ಅಮೆರಿಕಾದ ಯೂಟೂಬರ್ ಮ್ಯಾಕ್ಸಿಮಿಲಿಯನ್ ಮ್ಯಾಕ್‌ಫಾರ್ಲೇನ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೌಂದರ್ಯವನ್ನು ಕಣ್ತುಂಬಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ವಿಮಾನ ನಿಲ್ದಾಣಗಳಿಗಿಂತಲೂ ಬೆಂಗಳೂರು ವಿಮಾನ ನಿಲ್ದಾಣವು ಉತ್ಕೃಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ.05): ಅಮೇರಿಕಾದ ಖ್ಯಾತ ಯ್ಯೂಟೂಬರ್ ಮ್ಯಾಕ್ಸಿಮಿಲಿಯನ್ ಮ್ಯಾಕ್‌ಫಾರ್ಲೇನ್ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೋಡಿ ನಿಬ್ಬೆರಗಾಗಿದ್ದಾನೆ. ಅದರಲ್ಲಿಯೂ ಅಮೇರಿಕಾದ ವಿಮಾನ ನಿಲ್ದಾಣಗಳಿಗಿಂತಲೂ ಉತ್ಕೃಷ್ಟವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದುಬಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ವೀಕ್ಷಣೆ ನೋಡಿದ ಮ್ಯಾಕ್ಸ್‌ಮೆಕ್ ಫರ್ಲನ್ ವಾ...ವ್.. ಎಂಬ ಉದ್ಘಾರವನ್ನು ತೆಗೆದಿದ್ದಾರೆ. ಇದು ತುಂಬಾ ಸುಂದರವಾಗಿದೆ. ನಾನು ಬೆಂಗಳೂರು ವಿಮಾನ ನಿಲ್ದಾಣ ಸುಂದರವಾಗಿದೆ ಎಂಬ ಮಾತನ್ನು ಕೆಲವರಿಂದ ಕೇಳಿದ್ದೆನು. ಆದರೆ, ಈಗ ನೋಡಿದ ನಂತರ ನನ್ನ ಅನುಭವಕ್ಕೂ ಬರುತ್ತಿದೆ. ಜೊತೆಗೆ ಬೆಂಗಳೂರು ಏರ್ಪೋರ್ಟ್ ಅನ್ನು ಸುಂದರವಾದ ಮಹಿಳೆಗೆ ಹೋಲಿಕೆ ಮಾಡಿದ್ದಾನೆ. She is beautiful ಎಂದು ಹಾಡಿ ಹೊಗಳಿದ್ದಾನೆ. ನಾನು ತಿಳಿದುಕೊಂಡಿದ್ದಕ್ಕಿಂತೂ ಹೆಚ್ಚು ಸುಂದರವಾಗಿದೆ ಎಂದು ಉದ್ಘಾರ ತೆಗೆದಿದ್ದಾನೆ.
ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಸಂಗೀತ ಪ್ರಯಾಣ ಪ್ರಾರಂಭಿಸಲು ಸಿದ್ಧರಾಗಿ..!
ಈ ವಿಮಾನ ನಿಲ್ದಾಣದ ಕೆಲವು ಅಂಶಗಳು ಅತಿಹೆಚ್ಚು ಭೌಗೋಳಿಕ ವಿಚಾರಗಳಿಗೆ ಸಂಬಂಧಿಸಿದೆ. ನೋಡಲು ಕಣ್ಣಿಗೆ ತಂಪನ್ನು ನೀಡುತ್ತದೆ. ಜೊತೆಗೆ, ಬಾಹ್ಯಾಕಾಶದ ಮಾದರಿಯನ್ನು ನೋಡಿ ನಾನು ಆಕಾಶದಲ್ಲಿಯೇ ನಡೆದಾಡುತ್ತಿದ್ದೇನೆ ಎಂಬ ಅನುಭವ ಉಂಟಾಗುತ್ತಿದೆ. ನಾನು ಆಶ್ಚರ್ಯಚಕಿತನಾಗಿದ್ದೇನೆ. ಭಾರತದ ವಿಮಾನ ನಿಲ್ದಾಣಗಳು ಅಮೇರಿಕಾದಷ್ಟು ಉತ್ಕೃಷ್ಟವಾಗಿರಲು ಸಾಧ್ಯವಿಲ್ಲ ಎಂಬ ನನ್ನ ಚಿಂತನೆ ಇದನ್ನು ನೋಡಿದ ನಂತರ ಸುಳ್ಳೆಂದು ತಿಳಿಯುತ್ತಿದೆ. ಇದು ತುಂಬಾ ವಿಶಾಲವಾದ ಆವರಣವನ್ನು ಹೊಂದಿದೆ. ಜನರು ಓಡಾಡಲು ತುಂಬಾ ವಿಶಾಲ ಸ್ಥಳಾವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಇದು ಕರ್ಕಶ ಶಬ್ದಗಳಿಂದ ಹಾಗೂ ಕಿರಿ ಕಿರಿ ಆಗುವ ಯಾವುದೇ ಶಬ್ದಗಳಿಂದ ಮುಕ್ತವಾಗಿದೆ. ಜನಸಂದಣಿಯೂ ಒಂದೇ ಕಡೆ ಇರದೇ ಎಲ್ಲೆಡೆ ಹಂಚಿಕೆಯಾಗಿದ್ದು, ಇಲ್ಲಿ ಬರಲು ಸಂತಸವಾಗುತ್ತದೆ.
ಬೆಂಗಳೂರು ವಿಮಾನ ನಿಲ್ದಾಣವನ್ನು ಕೈಗಳ ಕುಸಿರಿ ಕಲೆಯಿಂದಲೇ ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ನಿರ್ಮಾಣವೂ ಅದ್ಭುತವಾಗಿದ್ದು, ಅದೆಷ್ಟು ಜನರು ಇಲ್ಲಿ ಕೆಲಸ ಮಾಡಿದ್ದಾರೋ ಗೊತ್ತಿಲ್ಲ. ಇದನ್ನು ನೋಡಿದರೆ ಸಾರ್ವಜನಿಕರು ಬಳಸುವ ವಿಮಾನ ನಿಲ್ದಾಣವೆಂದು ಭಾಸವಾಗದೇ, ಯಾವುದೋ ಒಂದು ಖಾಸಗಿ ವ್ಯಕ್ತಿಯ ಪ್ರೈವೇಟ್ ಏರ್ಪೋರ್ಟ್‌ನಂತೆ ಭಾಸವಾಗುತ್ತಿದೆ. ಆದರೆ, ಇಲ್ಲಿ ತುಂಬಾ ಜನರು ಇರುವುದನ್ನು ನಾನು ಕಾಣುತ್ತಿದ್ದೇನೆ. ಆದರೆ, ಇದು ತುಂಬಾ ಖಾಸಗಿತನವನ್ನೂ ನೀಡುತ್ತದೆ ಎಂದು ಮ್ಯಾಕ್ಸ್‌ಮೆಕ್ ಫರ್ಲನ್ ಹೇಳಿಕೊಂಡಿದ್ದಾನೆ.
ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣಕ್ಕೆ 7 ಸ್ಥಳಗಳು ಆಯ್ಕೆ; ಸರ್ಕಾರದಿಂದ ಗಂಭೀರ ಚರ್ಚೆ!
ಈ ವಿಮಾನ ನಿಲ್ದಾಣ ನೋಡಿದ ನಂತರ ನನಗೆ ಹೇಳಬೇಕೆನಿಸಿದ್ದು ಇದಿಷ್ಟೇ.. ಅಮೇರಿಕಾದ ವಿಮಾನ ನಿಲ್ದಾಣಗಳು ಒಳಗೊಂಡಂತೆ, ವಿಶ್ವದ ಯಾವುದೇ ವಿಮಾನ ನಿಲ್ದಾಣಗಳ ಪೈಕಿ ಇದೊಂದು ಸುಂದರ, ವಿಶಾಲ ಮತ್ತು ಅದ್ಭುತ ಏರ್ಪೋರ್ಟ್ ಎಂದು ನಾನು ಭಾವಿಸುತ್ತೇನೆ. ನಾನು ತುಂಬಾ ದೊಡ್ಡ ಮತ್ತು ವಿಶಾಲ ವಿಮಾನ ನಿಲ್ದಾಣಗಳನ್ನು ನೋಡಿದ್ದೇನೆ. ಅದರಲ್ಲಿ ಡಲ್ಲಾಸ್ (Dallas), ನ್ಯೂಯಾರ್ಕ್ (New Yark), ಲ್ಯಾಕ್ಸ್ (Lax), ಚಿಕಾಗೋ (chicago) ಏರ್ಪೋರ್ಟ್‌ಗಳಿಗಿಂತಲೂ ಸುಂದರವಾಗಿದೆ. ಈವರೆಗೆ ನಾನು ನೋಡಿದ ಸುಂದರ ವಿಮಾನ ನಿಲ್ದಾಣದಲ್ಲಿ ಡಲ್ಲಾಸ್ ವಿಮಾನ ನಿಲ್ದಾಣವೇ ಸುಂದರವಾಗಿತ್ತು. ಆದರೆ, ಈಗ ಬೆಂಗಳೂರು ವಿಮಾನ ನಿಲ್ದಾಣ ಅದಕ್ಕಿಂತಲೂ ಸುಂದರವಾಗಿರುವುದು ನನಗೆ ಕಾಣಿಸುತ್ತಿದೆ. ಇದು ಅಮೇರಿಕಾಗಿಂತ ತುಂಬಾ ಮುಂಚೂಣಿಯಲ್ಲಿದೆ ಎಂದು ನೈಜವಾಗಿ ಹೇಳುತ್ತೇನೆ ಎಂದು ಅಮೇರಿಕಾದ ಖ್ಯಾತ ಯ್ಯೂಟೂಬರ್ ಮ್ಯಾಕ್ಸಿಮಿಲಿಯನ್ ಮ್ಯಾಕ್‌ಫಾರ್ಲೇನ್ ಹೇಳಿಕೊಂಡಿದ್ದಾನೆ.