
ನವದೆಹಲಿ/ಶ್ರೀನಗರ(ಏ.27): ಕೊರೋನಾ ವೈರಸ್‌ನಿಂದ ಪಾಕಿಸ್ತಾನದಲ್ಲಿ ನೂರಾರು ಜನರು ಸಾಯುತ್ತಿದ್ದರೂ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳುವ ಹಳೆಯ ಚಟವನ್ನು ಮಾತ್ರ ಆ ದೇಶ ಬಿಟ್ಟಿಲ್ಲ. ಕಾಶ್ಮೀರದ ಗಡಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗುಂಟ 16 ಲಾಂಚ್ ಪ್ಯಾಡ್‌ಗಳನ್ನು ಪಾಕಿಸ್ತಾನ ಇತ್ತೀಚೆಗೆ ಸಕ್ರಿಯಗೊಳಿಸಿದ್ದು, ಸುಮಾರು 300 ಉಗ್ರರು ಭಾರತದ ಗಡಿಯೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ಭಾರತಕ್ಕೆ ನುಸುಳಲು ಕಾಯುತ್ತಿರುವವರಲ್ಲಿ ಲಷ್ಕರ್ ಎ ತೊಯ್ಬಾ, ಹಿಜ್ಬುಲ್ ಮುಜಾಹಿದೀನ್ ಮುಂತಾದ ಸಂಘಟನೆಯ ಉಗ್ರರು ಇದ್ದಾರೆ. ಇವರಿಗೆ ಪಾಕಿಸ್ತಾನದ ಗುಪ್ತದಳವಾದ ಐಎಸ್‌ಐ ಮತ್ತು ಸೇನೆ ನೆರವು ನೀಡುತ್ತಿದೆ. ಈ ಕುರಿತು ಮಾಹಿತಿ ಕಲೆಹಾಕಿರುವ ಭಾರತೀಯ ಸೇನೆ, ತನ್ನ ಕಾರ್ಯಾಚರಣೆಯ ವಿಧಾನವನ್ನು ಬದಲಿಸಿಕೊಳ್ಳಲು ನಿರ್ಧರಿಸಿದೆ.
ಕಾಶ್ಮೀರದ ಗಡಿಯಲ್ಲಿ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲೆ.ಜ. ಬಿ.ಎಸ್.ರಾಜು ಅವರು ಗಡಿಯಲ್ಲಿ ಪಹರೆ ಬಿಗಿಗೊಳಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕ್‌ನಿಂದ ನುಸುಳುವ ಉಗ್ರರು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುವುದರ ಜೊತೆಗೆ, ಅವರಿಗೆ ಕೊರೋನಾ ವೈರಸ್ ಸೋಂಕಿದ್ದರೆ ಅದು ಭಾರತದಲ್ಲೂ ಹರಡುವ ಭೀತಿ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಪಾಕ್ ಆಕ್ರಮಿತ ಕಾಶ್ಮೀರದ ನೌಶೇರಾ ಹಾಗೂ ಛಾಂಬ್‌ನಂತಹ ಕಡಿದಾದ ಪ್ರದೇಶದಿಂದ ಕಾಶ್ಮೀರದ ಗುಲ್ಮಾರ್ಗ್ ಪ್ರದೇಶಕ್ಕೆ ಉಗ್ರರು ನುಸುಳುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಭಾರತೀಯ ಸೇನೆ ಹೆಚ್ಚು ಕಟ್ಟೆಚ್ಚರ ವಹಿಸಿದೆ. ಕಳೆದ ಒಂದು ವಾರದಿಂದ ಗಡಿಯಲ್ಲಿ ಉಗ್ರರು ಹಾಗೂ ಪಾಕ್ ಸೇನೆಯ ಚಟುವಟಿಕೆ ತೀವ್ರಗೊಂಡಿದ್ದು, ಭಾರತೀಯ ಯೋಧರು ಹತ್ತಾರು ಉಗ್ರರು ಮತ್ತು ಪಾಕ್ ಸೈನಿಕರನ್ನು ಕೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ