
ನವದೆಹಲಿ(ಡಿ.10): ಚುನಾವಣಾ ಸುಧಾರಣೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ವಿರುದ್ಧ ಮಾಡುವ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ಶಾ, ಭಾರತದ ರಾಜಕೀಯ ಇತಿಹಾಸದ ಹಳೆಯ ಘಟನೆಗಳನ್ನು ಕೆದಕಿದರು.
ಚುನಾವಣಾ ಅಕ್ರಮಗಳ ಕುರಿತು ಮಾತನಾಡಿದ ಅಮಿತ್ ಶಾ, 'ಮತ ಕಳ್ಳತನ'ಕ್ಕೆ ದೇಶದ ಇತಿಹಾಸದಿಂದಲೇ ಒಂದು 'ಶ್ರೇಷ್ಠ ಉದಾಹರಣೆ ಎಂದರೆ, ಸ್ವಾತಂತ್ರ್ಯದ ನಂತರ, ದೇಶದ ಪ್ರಧಾನಮಂತ್ರಿಯನ್ನು ರಾಜ್ಯ ಮುಖ್ಯಸ್ಥರ ಮತಗಳ ಆಧಾರದ ಮೇಲೆ ಆಯ್ಕೆ ಮಾಡಬೇಕಾಗಿತ್ತು. ಆಗ ಸರ್ದಾರ್ ಪಟೇಲ್ ಅವರಿಗೆ 28 ಮತಗಳು ಸಿಕ್ಕಿದ್ದವು. ಆದರೆ ಜವಾಹರಲಾಲ್ ನೆಹರೂ ಕೇವಲ ಎರಡು ಮತಗಳನ್ನು ಪಡೆದಿದ್ದರು. ಆದರೂ ಆಶ್ಚರ್ಯಕರವಾಗಿ, ನೆಹರೂ ಅವರು ಪ್ರಧಾನಿಯಾದರು. ಅರ್ಹತೆ ಇಲ್ಲದ ವ್ಯಕ್ತಿಯೊಬ್ಬರು ಮತದಾರರಾದಾಗ, ಅದು ಮತ ಕಳ್ಳತನದ ಪ್ರಕರಣವೇ ಆಗುತ್ತದೆ ಎಂದು ಅಮಿತ್ ಶಾ ಗಂಭೀರ ಆರೋಪ ಮಾಡಿದರು.
ಮತ ಕಳ್ಳತನವನ್ನು ಮುಚ್ಚಿಹಾಕಲು ಇಂದಿರಾ ಗಾಂಧಿ ಅವರು ಕಾನೂನು ತಿದ್ದುಪಡಿ ತಂದಿದ್ದನ್ನೂ ಪ್ರಸ್ತಾಪಿಸಿದ ಗೃಹಸಚಿವ ಅಮಿತ್ ಶಾ, ಇಂದಿರಾ ಗಾಂಧಿ ರಾಯ್ ಬರೇಲಿಯಿಂದ ಆಯ್ಕೆಯಾದಾಗ, ರಾಜ್ ನಾರಾಯಣ್ ಅವರು ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಿ, ಚುನಾವಣೆ ನಿಯಮಾನುಸಾರ ನಡೆದಿಲ್ಲ ಎಂದು ಹೇಳಿದರು. ಹೈಕೋರ್ಟ್ ಚುನಾವಣೆಯನ್ನು ರದ್ದುಗೊಳಿಸಿತು. ಅನಂತರ, ಈ 'ಮತ ಕಳ್ಳತನ'ವನ್ನು ಮುಚ್ಚಿಹಾಕಲು, ಪ್ರಧಾನಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ಸಂಸತ್ತಿನಲ್ಲಿ ಕಾನೂನನ್ನು ಅಂಗೀಕರಿಸಲಾಯಿತು' ಇದು ಮತಗಳ್ಳತನ ಮುಚ್ಚಿಹಾಕಲು ಕಾನೂನಿಗೆ ತಿದ್ದುಪಡಿ ಹೊರತು ಬೇರೇನೂ ಅಲ್ಲ ಎಂದರು.
ಸೋನಿಯಾ ಗಾಂಧಿ ನಾಗರಿಕರಾಗುವ ಮತದಾರರು ಆಗಿದ್ದು ಹೇಗೆ?
ಸೋನಿಯಾ ಗಾಂಧಿ ಅವರು ಅಧಿಕೃತವಾಗಿ ಭಾರತೀಯ ನಾಗರಿಕರಾಗುವ ಮೊದಲೇ ದೇಶದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು ಎಂದು ಆರೋಪಿಸಿ ಇತ್ತೀಚೆಗೆ ದೆಹಲಿ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ ಎಂದು ಅಮಿತ್ ಶಾ ಮತ್ತೊಂದು ಗಂಭೀರ ಆರೋಪವನ್ನು ಮಾಡಿದರು.
ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣವಲ್ಲ, ನಿಮ್ಮ ನಾಯಕತ್ವ!
ಚುನಾವಣಾ ಸೋಲುಗಳ ನಂತರ ಪ್ರತಿಪಕ್ಷಗಳು ಇವಿಎಂ ಮತ್ತು ಮತದಾರರ ಪಟ್ಟಿಯ ಮೇಲೆ ಗೂಬೆ ಕೂರಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಶಾ ಅವರು, ನಾವು ಸಹ ವಿರೋಧ ಪಕ್ಷದಲ್ಲಿದ್ದೆವು. ನಾವು ಗೆದ್ದಿದ್ದಕ್ಕಿಂತ ಹೆಚ್ಚು ಚುನಾವಣೆಗಳಲ್ಲಿ ಸೋತಿದ್ದೇವೆ. ನಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ವಿರೋಧ ಪಕ್ಷದಲ್ಲೇ ಕಳೆದಿದ್ದೇವೆ. ಆದರೆ ನಾವು ಎಂದಿಗೂ ಚುನಾವಣಾ ಆಯೋಗ ಅಥವಾ ಚುನಾವಣಾ ಆಯುಕ್ತರನ್ನು ದೂಷಿಸಲಿಲ್ಲ ಎಂದರು.
ಅಂತಿಮವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಶಾ, ಚುನಾವಣೆಯಲ್ಲಿ ನಿಮ್ಮ ಸೋಲಿಗೆ ಮುಖ್ಯ ಕಾರಣ ಮತದಾರರ ಪಟ್ಟಿ ಅಥವಾ ಇವಿಎಂಗಳಲ್ಲ, ನಿಮ್ಮ ನಾಯಕತ್ವ. ಒಂದು ದಿನ ಕಾಂಗ್ರೆಸ್ ಕಾರ್ಯಕರ್ತರು ಈ ಸೋಲಿಗೆ ನಿಜವಾದ ಕಾರಣಗಳನ್ನು ಪ್ರಶ್ನಿಸಿಯೇ ಪ್ರಶ್ನಿಸುತ್ತಾರೆ ಎಂದು ಭವಿಷ್ಯ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ