ತೆಲಂಗಾಣದಲ್ಲಿ ಜಗನ್‌ ಸೋದರಿಯ ಹೊಸ ಪಕ್ಷ!

By Suvarna NewsFirst Published Apr 11, 2021, 8:14 AM IST
Highlights

ತೆಲಂಗಾಣದಲ್ಲಿ ಜಗನ್‌ ಸೋದರಿಯ ಹೊಸ ಪಕ್ಷ| ಜು.8ರ ವೈಎಸ್ಸಾರ್‌ ಜನ್ಮದಿನದಂದು ಪಕ್ಷ ಉದಯ| ಟಿಆರ್‌ಎಸ್‌ಗೆ ಶರ್ಮಿಳಾ ಸಡ್ಡು| ರಾಜ್ಯದಲ್ಲಿ ಪ್ರಬಲ ವಿಪಕ್ಷದ ಕೊರತೆ| ಈ ಸ್ಥಾನ ತುಂಬಲು ವೈಎಸ್ಸಾರ್‌ ಪುತ್ರಿ ಸಿದ್ಧತೆ| ಆದರೆ ಸೋದರಿಯ ನಡೆ ಜಗನ್‌ಗೆ ಇಷ್ಟವಿಲ್ಲ

ಹೈದರಾಬಾದ್(ಏ.11)‌: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಪುತ್ರಿ ವೈ.ಎಸ್‌. ಶರ್ಮಿಳಾ ಅವರು ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದಾರೆ. ವೈಎಸ್ಸಾರ್‌ ಅವರ ಜನ್ಮದಿನವಾದ ಜುಲೈ 8ರಂದು ಹೊಸ ಪಕ್ಷ ಸ್ಥಾಪನೆಯಾಗಲಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ಅವರ ಸೋದರಿಯೂ ಆಗಿರುವ ಶರ್ಮಿಳಾ ಖಮ್ಮಂನಲ್ಲಿ ಸಭೆ ಉದ್ದೇಶಿಸಿ ಮಾತನಾಡಿ, ‘ಆಂಧ್ರಪ್ರದೇಶದಲ್ಲಿ ಜು.8ರಂದು ಹೊಸ ಪಕ್ಷ ಸ್ಥಾಪಿಸಲಿದ್ದೇನೆ. ಏಕಾಂಗಿಯಾಗಿ ನಮ್ಮ ಪಕ್ಷ ಹೋರಾಟ ನಡೆಸಲಿದೆ. ಬಿಜೆಪಿ, ತೆಲುಗುದೇಶಂ ಹಾಗೂ ಆಡಳಿತಾರೂಢ ಟಿಆರ್‌ಎಸ್‌ಗಳನ್ನು ಸಮಾನವಾಗಿ ಎದುರಿಸಲಿದೆ’ ಎಂದು ಘೋಷಿಸಿದರು.

ಈ ನಡುವೆ, ಶರ್ಮಿಳಾ ಅವರ ನಡೆಯನ್ನು ಅವರ ತಾಯಿ ವೈ.ಎಸ್‌. ವಿಜಯಲಕ್ಷ್ಮಿ ಬೆಂಬಲಿಸಿದ್ದಾರೆ. ‘ತೆಲಂಗಾಣ ಜನರ ಸೇವೆಗೆ ನಿರ್ಧರಿಸಿರುವ ನನ್ನ ಮಗಳ ನಡೆ ನನಗೆ ಸಂತೋಷ ತಂದಿದೆ’ ಎಂದಿದ್ದಾರೆ. ಆದರೆ, ಶರ್ಮಿಳಾ ನಡೆಯು ಸೋದರ ಜಗನ್‌ಗೆ ಇಷ್ಟವಿಲ್ಲ ಎನ್ನಲಾಗಿದ್ದು, ಮೌನ ವಹಿಸಿದ್ದಾರೆ.

ಶರ್ಮಿಳಾ ನಡೆ ಜಗನ್‌ಗೆ ಇಕ್ಕಟ್ಟು ಸೃಷ್ಟಿಸುವ ಸಾಧ್ಯತೆಯೂ ಇದೆ. ಏಕೆಂದರೆ ಖಮ್ಮಂ ರಾರ‍ಯಲಿಯಲ್ಲಿ ಮಾತನಾಡುವಾಗ, ‘ನಾನು ತೆಲಂಗಾಣ ಪಾಲಿನ ಒಂದು ಹನಿ ನೀರನ್ನು ಇನ್ನೊಂದು ರಾಜ್ಯಕ್ಕೆ ಹೋಗಲು ಬಿಡುವುದಿಲ್ಲ’ ಎಂದರು. ತೆಲಂಗಾಣ-ಆಂಧ್ರಪ್ರದೇಶ ಮಧ್ಯೆ ನದಿ ನೀರು ಹಂಚಿಕೆ ವಿವಾದ ಇದ್ದು, ಈ ಹಿನ್ನೆಲೆಯಲ್ಲಿ ಶರ್ಮಿಳಾ ಹೇಳಿಕೆ ಮಹತ್ವ ಪಡೆದಿದೆ.

ತೆಲಂಗಾಣದಲ್ಲಿ ಟಿಆರ್‌ಎಸ್‌ ಹೊರತುಪಡಿಸಿ ಮಿಕ್ಕ ಪಕ್ಷಗಳು ನಗಣ್ಯವಾಗಿವೆ. ಹೀಗಾಗಿ ಈ ಸ್ಥಾನ ತುಂಬಲು ಶರ್ಮಿಳಾ ಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

click me!