ದೇಶದಲ್ಲಿ 1 ಲಕ್ಷ ಗಡಿ ದಾಟಿತು ಕೊರೋನಾ!| 12 ದೇಶದಲ್ಲಿ 50 ಸಾವಿರ ಮಂದಿಗೆ ಸೋಂಕು| 38 ದಿನದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದಿಂದ 1 ಲಕ್ಷಕ್ಕೆ ಏರಿಕೆ| ಚೀನಾಕ್ಕಿಂತ 13 ಸಾವಿರ ಕೇಸುಗಳಷ್ಟು ಮುಂದಿದೆ ಭಾರತ| ವಾರದಲ್ಲಿ ಟಾಪ್ 10 ದೇಶಗಳ ಪಟ್ಟಿಗೆ ಸೇರ್ಪಡೆ ಸಂಭವ
ನವದೆಹಲಿ(ಮೇ.19): ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರ ವಿಸ್ತರಣೆ ಮಾಡಿ ಹಲವು ನಿರ್ಬಂಧಗಳನ್ನು ಭಾರಿ ಪ್ರಮಾಣದಲ್ಲಿ ಸಡಿಲಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬರೋಬ್ಬರಿ 1 ಲಕ್ಷ ಗಡಿಯನ್ನು ದಾಟಿದೆ. ದೇಶದಲ್ಲಿ ಸೋಮವಾರ ಒಂದೇ ದಿನ 4613 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,00,002ಕ್ಕೇರಿಕೆಯಾಗಿದೆ. ಇದೇ ವೇಳೆ, 123 ಮಂದಿ ಕೊರೋನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದು, ಮೃತರ ಸಂಖ್ಯೆ 3000ದ ಗಡಿ ದಾಟಿ 3029ಕ್ಕೇರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 2033 ಮಂದಿಯಲ್ಲಿ ವೈರಸ್ ಸೋಂಕು ದೃಢಪಟ್ಟಿದೆ. 51 ಮಂದಿ ಮೃತಪಟ್ಟಿದ್ದಾರೆ. ಇದೊಂದಿಗೆ ಆ ರಾಜ್ಯವೊಂದರಲ್ಲೇ ಸೋಂಕಿತರ ಸಂಖ್ಯೆ 35,058ಕ್ಕೇರಿದೆ. ಮೃತರ ಸಂಖ್ಯೆ 1249ಕ್ಕೆ ಹೆಚ್ಚಳವಾಗಿದೆ. ದೆಹಲಿಯಲ್ಲಿ 299 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ತನ್ಮೂಲಕ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಬಳಿಕ 10 ಸಾವಿರಕ್ಕೂ ಹೆಚ್ಚು ಸೋಂಕಿತರು ಇರುವ ವಿಶ್ವದ 4ನೇ ರಾಜ್ಯ ಎನಿಸಿಕೊಂಡಿದೆ.
ರಾಜ್ಯಕ್ಕೆ 'ಮಹಾ' ಕಂಟಕ: ಮೊದಲ ಬಾರಿಗೆ ಕೊರೋನಾ ಶತಕ ಸ್ಫೋಟ!
ದೇಶದಲ್ಲಿ ಜ.30ರಂದು ಮೊದಲ ಕೊರೋನಾ ಪ್ರಕರಣ ಕಾಣಿಸಿಕೊಂಡಿತ್ತು. ಆರಂಭದಲ್ಲಿ ನಿಧಾನಗತಿಯಲ್ಲಿದ್ದ ಸೋಂಕು ಈಗ ಭಾರಿ ವೇಗ ಪಡೆದುಕೊಂಡಿದೆ. ಮೇ 6ರಂದು 50 ಸಾವಿರ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಕೇವಲ 12 ದಿನಗಳಲ್ಲಿ ಡಬಲ್ ಆಗಿ 1 ಲಕ್ಷದ ಗಡಿ ತಲುಪಿದೆ. ಏ.13ರಂದು ಕೊರೋನಾ ಸೋಂಕಿತರ ಸಂಖ್ಯೆ 10 ಸಾವಿರ ಇತ್ತು. ಇದೀಗ 38 ದಿನದಲ್ಲಿ 90 ಸಾವಿರ ಮಂದಿ ಸೋಂಕಿತರು ಸೇರ್ಪಡೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ವೈರಸ್‌ನ ಮೂಲವಾದ ಚೀನಾವನ್ನು ಶುಕ್ರವಾರವಷ್ಟೇ ಭಾರತ ಹಿಂದಿಕ್ಕಿ ಹೆಚ್ಚು ಸೋಂಕಿತರು ಇರುವ ವಿಶ್ವದ 11ನೇ ದೇಶ ಎನಿಸಿಕೊಂಡಿತ್ತು. ಇದೀಗ ಮೂರೇ ದಿನದಲ್ಲಿ ಚೀನಾಕ್ಕಿಂತ 17 ಸಾವಿರ ಪ್ರಕರಣಗಳಷ್ಟುಭಾರತ ಮುಂದೆ ಬಂದಿದೆ. ಅತಿ ಹೆಚ್ಚು ಸೋಂಕಿತರು ಇರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ 1.22 ಲಕ್ಷ ಪ್ರಕರಣಗಳೊಂದಿಗೆ ಇರಾನ್ 10ನೇ ಸ್ಥಾನದಲ್ಲಿದೆ. ಭಾರತದಲ್ಲಿ ಸೋಂಕು ಇದೇ ವೇಗದಲ್ಲಿ ಮುಂದುವರಿದರೆ, ಇನ್ನೊಂದು ವಾರದಲ್ಲಿ ಟಾಪ್ 10 ಪಟ್ಟಿಗೆ ಭಾರತ ಸೇರ್ಪಡೆಯಾದರೂ ಅಚ್ಚರಿ ಇಲ್ಲ.
ಇಂದಿನಿಂದ ಆಟೋ, ಕ್ಯಾಬ್, ಟ್ಯಾಕ್ಸಿ ಸೇವೆ ಶುರು!
ಭಾರತದ ಕೊರೋನಾ ಹಾದಿ
1: ಜನವರಿ 30
1000: ಮಾ.29
10000: ಏ.13
20000: ಏ.21
30000: ಏ.28
40000: ಮೇ 3
50000: ಮೇ 6
60000: ಮೇ 9
70000: ಮೇ 11
80000: ಮೇ 14
85000: ಮೇ 15
90,000: ಮೇ 16
4613 ಸೋಂಕು: ನಿನ್ನೆ ದಾಖಲಾದ ಪ್ರಕರಣ
123 ಸಾವು: ನಿನ್ನೆ ಬಲಿಯಾದವರ ಸಂಖ್ಯೆ
3029: ದೇಶದಲ್ಲಿ ಒಟ್ಟು ಮೃತರ ಸಂಖ್ಯೆ
ಅಮೆರಿಕದಲ್ಲಿ 91000ಕ್ಕೆ ಮೃತರ ಸಂಖ್ಯೆ
ನ್ಯೂಯಾರ್ಕ್: ಅಮೆರಿಕದಲ್ಲಿ ಕೊರೋನಾ ಹಾವಳಿ ಮುಂದುವರಿದಿದ್ದು, 24 ತಾಸುಗಳ ಅವಧಿಯಲ್ಲಿ ಸುಮಾರು 1000 ಮಂದಿ ಬಲಿಯಾಗಿದ್ದಾರೆ. ಇದರಿಂದಾಗಿ ಆ ದೇಶದಲ್ಲಿ ಸಾವಿಗೀಡಾದವರ ಸಂಖ್ಯೆ 91 ಸಾವಿರಕ್ಕೇರಿಕೆಯಾಗಿದೆ. 20 ಸಾವಿರ ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ವೈರಸ್‌ಪೀಡಿತರ ಸಂಖ್ಯೆ 15 ಲಕ್ಷಕ್ಕೇರಿಕೆಯಾಗಿದೆ.
---