ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಚೂರಿ ಇರಿತ ಯತ್ನ ಆರೋಪ: ಮಹಿಳೆ ವಶಕ್ಕೆ, ದೂರು ದಾಖಲು

Published : Oct 14, 2026, 08:38 AM IST
Mamata Banerjee

ಸಾರಾಂಶ

ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರತ್ತ ಚೂರಿ ಹಿಡಿದು ಬಂದ ಮಹಿಳೆಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಭದ್ರತಾ ಲೋಪವಾಗಿದೆ ಎಂದು ಟಿಎಂಸಿ ನಾಯಕಿ ದೋಲಾ ಸೇನ್ ಆರೋಪಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋಲ್ಕತಾ: ಕೈಯಲ್ಲಿ ಚೂರಿ ಹಿಡಿದಿದ್ದ ಮಹಿಳೆಯೊಬ್ಬರು ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರತ್ತ ಧಾವಿಸಿ ಬಂದ ಆರೋಪ ಕೇಳಿಬಂದಿದೆ. ಮಮತಾ ತಮ್ಮ ಮನೆಯ ಬಳಿಕ ದುರ್ಗಾ ಪಂಡಾಲ್‌ಗೆ ತೆರಳಿದ್ದ ವೇಳೆ ಆರೋಪಿ ಮಹಿಳೆ ಆಕ್ರಮಣಕಾರಿಯಾಗಿ ಮಾಜಿ ಸಿಎಂ ಅವರತ್ತ ಧಾವಿಸಿದರು. ಕೂಡಲೇ ಅವರನ್ನು ಹಿಡಿದು ಪೊಲೀಸರಿಗೆ ಹಸ್ತಾಂತರ ಮಾಡಲಾಯಿತು ಎಂದು ಮಮತಾ ಆಪ್ತರು ಹೇಳಿದ್ದಾರೆ. ಬಳಿಕ ಈ ಕುರಿತು ಟಿಎಂಸಿ ಕಾರ್ಯಕರ್ತರು ಪೊಲೀಸರಿಗೆ ದೂರು ಕೂಡಾ ನೀಡಿದ್ದಾರೆ.

ಈ ಮಹಿಳೆ ತನ್ನನ್ನು ತಾನು ಸಿವಿಕ್ ವಾಲೆಂಟಿಯರ್ ಎಂದು ಪರಿಚಯಿಸಿಕೊಂಡಿದ್ದಾಳೆ. ತನ್ನಿಷ್ಠಾ ಸಹಾ ಹೆಸರಿನ ಈಕೆ ಡ್ರಗ್ಸ್ ವ್ಯಸನಿ ಎಂದು ದೋಲಾ ಸೇನ್ ದೂರಿದ್ದಾರೆ. ದಾಳಿ ಮಾಡಿದ ಮಹಿಳೆ ತನ್ನನ್ನು ಮಮತಾ ಅವರ ಸೋದರ ಸೊಸೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಮನೆಯ ಬಾಗಿಲಲ್ಲಿ ನಿಂತು ಮಮತಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ. ಆಮೇಲೆ ನೇರವಾಗಿ ರಸ್ತೆಯಲ್ಲೇ ಮಲಗಿದ್ದಾಳೆ. ದೋಲಾ ಸೇನ್ ಅವರು ತಕ್ಷಣವೇ ಕಾಳಿಘಾಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬದುಕಿರೋದು ಇಷ್ಟವಿಲ್ಲವೇ?

ಮಾಜಿ ಮುಖ್ಯಮಂತ್ರಿಯ ಭದ್ರತಾ ಲೋಪದ ಬಗ್ಗೆ ದೋಲಾ ಸೇನ್ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಘಟನೆ ನಡೆದ ತಕ್ಷಣ ಅಲ್ಲೇ ಇದ್ದ ಇಬ್ಬರು ಪೊಲೀಸರಿಗೆ ದೋಲಾ ಸೇನ್ ಮಾಹಿತಿ ನೀಡಿದ್ದಾರೆ. ತಾವು ರಾಜ್ಯ ಪೊಲೀಸರು, ಕೋಲ್ಕತ್ತಾ ಪೊಲೀಸ್ ವ್ಯಾಪ್ತಿಯಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಉತ್ತರಿಸಿದ್ದಾರೆ. ಪೊಲೀಸರು ಆರೋಪಿ ಮಹಿಳೆಯನ್ನು ದೂರ ಕರೆದೊಯ್ದು ಟೀ ಕುಡಿಸಿದ್ದಾರೆ ಎಂದು ದೋಲಾ ಸೇನ್ ಆರೋಪಿಸಿದ್ದಾರೆ. "ಮಾಜಿ ಮುಖ್ಯಮಂತ್ರಿ ಬದುಕಿರುವುದು ಈಗಿನ ಮುಖ್ಯಮಂತ್ರಿಗೆ ಇಷ್ಟವಿಲ್ಲವೇ? ಎಂದು ಭದ್ರತೆಯ ಬಗ್ಗೆ ದೋಲಾ ಸೇನ್ ಕಳವಳ ವ್ಯಕ್ತಪಡಿಸಿದ್ದಾರೆ.

ಈಗ ಬೊಬ್ಬೆ ಹೊಡೆಯುತ್ತಿದ್ದಾರೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕೈಗಾರಿಕಾ ಸಚಿವ ತಪಸ್ ರಾಯ್, "ಮಾಜಿ ಸಿಎಂ ಭದ್ರತೆ ಬಗ್ಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ಸಂಪೂರ್ಣ ಅರಿವಿದೆ. ಕಳೆದ 15 ವರ್ಷಗಳಲ್ಲಿ ಮಮತಾ ಅವರು ರಾಜ್ಯದ ಜನತೆಗೆ, ಮಹಿಳೆಯರಿಗೆ, ಉದ್ಯಮಿಗಳಿಗೆ ಭದ್ರತೆ ನೀಡಿದ್ದರಾ? ಈಗ ಬೊಬ್ಬೆ ಹೊಡೆಯುತ್ತಿದ್ದಾರೆ! ತಮ್ಮ ಆಡಳಿತದ ದಿನಗಳನ್ನು ಅವರು ಮರೆತಿದ್ದಾರಾ?" ಎಂದು ತಿರುಗೇಟು ನೀಡಿದ್ದಾರೆ. ಆದರೂ, ಈ ಘಟನೆ ಬಗ್ಗೆ ಸಿಎಂ ಸುವೇಂದು ಅಧಿಕಾರಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯ ಕೈ ಹಿಡಿದು ಎಳೆದರಾ ರಾಹುಲ್ ಗಾಂಧಿ? ಗಂಭೀರ ಆರೋಪ | ವಿಡಿಯೋ
ಭಾರತದ ಆರ್ಥಿಕ ಭವಿಷ್ಯದ ಬಗ್ಗೆ IMF ಅಚ್ಚರಿಯ ವರದಿ! ಅಮೆರಿಕಾ, ಚೀನಾಗೆ ಎಷ್ಟನೇ ಸ್ಥಾನ?