
ನವದೆಹಲಿ(ಏ,10): ದೇಶಾದ್ಯಂತ ಕೊರೋನಾ ಸೋಂಕು ಸಾಕಷ್ಟುಇಳಿಕೆಯಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಕಹಿ ಸುದ್ದಿಯೊಂದು ಬಂದಿದೆ. ಕೇರಳ, ಮಹಾರಾಷ್ಟ್ರ, ದೆಹಲಿ, ಹರ್ಯಾಣ ಹಾಗೂ ಮಿಜೋರಂನಲ್ಲಿ ಕೋವಿಡ್ ಕೇಸುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಅಮೆರಿಕ ಮತ್ತು ಚೀನಾದಲ್ಲಿ ಕೊರೋನಾ ಸೋಂಕು ತೀವ್ರ ಪ್ರಮಾಣದಲ್ಲಿ ಏರುತ್ತಿರುವಾಗ ಇತ್ತ ಭಾರತದಲ್ಲೂ ಮತ್ತೆ ಸೋಂಕು ಏರುವ ಲಕ್ಷಣಗಳು ಕಂಡುಬರುತ್ತಿವೆ. ಅದರಲ್ಲೂ ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಸೋಂಕು ಏರುತ್ತಿರುವುದು ಈಗಾಗಲೇ ಸೋಂಕಿತರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಇಳಿಕೆ ಕಂಡಿರುವ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.
ಕೇಸು ಏರಿಕೆ ಹೇಗೆ?:
ಕೇರಳದಲ್ಲಿ ಕಳೆದ ವಾರ 2321 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದು ಆ ಅವಧಿಯಲ್ಲಿ ಇಡೀ ದೇಶದಲ್ಲಿ ಪತ್ತೆಯಾದ ಒಟ್ಟು ಸೋಂಕಿನ ಶೇ.31.8ರಷ್ಟಿದೆ. ವಾರದ ಪಾಸಿಟಿವಿಟಿ ದರ ಕೇರಳದಲ್ಲಿ ಶೇ.15.53ಕ್ಕೆ ಏರಿಕೆಯಾಗಿದೆ.
ಇನ್ನು ದೆಹಲಿಯಲ್ಲಿ ಕಳೆದ ವಾರ ಹೊಸ ಸೋಂಕಿತರ ಸಂಖ್ಯೆ ಅದರ ಹಿಂದಿನ ವಾರದ 724ರಿಂದ 826ಕ್ಕೆ ಏರಿಕೆಯಾಗಿದೆ. ಹರ್ಯಾಣದಲ್ಲಿ ಎರಡು ವಾರದ ಹಿಂದೆ 367 ಕೇಸು ಪತ್ತೆಯಾಗಿದ್ದರೆ ಕಳೆದ ವಾರ 416 ಕೇಸು ಪತ್ತೆಯಾವೆ. ಮಹಾರಾಷ್ಟ್ರದಲ್ಲಿ ಕಳೆದ ವಾರ ಹೊಸ 794 ಕೇಸುಗಳು ಪತ್ತೆಯಾಗಿವೆ. ಪುಟ್ಟರಾಜ್ಯ ಮಿಜೋರಂನಲ್ಲಿ 814 ಕೇಸು ಪತ್ತೆಯಾಗಿವೆ.
ಈ ಎಲ್ಲ ರಾಜ್ಯಗಳಲ್ಲೂ ಒಂದು ವಾರದ ಅವಧಿಯಲ್ಲಿ ಪಾಸಿಟಿವಿಟಿ ದರ ಗಣನೀಯವಾಗಿ ಏರಿಕೆಯಾಗಿದೆ.
ಹೀಗಾಗಿ ಟೆಸ್ಟಿಂಗ್, ಟ್ರ್ಯಾಕಿಂಗ್, ಟ್ರೀಟ್‌ಮೆಂಟ್, ಲಸಿಕಾಕರಣ ಹಾಗೂ ಕೊರೋನಾ ಸನ್ನಡತೆ ಎಂಬ ಪಂಚಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಈ ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದು ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ