
ಹೈದರಾಬಾದ್‌ನ ಗಚ್ಚಿ ಬೌಲಿಯ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಭಾಷಾ ಇಲಾಖೆಯ ಸುವರ್ಣ ಮಹೋತ್ಸವದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಶಿಕ್ಷಣ, ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಹಿಂದಿಯ ಪ್ರಾಮುಖ್ಯತೆಯನ್ನ ತಿಳಿಸಿದರಲ್ಲದೇ ಅದನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಾಯಿಸಿದರು. ಹಿಂದಿಗೆ ಕುರುಡು ವಿರೋಧ ಸಮರ್ಥನೀಯವಲ್ಲ, ಭಾಷೆಯ ಬಗ್ಗೆ ಸಂಕುಚಿತ ಮನೋಭಾವನೆ ಬಿಟ್ಟು ಪ್ರಗತಿಯತ್ತ ಸಾಗಬೇಕು ಎಂದರು.
ಅಬ್ದುಲ್ ಕಲಾಂ ತಮಿಳಿಗರಾಗಿದ್ದರೂ ಹಿಂದಿ ಪ್ರೀತಿಸುತ್ತಿದ್ದರು
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಉದಾಹರಣೆಯನ್ನು ನೀಡಿದ ಪವನ್ ಕಲ್ಯಾಣ್, ತಮಿಳಿಗರಾಗಿದ್ದರೂ ಕಲಾಂ ಹಿಂದಿಯನ್ನು ಪ್ರೀತಿಸುತ್ತಿದ್ದರು. ನಾವು ಇಂಗ್ಲಿಷ್ ಆರಾಮವಾಗಿ ಮಾತನಾಡುತ್ತೇವೆ, ಆದರೆ ಹಿಂದಿ ಮಾತನಾಡಲು ಏಕೆ ಹಿಂಜರಿಯುತ್ತೇವೆ? ಎಂದು ಪ್ರಶ್ನಿಸಿದರು. ಭಾಷಾಭಿಮಾನವನ್ನು ಸಾಂಸ್ಕೃತಿಕ ಹೆಮ್ಮೆಗೆ ಜೋಡಿಸಬಾರದು ಎಂದು, ಮಾತೃಭಾಷೆ ತಾಯಿಯಂತೆ ಹಿಂದಿ ನಮಗೆ ಅಜ್ಜಿಯಂತೆ ಗೌರವಿಸಲು ಕರೆ ನೀಡಿದ ಅವರು, 'ಹೊಸ ಭಾಷೆಯನ್ನು ಕಲಿಯುವುದು ನಮ್ಮ ಗುರುತನ್ನು ಕೊನೆಗೊಳಿಸುವುದಿಲ್ಲ, ಬದಲಿಗೆ ಮುಂದುವರಿಯಲು ಅವಕಾಶ ನೀಡುತ್ತದೆ ಎಂದರು.
ಹಿಂದಿ ತಿರಸ್ಕಾರ ಭವಿಷ್ಯಕ್ಕೆ ಅಪಾಯ:
ಹಿಂದಿಯನ್ನು ರಾಜಕೀಯಗೊಳಿಸದೆ, ಮುಂದಿನ ಪೀಳಿಗೆಯ ಹಿತಾಸಕ್ತಿಗಾಗಿ ಯೋಚಿಸಬೇಕು. ಹಿಂದಿಯನ್ನು ತಿರಸ್ಕರಿಸುವುದು ಭವಿಷ್ಯದ ಅವಕಾಶಗಳ ಬಾಗಿಲು ಮುಚ್ಚಿದಂತೆ ಎಂದು ಪವನ್ ಕಲ್ಯಾಣ್ ಎಚ್ಚರಿಸಿದರು. ಆಂಧ್ರಪ್ರದೇಶ ಸರ್ಕಾರದ ಶಾಲೆಗಳಲ್ಲಿ ಹಿಂದಿಯನ್ನು ಐಚ್ಛಿಕ ವಿಷಯವಾಗಿ ಪ್ರಚಾರ ಮಾಡುವ ಯೋಜನೆಯನ್ನು ಬೆಂಬಲಿಸಿದ ಅವರು, ಇದು ಯುವಕರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಸ್ಪರ್ಧಾತ್ಮಕವಾಗಿಸಲಿದೆ ಎಂದರು. ಹಿಂದಿ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಆರಂಭಿಸುವ ಸರ್ಕಾರದ ಯೋಜನೆಯನ್ನೂ ಅವರು ಉಲ್ಲೇಖಿಸಿದರು.
ಏಕತೆಯ ಸಂಕೇತವಾಗಿ ಭಾಷೆ:
ಭಾಷೆಯನ್ನು ವಿಭಜನೆಯ ಸಾಧನವನ್ನಾಗಿ ಮಾಡದೆ, ಏಕತೆಯ ಮಾಧ್ಯಮವನ್ನಾಗಿಸಬೇಕು ಎಂದು ಪವನ್ ಕಲ್ಯಾಣ್ ಮನವಿ ಮಾಡಿದರು. ಈ ಸಮಾರಂಭವನ್ನು ಹಿಂದಿ ಭಾಷೆಯ ಪ್ರಚಾರ ಮತ್ತು ಸಂರಕ್ಷಣೆಗೆ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ