Covid 19 Third Wave: ಸತತ 3ನೇ ದಿನ 1.50 ಲಕ್ಷ ಕೇಸು: 227 ಜನ ಕೊರೋನಾಗೆ ಬಲಿ!

By Kannadaprabha News  |  First Published Jan 12, 2022, 7:35 AM IST

*ನಿನ್ನೆ 1.68 ಲಕ್ಷ ಕೇಸು, 227 ಸೋಂಕಿತರ ಸಾವು
*ಸಕ್ರಿಯ ಕೇಸು 8.21 ಲಕ್ಷಕ್ಕೆ ಹೆಚ್ಚಳ, 7 ತಿಂಗಳ ಗರಿಷ್ಠ
*6 ವಾರದಲ್ಲಿ ಯುರೋಪ್‌ನ ಶೇ.50ರಷ್ಟುಜನರಿಗೆ ಒಮಿಕ್ರೋನ್‌
*ಅಮೆರಿಕದಲ್ಲಿ ದಾಖಲೆಯ 1.42 ಲಕ್ಷ ಜನ ಆಸ್ಪತ್ರೆಗೆ!


ನವದೆಹಲಿ (ಜ. 12): ದೇಶದಲ್ಲಿ ಮಂಗಳವಾರ 1.68 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು (Covid 19) ದೃಢಪಟ್ಟಿದ್ದು, 227 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸತತ ಮೂರನೇ ದಿನವೂ ದೇಶದಲ್ಲಿ 1.50 ಲಕ್ಷಕ್ಕಿಂತ ಹೆಚ್ಚಿನ ಕೇಸು ದಾಖಲಾದಂತೆ ಆಗಿದೆ. ಆದರೆ ಸೋಮವಾರಕ್ಕೆ ಹೋಲಿಸಿದರೆ ಕೊರೋನಾ ಕೇಸುಗಳ ಸಂಖ್ಯೆ 11 ಸಾವಿರದಷ್ಟು ತಗ್ಗಿದೆ. ಸೋಮವಾರ 1,79,723 ಕೇಸು ದೃಢಪಟ್ಟಿದ್ದರೆ, ಮಂಗಳವಾರ ಅದು 1,68,063ಕ್ಕೆ ಇಳಿದಿದೆ. ಆದರೆ ಕೇವಲ 69,959 ಜನ ಗುಣಮುಖರಾದ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 8,21,446ಕ್ಕೇರಿದೆ. ಇದು 208 ದಿನ (7 ತಿಂಗಳ) ಗರಿಷ್ಠ. ಒಂದೇ ದಿನದಲ್ಲಿ 97,827 ಸಕ್ರಿಯ ಪ್ರಕರಣ ಹೆಚ್ಚಿವೆ. ಇನ್ನು 277 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇ.10.64ರಷ್ಟು ದಾಖಲಾಗಿದೆ ಹಾಗೂ ಗುಣಮುಖರ ಪ್ರಮಾಣ ಶೇ.96.36ಕ್ಕೆ ಇಳಿದಿದೆ.

ಒಮಿಕ್ರೋನ್‌ ಸಂಖ್ಯೆ 4661ಕ್ಕೇರಿಕೆ:

Tap to resize

Latest Videos

undefined

ಈ ನಡುವೆ, 428 ಒಮಿಕ್ರೋನ್‌ ಪ್ರಕರಣಗಳು (Omicron Variant) ಮಂಗಳವಾರ ವರದಿಯಾಗಿವೆ. ಹೀಗಾಗಿ ಒಮಿಕ್ರೋನ್‌ ಪೀಡಿತರ ಸಂಖ್ಯೆ 4461ಕ್ಕೇರಿದೆ. ಈ ಪೈಕಿ 1711 ಜನರು ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲೇ ಅತ್ಯಧಿಕ 1247 ಒಮಿಕ್ರೋನ್‌ ಪ್ರಕರಣ ಈವರೆಗೆ ದೃಢಪಟ್ಟಿವೆ.

6 ವಾರದಲ್ಲಿ ಯುರೋಪ್‌ನ ಶೇ.50ರಷ್ಟುಜನರಿಗೆ ಒಮಿಕ್ರೋನ್‌

ಯುರೋಪ್‌ ಖಂಡದಲ್ಲಿ ಒಮಿಕ್ರೋನ್‌ ರೂಪಾಂತರಿ ತಳಿಯ ಸೋಂಕು ಶರವೇಗದಲ್ಲಿ ವ್ಯಾಪಿಸುತ್ತಿದ್ದು, ಕಳೆದ ವಾರ 70 ಲಕ್ಷಕ್ಕೂ ಹೆಚ್ಚು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ. ಅಲ್ಲದೆ, ಇನ್ನು 6ರಿಂದ 8 ವಾರದಲ್ಲಿ ಯುರೋಪ್‌ನ ಅರ್ಧಕ್ಕರ್ಧ ಜನಸಂಖ್ಯೆ ಒಮಿಕ್ರೋನ್‌ ಪೀಡಿತರಾಗಲಿದ್ದಾರೆ ಎಂದೂ ಎಚ್ಚರಿಸಿದೆ.

ಇದನ್ನೂ ಓದಿ: Covid 19 Spike: ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 10,800 ಮಂದಿಗೆ ಸೋಂಕು

ಈ ಕುರಿತು ಮಾಹಿತಿ ನೀಡಿರುವ ಡಬ್ಲ್ಯುಎಚ್‌ಒ ಯುರೋಪ್‌ ನಿರ್ದೇಶಕ ಡಾ.ಹ್ಯಾನ್ಸ್‌ ಕ್ಲಜ್‌, ಯುರೋಪ್‌ನ 26 ದೇಶಗಳಲ್ಲಿ ಸರಾಸರಿ ಶೇ.1ಕ್ಕಿಂತ ಹೆಚ್ಚು ಜನರು ಪ್ರತಿ ವಾರ ಕೋವಿಡ್‌ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ದೇಶಗಳು ತಮ್ಮ ಆರೋಗ್ಯ ವ್ಯವಸ್ಥೆ ಕುಸಿಯದಂತೆ ಕಾಪಾಡಿಕೊಳ್ಳಲು ಇನ್ನು ಹೆಚ್ಚೇನೂ ಅವಕಾಶ ಉಳಿದಿಲ್ಲ. ವಾಷಿಂಗ್ಟನ್‌ ಯುನಿವರ್ಸಿಟಿಯ ಹೆಲ್ತ್‌ ಮೆಟ್ರಿಕ್ಸ್‌ ಸಂಸ್ಥೆಯ ಪ್ರಕಾರ ಪಶ್ಚಿಮ ಯುರೋಪ್‌ನ ಶೇ.50ರಷ್ಟುಜನರು ಮುಂಬರುವ 6-8 ವಾರದಲ್ಲಿ ಸೋಂಕು ಪೀಡಿತರಾಗಲಿದ್ದಾರೆ ಎಂದು ಹೇಳಿದ್ದಾರೆ.

ಒಮಿಕ್ರೋನ್‌ ತಳಿ ಇನ್ನೆಲ್ಲಾ ಕೋವಿಡ್‌ ತಳಿಗಳಿಗಿಂತ ವೇಗವಾಗಿ ಹರಡುತ್ತದೆ. ಹೀಗಾಗಿ ಒಳಾಂಗಣದಲ್ಲೂ ಜನರು ಮಾಸ್ಕ್‌ ಧರಿಸುವಂತೆ ದೇಶಗಳು ನೋಡಿಕೊಳ್ಳಬೇಕು. ಲಸಿಕೆ ಹಾಗೂ ಬೂಸ್ಟರ್‌ ಡೋಸ್‌ ನೀಡಿಕೆಯ ವೇಗ ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಅಮೆರಿಕದಲ್ಲಿ ದಾಖಲೆಯ 1.42 ಲಕ್ಷ ಜನ ಆಸ್ಪತ್ರೆಗೆ!

ಕೊರೋನಾದ ಒಮಿಕ್ರೋನ್‌ ರೂಪಾಂತರಿ ತಳಿ ಅಪಾಯಕಾರಿಯಲ್ಲ, ಅದರ ಸೋಂಕು ತಗಲಿದರೆ ಆಸ್ಪತ್ರೆಗೆ ಹೋಗಬೇಕಿಲ್ಲ ಅಥವಾ ಸಾವು ಸಂಭವಿಸುವುದಿಲ್ಲ ಎಂಬ ನಂಬಿಕೆಯನ್ನು ಹುಸಿಗೊಳಿಸುವಂತೆ ಅಮೆರಿಕದಲ್ಲಿ (USA) ದಾಖಲೆಯ 14388 2 ಲಕ್ಷ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಅಮೆರಿಕದಲ್ಲಿ ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾದವರಿಗಿಂತ (142314) ಹೆಚ್ಚು.

ಇದನ್ನೂ ಓದಿ: Covid In Bengaluru: 'ಲಕ್ಷಣರಹಿತ ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್‌'

ಅಮೆರಿಕದಲ್ಲಿ ಒಮಿಕ್ರೋನ್‌ ವ್ಯಾಪಕವಾಗಿದ್ದು, ಕಳೆದ ಮೂರು ವಾರಗಳಲ್ಲಿ ಡೆಲ್ಟಾವನ್ನು ಮೀರಿಸಿ ಎಲ್ಲೆಡೆ ಹರಡಿದೆ. ಡೆಲ್ವೇರ್‌, ಇಲಿನಾಯ್‌್ಸ, ಮೇರಿಲ್ಯಾಂಡ್‌, ಮಿಸೌರಿ, ಓಹಿಯೋ, ಪೆನ್ಸಿಲ್ವೇನಿಯಾ, ಪ್ಯೂರ್ಟೊರಿಕೋ, ವರ್ಜಿನ್‌ ಐಲ್ಯಾಂಡ್ಸ್‌, ವರ್ಮೌಂಟ್‌, ವರ್ಜೀನಿಯಾ, ವಾಷಿಂಗ್ಟನ್‌ ಡಿ.ಸಿ. ಹಾಗೂ ವಿಸ್ಕಾನ್ಸಿನ್‌ನಲ್ಲಿ ದಾಖಲೆ ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಆರು ದಿನಗಳಿಂದ ದೇಶದಲ್ಲಿ ನಿತ್ಯ 5 ಲಕ್ಷಕ್ಕೂ ಹೊಸ ಕೇಸುಗಳು ಪತ್ತೆಯಾಗುತ್ತಿವೆ. ಸಾವಿನ ಸಂಖ್ಯೆ ಸರಾಸರಿ 1400 ಇದ್ದುದು ಈಗ 1700ಕ್ಕೆ ಏರಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳು ಒಮಿಕ್ರೋನ್‌ ಕುರಿತ ಆತಂಕವನ್ನು ಹೆಚ್ಚಿಸಿವೆ.

ಒಮಿಕ್ರೋನ್‌ ನಿರುಪದ್ರವಿ ಎಂಬ ಭಾವನೆ ಬೇಡ ಎಂದು ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲಿ ಒಮಿಕ್ರೋನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಹೆಚ್ಚುತ್ತಿದೆ. ದೇಶದಲ್ಲಿ ಕೆಲ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಎದುರಾಗಿದೆ.

click me!