Omicron variant ರಾಜ್ಯಗಳಿಗೆ ಕೇಂದ್ರದಿಂದ ಮತ್ತಷ್ಟು ಮಾರ್ಗಸೂಚಿ ಪ್ರಕಟ

By Suvarna NewsFirst Published Nov 29, 2021, 6:30 AM IST
Highlights

* ಪರೀಕ್ಷಾ ಮಾದರಿ ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳಿಸಿಕೊಡಬೇಕು

* ರಾಜ್ಯಗಳಿಗೆ ಕೇಂದ್ರದಿಂದ ಮತ್ತಷ್ಟುಮಾರ್ಗಸೂಚಿ ಪ್ರಕಟ

* ಹಾಟ್‌ಸ್ಪಾಟ್‌ ಗುರುತಿಸಿ, ತಪಾಸಣೆ, ಪರಿಶೀಲನೆ ಹೆಚ್ಚಿಸಬೇಕು

* ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಿ

* ಇತ್ತೀಚೆಗೆ ಹಾಟ್‌ಸ್ಪಾಟ್‌ ಆಗಿದ್ದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ

ನವದೆಹಲಿ(ನ.29): ಜಾಗತಿಕ ತಲ್ಲಣ ಮೂಡಿಸಿರುವ ‘ಒಮಿಕ್ರೋನ್‌’ ರೂಪಾಂತರಿ (Omicron Varient) ತಳಿಯು ಭಾರತಕ್ಕೂ ವ್ಯಾಪಿಸುವ ಭೀತಿಯಿದೆ. ಹೀಗಾಗಿ ಈ ವೈರಸ್‌ ನಿಯಂತ್ರಣಕ್ಕೆ ರಾಜ್ಯಗಳು ಪಾಲಿಸಲೇಬೇಕಿರುವ ಮತ್ತಷ್ಟು ಮಾರ್ಗಸೂಚಿಗಳನ್ನು (Guidlines) ಕೇಂದ್ರ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ. ಈ ಪ್ರಕಾರ ಕೋವಿಡ್‌ ಹಾಟ್‌ಸ್ಪಾಟ್‌ಗಳನ್ನು ತ್ವರಿತವಾಗಿ ಗುರುತಿಸಬೇಕು. ಕಂಟೇನ್ಮೆಂಟ್‌ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ಕೋವಿಡ್‌ ತಪಾಸಣೆ (Covid Testing)ಮತ್ತು ಪರಿಶೀಲನೆಯನ್ನು ತೀವ್ರಗೊಳಿಸಬೇಕು. ಅಲ್ಲದೆ ಲಸಿಕಾಕರಣದ ಅಭಿಯಾನಕ್ಕೆ (Vaccination Campaign) ಮತ್ತಷ್ಟು ಚುರುಕು ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಅಲ್ಲದೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು, ಕೋವಿಡ್‌ (Coronavirus) ದೃಢಪಟ್ಟ ಮಾದರಿಗಳನ್ನು ‘ಜಿನೊಮ್‌ ಸೀಕ್ವೆನ್ಸಿಂಗ್‌’ಗಾಗಿ ಐಎನ್‌ಎಸ್‌ಎಸಿಒಜಿ ಸಂಸ್ಥೆಗೆ ಕಳುಹಿಸಿಕೊಡಬೇಕು. ಜತೆಗೆ ಮುಖಕ್ಕೆ ಮಾಸ್ಕ್‌, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್‌ ಸೇರಿದಂತೆ ಇನ್ನಿತರ ಕೋವಿಡ್‌ ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಒತ್ತಿ ಹೇಳಿದರು.

ಚಿಕಿತ್ಸೆಯಲ್ಲಿ ರಾಜಿ ಬೇಡ:

ತರಬೇತಿ ಹೊಂದಿದ ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳು, ಕೋವಿಡ್‌ ಲಸಿಕೆ ಮತ್ತು ಔಷಧಗಳ ಸಾಗಣೆಯನ್ನು ಹೆಚ್ಚಿಸಿ ಸೋಂಕಿತರ ಶೀಘ್ರ ಗುಣಮುಖಕ್ಕೆ ರಾಜ್ಯಗಳು ಕ್ರಮ ಕೈಗೊಳ್ಳಬೇಕು. ರೋಗಿಗಳಿಗೆ ಉತ್ತಮ ಗುಣಮಟ್ಟದ ಮತ್ತು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ತಿಳಿಸಲಾಗಿದೆ.

Covid Crisis: ರಾಷ್ಟ್ರಪತಿ ಕೋವಿಂದ್ VVIP ಡ್ಯೂಟಿ ಮಾಡುತ್ತಿದ್ದ 19 ಪೊಲೀಸರಿಗೆ ಕೊರೋನಾ, ಭಾರೀ ಆತಂಕ!

ಪರೀಕ್ಷೆ ಹೆಚ್ಚಿಸಲೇಬೇಕು:

ಬೋಟ್ಸ್‌ವಾನಾ ವೈರಸ್‌ ಕಂಡುಬಂದಿರುವ ದಕ್ಷಿಣ ಆಫ್ರಿಕಾದ ದೇಶಗಳನ್ನು ಈಗಾಗಲೇ ರಿಸ್ಕ್‌ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. ಹೀಗಾಗಿ ರಿಸ್ಕ್‌ ರಾಷ್ಟ್ರಗಳ ಪಟ್ಟಿಯಲ್ಲಿರುವ ದೇಶಗಳು ಸೇರಿದಂತೆ ಇನ್ನಿತರ ಯಾವುದೇ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಅವರ ಕೋವಿಡ್‌ ಪರೀಕ್ಷಾ ವರದಿಯ ಹೆಚ್ಚಿನ ಪರಿಶೀಲನೆಗಾಗಿ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಗಳಿಗೆ ರವಾನಿಸಬೇಕು. ಕೆಲವು ರಾಜ್ಯಗಳಲ್ಲಿ ಈಗಾಗಲೇ ಆರ್‌ಟಿಪಿಸಿಆರ್‌ ಮತ್ತು ಇತರೆ ಕೋವಿಡ್‌ ಪರೀಕ್ಷೆ ಕುಸಿತವಾಗಿರುವುದು ಗಮನಕ್ಕೆ ಬಂದಿದೆ. ಆದರೆ ಅಗತ್ಯವಿರುವಷ್ಟುಪರೀಕ್ಷೆ ನಡೆಯದಿದ್ದರೆ, ವೈರಸ್‌ ಹರಡುವಿಕೆ ಪ್ರಮಾಣ ಎಷ್ಟಿದೆ ಎಂಬ ನಿಖರ ಮಾಹಿತಿ ಲಭ್ಯವಾಗದು. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಕೋವಿಡ್‌ ಪರೀಕ್ಷಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸೂಚಿಸಲಾಗಿದೆ.

ಹಾಟ್‌ಸ್ಪಾಟ್‌ ಮೇಲೆ ನಿಗಾ:

ಇತ್ತೀಚೆಗೆ ಅತಿಹೆಚ್ಚು ಕೊರೋನಾ ಕೇಸ್‌ಗಳು ಕಂಡುಬಂದ ಹಾಟ್‌ಸ್ಪಾಟ್‌ಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಈ ಪ್ರದೇಶಗಳಲ್ಲಿ ಕೊರೋನಾ ಪರೀಕ್ಷೆಯನ್ನು ಹೆಚ್ಚಿಸಬೇಕು. ಸೋಂಕು ಹೆಚ್ಚುವ ಬಗ್ಗೆ ಹೆಚ್ಚಿನ ಪರಿಶೀಲನೆ ಮತ್ತು ಪರಿಣಾಮಕಾರಿ ಕೊರೋನಾ ನಿಯಂತ್ರಣ ಕೈಗೊಳ್ಳುವ ಮುಖಾಂತರ ಈ ಪ್ರದೇಶಗಳನ್ನು ಸೋಂಕು ಮುಕ್ತಗೊಳಿಸಬೇಕು.

Omicron Varient: ಹೊಸ ತಳಿಯ ವೈರಸ್ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ AIIMS ಮುಖ್ಯಸ್ಥ!

ಕೊರೋನಾ ವೈರಸ್‌ನ ಹೊಸ ರೂಪಾಂತರವಾದ ಒಮಿಕ್ರಾನ್ ರೂಪಾಂತರಿ (Omicron variant of Coronavirus)  ಮತ್ತೊಮ್ಮೆ ಪ್ರಪಂಚದಾದ್ಯಂತ ಭೀತಿಯುಂಟು ಮಾಡಿದೆ. ಈ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇದೀಗ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ (AIIMS director Dr Randeep Guleria) ಒಮಿಕ್ರಾನ್ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೊರೋನಾದ ರೂಪಾಂತರಿ ತಳಿ ಒಮಿಕ್ರಾನ್‌ನ 30 ಕ್ಕೂ ಹೆಚ್ಚು ಬಾರಿ ರೂಪಾಂತರ ಹೊಂದಿದೆ  ಎಂದು ಡಾ. ರಣದೀಪ್ ಗುಲೇರಿಯಾ ಹೇಳಿದ್ದು, ಇದರ ವಿರುದ್ಧ ಲಸಿಕೆಗಳ (Vaccines) ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕಾಗಿದೆ ಎಂದಿದ್ದಾರೆ.

ಕೊರೋನಾದ ಈ ಹೊಸ ತಳಿ ಈಗಾಗಲೇ ಹಾಕಿಸಿಕೊಂಡ ಲಸಿಕೆಯ ಪರಿಣಾಮವನ್ನು ಸಹ ತೊಡೆದುಹಾಕಬಹುದು ಎಂದು ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. ಆದರೆ, ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಒಮಿಕ್ರಾನ್ ರೂಪಾಂತರಿ ತಳಿ ಲಸಿಕೆ ಹಾಕಿದ ಜನರಿಗೆ ಸಹ ಸೋಂಕು ತರುತ್ತದೆ ಎಂದು ಅವರು ಹೇಳಿದರು. ಈ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಭಾರತದಲ್ಲಿ (India) ಈ ವೇರಿಯಂಟ್ ಸೋಂಕಿತರು ಯಾರೂ ಪತ್ತೆಯಾಗಿಲ್ಲ ಎಂಬುದು ಸಮಾಧಾನದ ಸಂಗತಿ ಎಂದಿದ್ದಾರೆ. ಡಾ ಗುಲೇರಿಯಾ ಅವರು ಅಂತರಾಷ್ಟ್ರೀಯವಾಗಿ ಪ್ರಯಾಣಿಸುವ ಜನರಲ್ಲಿ ಹಠಾತ್ ಹೆಚ್ಚಳವಾಗಿದೆ. ಹೀಗಾಗಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

click me!