
ನವದೆಹಲಿ(ಜೂ.09): ಪೂರ್ವ ಲಡಾಖ್‌ನಲ್ಲಿ ಸಂಘರ್ಷ ತಿಳಿಗೊಳಿಸುವ ಸೇನಾ ಹಿಂತೆಗೆತ ಒಪ್ಪಂದವನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದ ಚೀನಾ, ಮತ್ತೊಂದೆಡೆ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಯುದ್ಧ ವಿಮಾನಗಳ ಮೂಲಕ ಭರ್ಜರಿ ತಾಲೀಮು ನಡೆಸಿದ ವಿಷಯ ಬೆಳಕಿಗೆ ಬಂದಿದೆ. ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ವಾರದ ಹಿಂದೆ ಪೂರ್ವ ಲಡಾಖ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಚೀನಾ ಇಂಥದ್ದೊಂದು ತಾಲೀಮು ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪೂರ್ವ ಲಡಾಖ್‌ಗೆ ಅಭಿಮುಖವಾಗಿರುವ ಪ್ರದೇಶದಲ್ಲಿ ಚೀನಾ ಸೇನೆ ಇತ್ತೀಚೆಗೆ ಕನಿಷ್ಠ 20-22 ಯುದ್ಧ ವಿಮಾನಗಳನ್ನು ಬಳಸಿ ತಾಲೀಮು ನಡೆಸಿವೆ. ಈ ತಾಲೀಮಿನ ವೇಳೆ ಜೆ-11ಎಸ್, ಜೆ-16 ಯುದ್ಧ ವಿಮಾನಗಳು ಕೂಡ ಭಾಗಿಯಾಗಿದ್ದವು ಎನ್ನಲಾಗಿದೆ. ಹೊಟಾನ್, ಗರ್ ಗುನ್ಸಾ, ಕಶ್ಗರ್ ವಾಯುನೆಲೆಗಳ ಮೂಲಕ ಈ ತಾಲೀಮು ನಡೆಸಲಾಗಿದೆ. ಈ ವಾಯುನೆಲೆಗಳನ್ನು ಇತ್ತೀಚೆಗಷ್ಟೇ ಚೀನಾ ಸರ್ಕಾರ ಹೊಸದಾಗಿ ಸಜ್ಜುಗೊಳಿಸಿದ್ದು, ಅಲ್ಲಿ ನಿಯೋಜಿಸಲಾಗಿರುವ ವಿಮಾನಗಳ ಸಂಖ್ಯೆ ನೆರೆಯ ದೇಶಗಳಿಗೆ ತಿಳಿಯದಿರಲಿ ಎನ್ನುವ ಕಾರಣಕ್ಕೂ ಸುತ್ತಲೂ ದೊಡ್ಡ ಗೋಡೆಯನ್ನೇ ಕಟ್ಟಿದೆ.
ಈ ತಾಲೀಮೀನ ವೇಳೆ ಯಾವುದೇ ಹಂತದಲ್ಲೂ ಚೀನಾ ವಿಮಾನಗಳು ಆ ದೇಶದ ವಾಯುಸರಹದ್ದನ್ನು ದಾಟಿ ಬಂದಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮೇಲೆ ಭಾರತೀಯ ಸೇನೆ ಅತ್ಯಂತ ಹದ್ದಿನಗಣ್ಣಿನಿಂದ ನಿಗಾ ಇಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಭಾರೀ ಸಂಘರ್ಷ ನಡೆದು, ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದರೆ ಇದೇ ವೇಳೆ ಚೀನಾದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು.
ಜೊತೆಗೆ 45 ವರ್ಷಗಳಲ್ಲೇ ಮೊದಲ ಬಾರಿಗೆ ಗುಂಡಿನ ದಾಳಿ ನಡೆಸುವ ಮೂಲಕ ಚೀನಾ ಯೋಧರು ಭಾರತವನ್ನು ಕೆಣಕಿದ್ದರು. ತದನಂತರದಲ್ಲಿ ಉಭಯ ದೇಶಗಳು ಗಡಿಯಲ್ಲಿ ಭಾರೀ ಸೇನಾ ಜಮಾವಣೆ ಮಾಡಿದ್ದವು. ಹೀಗಾಗಿ ಮತ್ತೊಂದು ಯುದ್ಧದ ಭೀತಿ ನಿರ್ಮಾಣವಾಗಿತ್ತು. ಆದರೆ ನಂತರದ ದಿನಗಳಲ್ಲಿ ಉಭಯ ದೇಶಗಳು ಮಾತುಕತೆ ಮೂಲಕ ಶಾಂತಿ ಮರುಸ್ಥಾಪನೆಗೆ ಒಪ್ಪಿದ್ದವು. ಅದರ ಭಾಗವಾಗಿ ಹಂತಹಂತವಾಗಿ ಕಾಲಮಿತಿಯಲ್ಲಿ ಸೇನಾ ಜಮಾವಣೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂಪಡೆಯಲು ಒಪ್ಪಿದ್ದವು. ಆದರೆ ಚೀನಾ ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿತ್ತಾದರೂ, ಗಡಿಯಲ್ಲಿ ನಿಯೋಜಿಸಿದ್ದ ಎಚ್‌ಕ್ಯ-9, ಎಚ್‌ಕ್ಯು-16 ವಾಯು ರಕ್ಷಣಾ ವ್ಯವಸ್ಥೆಯನ್ನೂ ಇನ್ನೂ ಹಿಂದಕ್ಕೆ ಕರೆಸಿಕೊಂಡಿಲ್ಲ. ಹೀಗಾಗಿ ಭಾರತ ಕೂಡಾ ಸೇನಾ ಹಿಂಪಡೆತದ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ