ದಿಲ್ಲಿ ಕೊರೋನಾ ಬಿಕ್ಕಟ್ಟಿಗೆ ಸಚಿವ ಅಮಿತ್ ಶಾ ಎಂಟ್ರಿ| ಇಂದು ಸಿಎಂ, ಉಪರಾಜ್ಯಪಾಲರ ಜೊತೆ ಶಾ ಸಭೆ
ನವದೆಹಲಿ(ಜೂ.14):: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಏರಿಕೆ ಬಗ್ಗೆ ಭಾರೀ ಟೀಕೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಮೃತರ ಕಡೆಗಿನ ಅವಗಣನೆಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಪ್ರಕರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶ ಮಾಡಿದ್ದಾರೆ.
ಭಾನುವಾರ ಅಮಿತ್ ಶಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್, ಹಿರಿಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಸಭೆಗೆ ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ರಾಜಧಾನಿಯಲ್ಲಿ ಸದ್ಯದ ಪರಿಸ್ಥಿತಿ ಮತ್ತು ಜುಲೈ 31ರ ವೇಳೆಗೆ ಸೋಂಕಿತರ ಸಂಖ್ಯೆ 5.5 ಲಕ್ಷಕ್ಕೆ ಏರಬಹುದು ಎಂಬ ನಿರೀಕ್ಷೆಗಳ ಹಿನ್ನೆಲೆಯಲ್ಲಿ, ಅದಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಇದಲ್ಲದೇ ದೆಹಲಿ ಮೇಯರ್ ಮತ್ತು ಮಹಾನಗರ ಪಾಲಿಕೆ ಆಯುಕ್ತರ ಜೊತೆಗೂ ಪ್ರತ್ಯೇಕ ಸಭೆಯನ್ನು ಅಮಿತ್ ಶಾ ಹಮ್ಮಿಕೊಂಡಿದ್ದಾರೆ.
ಪ್ರಸಕ್ತ ದೆಹಲಿಯಲ್ಲಿ 36000ಕ್ಕೂ ಹೆಚ್ಚು ಸೋಂಕಿತರಿದ್ದು, 1200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.