೂಡಲೇ ಪ್ರಧಾನಿಗಳು ಪ್ರತಿಯಾಗಿ ಮೂರು ಬಾರಿ ರವೀಂದ್ರ ಸಿಂಗ್ ನೇಗಿ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದರು. ರವೀಂದ್ರ ಸಿಂಗ್ ನೇಗಿ ಬಳಿಕ ವಿಶ್ವಾಸ ನಗರದ ಅಭ್ಯರ್ಥಿ ಓಂ ಪ್ರಕಾಶ್ ಶರ್ಮಾ ಸಹ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಪಡೆಯಲು ಮುಂದಾದರು. ಆದರೆ ನಮಸ್ಕರಿಸಲು ಬಂದ ಓಂ ಪ್ರಕಾಶ್ ಶರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಡೆದರು. ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ತಮಗೆ ನಮಸ್ಕರಿಸಿದ ನಾಯಕರಿಗೆ ಪ್ರತಿಯಾಗಿ ನಮಸ್ಕರಿಸಿದ್ದರು.
ಸದ್ಯ ರವೀಂದ್ರ ನೇಗಿ ಅವರಿಗೆ ಮೂರು ಬಾರಿ ನಮಸ್ಕರಿಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಸಹ ಯಾರು ಈ ರವೀಂದ್ರ ನೇಗಿ ಎಂದು ಹುಡುಕುತ್ತಿದ್ದಾರೆ. ರವೀಂದ್ರ ಸಿಂಗ್ ನೇಗಿ ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಉಚಿತ ಸ್ಕೀಂ ತಪ್ಪಲ್ಲ ಎಂದು ಮೋದಿ ಅರ್ಥ ಮಾಡಿಕೊಳ್ಳಲಿ: ಬಿಜೆಪಿ ಪ್ರಣಾಳಿಕೆಗೆ ಕೇಜ್ರಿವಾಲ್ ಟಾಂಗ್
ಯಾರು ಈ ರವೀಂದ್ರ ನೇಗಿ?
45 ವರ್ಷದ ರವೀಂದ್ರ ಸಿಂಗ್ ನೇಗಿ, ಪಟ್ಟರ್‌ಗಂಜ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆರ್‌ಎಸ್‌ಎಸ್‌ನಲ್ಲಿಯೂ ರವೀಂದ್ರ ನೇಗಿ ಗುರುತಿಸಿಕೊಂಡಿದ್ದು, ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಸದಸ್ಯರಾಗಿದ್ದಾರೆ. ವಿನೋದ್ ನಗರ ವಾರ್ಡ್ -198ರಿಂದ ಕೌನ್ಸಿಲರ್ ಆಗಿದ್ದಾರೆ. ರವೀಂದ್ರ ಸಿಂಗ್ ನೇಗಿ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಅವಧ್ ಓಜಾ ಸ್ಪರ್ಧೆ ಮಾಡಿದ್ದಾರೆ. 2013ರಿಂದಲೀ ಪಟ್ಟರ್‌ಗಂಜ್ ಎಎಪಿ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಮಾಜಿ ಡಿಸಿಎಂ ಮನಿಶ್ ಸಿಸೊಡಿಯಾ ಪಟ್ಟರ್‌ಗಂಜ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಕ್ಷೇತ್ರದಿಂದ ಹೊರ ಬಂದಿರುವ ಕಾರಣ ಯುಪಿಎಸ್‌ಸಿ ಕೋಚ್ ಆಗಿರುವ ಅವಧ್ ಓಜಾ ಅವರಿಗೆ ಟಿಕೆಟ್ ನೀಡಿದೆ. ಈ ಭಾಗದಲ್ಲಿ ಓಜಾ ಸರ್ ಅಂತಾನೇ ಇವರು ಫೇಮಸ್ ಆಗಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮುನ್ನ ಅವಧ್ ಓಜಾ ಎಎಪಿ ಪಕ್ಷ ಸೇರ್ಪಡೆಯಾಗಿದ್ದರು.
ದೆಹಲಿ ಚುನಾವಣೆ ದಿನಾಂಕ
ದೆಹಲಿ 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆ.5 ರಂದು ಮತದಾನ ನಡೆಯಲಿದೆ. 1.55 ಕೋಟಿಗೂ ಹೆಚ್ಚು ದೆಹಲಿ ಮತದಾರರು ಮತ ಚಲಾಯಿಸಲಿದ್ದಾರೆ ಮತ್ತು ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. 70 ಕ್ಷೇತ್ರಗಳಲ್ಲಿ 2 ಮೀಸಲು ಕ್ಷೇತ್ರಗಳಾಗಿವೆ. 13,033 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.
ಇದನ್ನೂ ಓದಿ: ಕುರ್ತಾ-ಪೈಜಾಮಾ ಹೊಲಿಸಿಕೊಳ್ಳಲು ಕ್ಯೂನಲ್ಲಿ ನಿಂತ ದೆಹಲಿಯ ಗಂಡೈಕ್ಳು; ಟ್ರೈಲರ್‌ಗಳು ಫುಲ್ ಬ್ಯುಸಿ
