ದೇಶಕ್ಕೆ 'ಸೂಪರ್‌ ಸೈಕ್ಲೋನ್' ಭೀತಿ: 195 ಕಿ.ಮೀ. ವೇಗದಲ್ಲಿ ಭೀಕರ ‘ಅಂಫನ್‌’!

By Kannadaprabha News  |  First Published May 19, 2020, 7:56 AM IST

ನಾಳೆ ಬಂಗಾಳಕ್ಕೆ ‘ಸೂಪರ್‌ ಸೈಕ್ಲೋನ್‌’| 195 ಕಿ.ಮೀ. ವೇಗದಲ್ಲಿ ಬರುತ್ತಿದೆ ‘ಅಂಫನ್‌’| 1999ರ ಬಳಿಕ ಭೀಕರ ಚಂಡಮಾರುತ


ನವದೆಹಲಿ/ಭುವನೇಶ್ವರ/ ಕೋಲ್ಕತಾ(ಮೇ.19): ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಅಂಫನ್‌’ ಚಂಡಮಾರುತ ಇದೀಗ ಅತ್ಯಂತ ಅಪಾಯಕಾರಿಯಾದ ‘ಸೂಪರ್‌ ಸೈಕ್ಲೋನ್‌’ ಸ್ವರೂಪ ಪಡೆದುಕೊಂಡಿದೆ. ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಳ ಕರಾವಳಿಗೆ 195 ಕಿ.ಮೀ. ವೇಗದಲ್ಲಿ ಬಂದು ಅಪ್ಪಳಿಸುವ ಸಾಧ್ಯತೆ ಇದೆ.

1999ರಲ್ಲಿ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಸೂಪರ್‌ ಸೈಕ್ಲೋನ್‌ ಬಳಿಕ ಭಾರತಕ್ಕೆ ಅಪ್ಪಳಿಸುತ್ತಿರುವ ಅತ್ಯಂತ ಪ್ರಬಲ ಚಂಡಮಾರುತ ಇದಾಗಿದೆ ಎಂದು ಎನ್‌ಡಿಆರ್‌ಎಫ್‌ ಮುಖ್ಯಸ್ಥ ಎಸ್‌.ಎನ್‌. ಪ್ರಧಾನ್‌ ಹೇಳಿದ್ದಾರೆ.

Tap to resize

Latest Videos

ಅಂಫನ್‌ ಎಫೆಕ್ಟ್: ರಾಜ್ಯದ ಹಲವೆಡೆ ಭಾರೀ ಮಳೆ!

2019ರಲ್ಲಿ ಆಂಧ್ರ ಹಾಗೂ ಒಡಿಶಾ ಕರಾವಳಿಗೆ ಅಪ್ಪಳಿಸಿದ ಫಾನಿ ಚಂಡಮಾರುತದ ರೀತಿ ಅಂಫನ್‌ ಚಂಡಮಾರುತ ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಪೂರ್ವ ಮೇದಿನಿಪುರ್‌, ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ ಮತ್ತು ಕೋಲ್ಕತಾ ಜಿಲ್ಲೆಗಳಿಗೆ ಚಂಡಮಾರುತದಿಂದ ಭಾರೀ ಹಾನಿ ಆಗುವ ಸಾಧ್ಯತೆ ಇದೆ. ಅಲ್ಲದೇ ಉತ್ತರ ಒಡಿಶಾದ ಜಿಲ್ಲೆಗಳಿಗೂ ಭಾರೀ ಹಾನಿ ಸಂಭವಿಸುವ ಅಪಾಯ ಇದೆ.

ಇದೇ ವೇಳೆ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌)ಯ 25 ತಂಡಗಳನ್ನು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡಲಾಗಿದೆ. ಭಾರತೀಯ ಕರಾವಳಿ ಭದ್ರತಾ ಪಡೆ ಮತ್ತು ನೌಕಾಪಡೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಬೋಟ್‌ ಹಾಗೂ ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಂಡಿದೆ.

ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

ಇದೇ ವೇಳೆ ಒಡಿಶಾ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಜಿಲ್ಲೆಗಳ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಆರಂಭಿಸಿದೆ.

click me!