
ಚಂಡೀಗಢ(ಅ.20): ಪಂಜಾಬ್(Punjab) ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಕಾಂಗ್ರೆಸ್(Congress) ವಿರುದ್ಧ ಬಂಡಾಯ ಸಾರಿರುವ ಕ್ಯಾ. ಅಮರೀಂದರ್ ಸಿಂಗ್(Amarinder Singh) ಅವರು, ಹೊಸ ಪಕ್ಷ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದರೆ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ(BJP) ಜತೆ ಸೀಟು ಹಂಚಿಕೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಅಮರೀಂದರ್ ಅವರ ಮಾಧ್ಯಮ ಸಲಹೆಗಾರನಾದ ರವೀನ್ ಠುಕ್ರಾಲ್ ಅವರು ಕ್ಯಾಪ್ಟನ್ ಪರ ಹೇಳಿಕೆ ನೀಡಿದ್ದಾರೆ. ‘ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಪಂಜಾಬ್ ಜನತೆ ಹಿತಾಸಕ್ತಿಗಳ ರಕ್ಷಣೆಗಾಗಿ ಹೊಸ ಪಕ್ಷ ರಚಿಸುತ್ತೇನೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ್ದೇ ಆದಲ್ಲಿ ಬಿಜೆಪಿ ಜತೆ ಸೀಟು ಹಂಚಿಕೆಗೆ ಸಿದ್ಧವಿದ್ದೇವೆ. ಜತೆಗೆ ನಮ್ಮ ಮನಸ್ಥಿತಿಯ ಪಕ್ಷಗಳ ಜತೆ ಸೀಟು ಹಂಚಿಕೆಗೆ ಮುಕ್ತ ಆಹ್ವಾನವಿದೆ ಎಂದು ಅಮರೀಂದರ್ ತಿಳಿಸಿದ್ದಾರೆ’ ಎಂದು ಠುಕ್ರಾಲ್ ಹೇಳಿದ್ದಾರೆ.
ನವಜೋತ್ ಸಿಧು ಜತೆಗಿನ ಸಂಘರ್ಷದ ಬಳಿಕ ಅಮರೀಂದರ್ ಸಿಎಂ ಸ್ಥಾನ ತ್ಯಜಿಸಿದ್ದರು. ಈಗ ಅವರ ಹೊಸ ಪಕ್ಷ ಸ್ಥಾಪನೆ ಘೋಷಣೆ ರಾಜ್ಯದ ರಾಜಕೀಯ ಚಿತ್ರಣ ಬದಲಿಸಿ, ಕಾಂಗ್ರೆಸ್‌ಗೆ ಕಂಟಕ ಆಗುವ ಸಾಧ್ಯತೆ ಇದೆ.
* ಕ್ಯಾ.ಅಮರೀಂದರ್‌ರಿಂದ ಪಂಜಾಬ್ ವಿಕಾಸ್ ಪಕ್ಷ
ಕಾಂಗ್ರೆಸ್‌ಗೆ ವಿದಾಯ ಹೇಳುವುದಾಗಿ ಈಗಾಗಲೇ ಘೋಷಿಸಿರುವ ಪಂಜಾಬ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ಸಿಂಗ್(Amarinder Singh), ಶೀಘ್ರವೇ ಹೊಸ ಪಕ್ಷವೊಂದನ್ನು ರಚಿಸಲಿದ್ದರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಪಕ್ಷದ ಹೆಸರು ಪಂಜಾಬ್ ವಿಕಾಸ್ ಪಕ್ಷ(Punjab Vikas Party) ಎಂದಾಗಿರಲಿದೆ ಎನ್ನಲಾಗಿದೆ.
ಅಮರೀಂದರ್ ಸಿಂಗ್, ಬಿಜೆಪಿ(BJP) ಸೇರುವ ವದಂತಿ ಇತ್ತಾದರೂ ಅದನ್ನು ಅವರೇ ಸ್ಪಷ್ಟವಾಗಿ ತಳ್ಳಿಹಾಕಿದ್ದರು. ತಕ್ಷಣಕ್ಕೆ ಬಿಜೆಪಿ ಸೇರುವುದು ತಮ್ಮ ಮೂಲ ಉದ್ದೇಶವನ್ನಾ ಹಾಳು ಮಾಡುವ ಸಾಧ್ಯತೆ ಇರುವ ಕಾರಣ ಹೊಸ ಪಕ್ಷ ಸ್ಥಾಪನೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಸಿಂಗ್ ಬಂದಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ, ಹಾಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್‌ಸಿಂಗ್ ಸಿಧು(Navjot Singh Sidhu) ಸೇರಿದಂತೆ ಹಲವು ನಾಯಕರ ಮೇಲೆ ಅಮರೀಂದರ್ ಹಲ್ಲು ಮಸೆಯುತ್ತಿದ್ದಾರೆ. ಅವರನ್ನೆಲ್ಲಾ, 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸುವುದು ಅವರ ಪ್ರಮುಖ ಗುರಿ. ಈ ಗುರಿ ಈಡೇರಿಸಲು ಬಿಜೆಪಿ ಸೇರ್ಪಡೆಗಿಂತ ಹೊಸ ಪಕ್ಷವೇ ಮುಖ್ಯ ಎಂಬುದು ಸಿಂಗ್‌ರ ಸದ್ಯದ ಲೆಕ್ಕಾಚಾರ.
ಈಗಾಗಲೇ ಹೊಸ ಪಕ್ಷ ಸ್ಥಾಪನೆ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಇನ್ನೊಂದು ಸುತ್ತಿನಲ್ಲಿ ತಮ್ಮ ಆಪ್ತರ ಜೊತೆ ಸಮಾಲೋಚನೆ ಬಳಿಕ ಸಿಂಗ್ ಅವರು ಅಧಿಕೃತವಾಗಿ ಪಕ್ಷ ರಚನೆಯ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಅಲ್ಲದೆ ರಾಜ್ಯದಲ್ಲಿರುವ ಎಲ್ಲಾ ರೈತ ಮುಖಂಡರ ಜತೆಗೂ ಸಿಂಗ್ ಅವರು ಸಂಪರ್ಕ ಸಾಧಿಸಲಿದ್ದು, ಸಣ್ಣ ಪಕ್ಷಗಳ ಜತೆಗೂ ಮೈತ್ರಿ ಮಾಡಿಕೊಳ್ಳುವ ಇರಾದೆ ಕ್ಯಾ. ಸಿಂಗ್ ಅವರಿಗೆ ಇದೆ ಎನ್ನಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮುಖಾಂತರ ಸಿಧು ಅವರನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸಿಂಗ್ ಗುಡುಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ