ಬೇರೆಯವರು ಸೆರೆ ಹಿಡಿದ ತನ್ನ ವೈರಲ್ ವೀಡಿಯೋದಿಂದ ಮನನೊಂದು ಸಾವಿಗೆ ಶರಣಾದ ಸ್ವಾಭಿಮಾನಿ ವೃದ್ಧ

By Anusha KbFirst Published Jun 24, 2024, 2:16 PM IST
Highlights

ಇಲ್ಲೊಬ್ಬರು ವೃದ್ಧರಿಗೆ ಮೊಬೈಲ್‌ನ ಗಂಧಗಾಳಿ ಇರಲಿಲ್ಲ, ಆದರೂ ಸೋಶಿಯಲ್ ಮೀಡಿಯಾದ ಹಾವಳಿಯಿಂದಾಗಿ ಅವರು ತಮ್ಮ ಬದುಕನ್ನೇ ಕೊನೆಗೊಳಿಸಿದ್ದಾರೆ.

ಜೈಪುರ: ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾದಿಂದ ಕೆಲವರ ಬದುಕು ಬಹಳ ಉತ್ತುಂಗಕ್ಕೇರಿದ್ದರೆ ಮತ್ತೆ ಕೆಲವರ ಬದುಕು ಶೋಚನೀಯ ಸ್ಥಿತಿ ತಲುಪಿದೆ. ಆದರೆ ಇಲ್ಲೊಬ್ಬರು ವೃದ್ಧರಿಗೆ ಮೊಬೈಲ್‌ನ ಗಂಧಗಾಳಿ ಇರಲಿಲ್ಲ, ಆದರೂ ಸೋಶಿಯಲ್ ಮೀಡಿಯಾದ ಹಾವಳಿಯಿಂದಾಗಿ ಅವರು ತಮ್ಮ ಬದುಕನ್ನೇ ಕೊನೆಗೊಳಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಕೆಲವು ಕೆಲಸಕ್ಕೆ ಬಾರದ, ಬೇರೆಯವರ ಕಷ್ಟದಲ್ಲಿ ಸುಖ ಕಾಣುವ ವಿಕೃತ ಮನಸ್ಥಿತಿಯ ಕಿಡಿಗೇಡಿಗಳು. 

ಹೌದು ರಾಜಸ್ಥಾನದ ಲೋಹಾವತ್‌ ಗ್ರಾಮದಲ್ಲಿ ವೃದ್ಧರೊಬ್ಬರು ತಾವಾಯಿತು ತಮ್ಮ ಕೆಲಸವಾಯ್ತು ಎಂಬಂತೆ ಬದುಕುತ್ತಿದ್ದರು. ಹೊಟ್ಟೆಪಾಡಿಗಾಗಿ ಅವರು ಊರಿನ ರಸ್ತೆಗಳಲ್ಲಿ ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಬಾಟಲ್‌ಗಳು, ಹಾಗೂ ಮರುಬಳಕೆ ಮಾಡುವಂತಹ ಆದರೆ ಎಲ್ಲೋ ಎಸೆದಿದ್ದಂತಹ ವಸ್ತುಗಳನ್ನು ಸಂಗ್ರಹಿಸಿ ಗುಜುರಿ ಅಂಗಡಿಗೆ ಮಾರುತ್ತಿದ್ದರು. ಅದರಿಂದ ಬಂದ ಆದಾಯದಲ್ಲಿ ಯಾರಿಗೂ ಕೈ ಜೋಡಿಸದೇ ಸ್ವಾಭಿಮಾನದಿಂದ ಬದುಕುತ್ತಿದ್ದರು. ಆದರೆ ಇದರ ಮೇಲೂ ಯಾರಿಗೆ ಕಣ್ಣು ಬಿತ್ತು ಗೊತ್ತಿಲ್ಲ, ಯಾರೋ ಕಿಡಿಗೇಡಿಗಳು ಅವರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಇದು ವೈರಲ್ ಆಗಿ ಹೋದಲ್ಲಿ ಬಂದಲೆಲ್ಲಾ ಅವರನ್ನು ಜನ ಗುರುತಿಸಿ ಮಾತನಾಡಿಸಲು ತೊಡಗಿದ್ದಾರೆ. ಆದರೆ ತಮಗೆ ಬೇಡವಾದ ಪ್ರಚಾರದಿಂದಾಗಿ ಕಿರಿಕಿರಿಗೊಳಗಾದ ಅವರು ಜೀವವನ್ನೇ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ರಾಜಸ್ಥಾನದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 

Latest Videos

ಪೊಲೀಸರು ಹೇಳುವ ಪ್ರಕಾರ ಈತ ತನ್ನದೇ ಒಂದು ತಳ್ಳುಗಾಡಿಯನ್ನು ಹೊಂದಿದ್ದು, ಹೀಗೆ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ. ಆದರೆ ಈತನ ವೃತ್ತಿಯನ್ನು ಕೆಲವರು ತರುಣರು ತಮಾಷೆ ಮಾಡಿದ್ದಲ್ಲದೇ ವೀಡಿಯೋ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಪೋಸ್ಟ್ ಮಾಡಿದ್ದರು. ಅವರು ವೀಡಿಯೋ ಮಾಡುವಾಗಲೆಲ್ಲಾ ವೃದ್ಧ ನೀವೇನಾದರೂ ಸ್ವಲ್ಪ ವೇಸ್ಟ್  ಕೊಳ್ಳಲು ಬಯಸಿದ್ದೀರಾ ಎಂದು ಅವರ ಬಳಿ ಪ್ರತಿಸಲವೂ ಕೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ವೀಡಿಯೋದಲ್ಲಿ ಆತ ಸಾಗುವ ಏರಿಯಾದಲ್ಲೆಲ್ಲಾ ಸಾಗುತ್ತಾ ಅಣಕು ಮಾಡುವುದು ರೆಕಾರ್ಡ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ಆತನನ್ನು ಗುರುತಿಸಲು ಆರಂಭಿಸಿದ್ದಾರೆ. ಇದರಿಂದ ಕಿರಿಕಿರಿಗೊಂಡ ಆತ ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗೆ ತನ್ನದಲ್ಲದ ತಪ್ಪಿಗೆ ಸಾವಿಗೆ ಶರಣಾದ ವ್ಯಕ್ತಿಯನ್ನು ಪ್ರತಾಬ್ ಸಿಂಗ್ ಎಂದು ಗುರುತಿಸಲಾಗಿದೆ. ಆತನ ಮೃತದೇಹವೂ ಹೈವೇ ಪಕ್ಕದ ರಸ್ತೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

click me!