4 ತಾಸು ರಾಡ್‌ ಹಿಡಿದು ಬದುಕಿದ 16 ಕಾರ್ಮಿಕರು: ಉತ್ತರಾಖಂಡ ದುರಂತದಲ್ಲೊಂದು ವಿಸ್ಮಯ!

Published : Feb 10, 2021, 07:33 AM ISTUpdated : Feb 10, 2021, 08:03 AM IST
4 ತಾಸು ರಾಡ್‌ ಹಿಡಿದು ಬದುಕಿದ 16 ಕಾರ್ಮಿಕರು: ಉತ್ತರಾಖಂಡ ದುರಂತದಲ್ಲೊಂದು ವಿಸ್ಮಯ!

ಸಾರಾಂಶ

4 ತಾಸು ರಾಡ್‌ ಹಿಡಿದು ಬದುಕಿದ 16 ಕಾರ್ಮಿಕರು!| ಪವಾಡ ಸದೃಶ| ಉತ್ತರಾಖಂಡ ದುರಂತದಲ್ಲೊಂದು ವಿಸ್ಮಯ| ಸುರಂಗದ ನೀರಲ್ಲಿ ನೇತಾಡಿ ಜೀವ ಉಳಿಸಿಕೊಂಡರು

ಡೆಹ್ರಾಡೂನ್(ಫೆ.10): ‘ಎಂದಿನಂತೆ ನಾವೆಲ್ಲಾ ತಪೋವನ ಜಲವಿದ್ಯುದಾಗಾರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆವು. ನಾವು ಕೆಲಸ ಮಾಡುತ್ತಿದ್ದುದು ಸುರಂಗದ 1000 ಅಡಿ ಒಳಭಾಗದಲ್ಲಿ. ಬೆಳಗ್ಗೆ 10 ಗಂಟೆಯ ಸಮಯವಿರಬಹುದು. ಇದ್ದಕ್ಕಿದ್ದಂತೆ ಜೋರಾಗಿ ವಿಷಲ್‌ ಸದ್ದು ಕೇಳಿಸಿತು. ಜನರ ಚೀರಾಟದ ಸದ್ದೂ ಕೇಳಿಬಂತು. ಅಷ್ಟರಲ್ಲೇ ಹೊರಗೆ ಓಡಿಬನ್ನಿ ಎಂದು ಸೂಚನೆ ನೀಡಿದ್ದು ಕೇಳಿಸಿತು. ಬಹುಶಃ ಬೆಂಕಿಯ ಮುನ್ಸೂಚನೆ ಇರಬೇಕೆಂದು ನಾವೆಲ್ಲಾ ಆತಂಕಗೊಂಡು ಸುರಂಗದಿಂದ ಹೊರಗೆ ಓಡುವ ಹೊತ್ತಿಗಾಗಲೇ, ಅತ್ತ ಕಡೆಯಿಂದ ಸಮುದ್ರೋಪಾದಿಯಲ್ಲಿ ನೀರು ಸುರಂಗದೊಳಗೆ ನುಗ್ಗಿ ಬರತೊಡಗಿತ್ತು. ಪಕ್ಕಾ ಹಾಲಿವುಡ್‌ ಸಿನಿಮಾ ರೀತಿಯಲ್ಲಿ...’

- ಇದು ಉತ್ತರಾಖಂಡದ ನೀರ್ಗಲ್ಲು ಸ್ಫೋಟದ ವೇಳೆ ತಪೋವನ-ವಿಷ್ಣುಗಢ ಸುರಂಗದಲ್ಲಿ ಸಿಕ್ಕಿಬಿದ್ದು, ರಕ್ಷಿಸಲ್ಪಟ್ಟರಾಜೇಶ್‌ ಕುಮಾರ್‌ ಎಂಬುವರು ತಮ್ಮ ಅನುಭವ ಹಂಚಿಕೊಂಡ ರೀತಿ. ಈ ಸುರಂಗದಿಂದ ಐಟಿಬಿಪಿ ಸಿಬ್ಬಂದಿ 16 ಜನರನ್ನು ರಕ್ಷಿಸಿದ್ದರು. ಈ ಕುರಿತ ವಿಡಿಯೋ ಭಾನುವಾರ ಸಂಜೆ ವೈರಲ್‌ ಆಗಿತ್ತು. ರಕ್ಷಣೆಗೆ ಒಳಗಾದವರಲ್ಲಿ ಒಬ್ಬರಾದ ಕುಮಾರ್‌ ತಮ್ಮ ಭಯಾನಕ ಅನುಭವಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಕುತ್ತಿಗೆ ಮಟ್ಟಕ್ಕೂ ಕೆಸರು:

‘ನಾವು ಸುರಂಗದಲ್ಲಿದ್ದಾಗ ಪ್ರವಾಹದಲ್ಲಿ ಸಿಲುಕಿದೆವು. ಬರಬರುತ್ತಾ ಸುರಂಗದೊಳಗೆ ನೀರಿನ ಪ್ರಮಾಣ ಹೆಚ್ಚುತ್ತಾ ಹೋಯಿತು. ನಮ್ಮ ಕುತ್ತಿಗೆಯ ಮಟ್ಟದವರೆಗೂ ನೀರು, ಕೆಸರು, ಕಲ್ಲು ತುಂಬಿಕೊಂಡಿದ್ದವು. ನಾವೆಲ್ಲಾ ನಮ್ಮ ಬದುಕು ಮುಗಿಯಿತು ಎಂದೇ ಭಾವಿಸಿದ್ದೆವು. ಆದರೆ ಅಷ್ಟರಲ್ಲೇ ಸುರಂಗದೊಳಗೆ ಹೊಡೆಯಲಾಗಿದ್ದ ಕಬ್ಬಿಣದ ರಾಡ್‌ಗಳು ಕಂಡುಬಂದವು. ನಾವೆಲ್ಲಾ ಅದನ್ನು ಗಟ್ಟಿಯಾಗಿ ಹಿಡಿದು ನೇತಾಡತೊಡಗಿದೆವು. ಬದುಕುವ ಆಸೆ ಕ್ಷೀಣಿಸಿದ್ದರೂ, ಆಸೆಯಂಥೂ ಇದ್ದೇ ಇತ್ತು. ಹೀಗಾಗಿಯೇ ಏನಾದರೂ ಆಗಲಿ ಕಬ್ಬಿಣದ ರಾಡ್‌ಗಳನ್ನು ಯಾರೂ ಬಿಡಬಾರದು. ಗಟ್ಟಿಯಾಗಿಯೇ ಹಿಡಿದುಕೊಂಡಿರಬೇಕೆಂದು ಪರಸ್ಪರ ಮಾತನಾಡಿಕೊಂಡೆವು. ಈ ಮೂಲಕ ಪರಸ್ಪರರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದೆವು. ಹೀಗೆಯೇ 4 ಗಂಟೆ ಕಳೆದು ಹೋಗಿತ್ತು. ಬಹುಷಃ ದೇವರು ನಮ್ಮ ಜೊತೆಗಿದ್ದ. ಜೊತೆಗೆ ನಮ್ಮ ಕೈಗಳೂ ನಮ್ಮ ಕೈಬಿಡಲಿಲ್ಲ. 4 ಗಂಟೆಯವರೆಗೆ ಕಬ್ಬಿಣದ ರಾಡ್‌ ಅನ್ನು ಬಿಡದೇ ಹಿಡಿದುಕೊಂಡಿದ್ದವು.

‘ಸುಮಾರು 4 ಗಂಟೆಯ ಬಳಿಕ ಸುರಂಗದಲ್ಲಿ ಬಳಿಕ ನಿಧಾನವಾಗಿ ನೀರಿನ ಮಟ್ಟಇಳಿಯತೊಡಗಿತು. ಬಳಿಕ ಕೆಸರು ಕೂಡಾ ಇಳಿಯಿತು. ಬಳಿಕ ನಾವು ನಿಧಾನವಾಗಿ ಕೆಸರಿನಲ್ಲೇ ಹೆಜ್ಜೆ ಇಟ್ಟುಕೊಂಡು, ಅಲ್ಲಲ್ಲಿ ಇದ್ದ ಕಲ್ಲು ಬಂಡೆ ಏರಿಕೊಂಡು ಸುರಂಗದ ಮುಖಭಾಗದತ್ತ ತೆರಳಲು ಆರಂಭಿಸಿದೆವು. ಅಷ್ಟರಲ್ಲಿ ಅಲ್ಲಿ ಸಣ್ಣದೊಂದು ಬೆಳಕಿನ ಕಿಂಡಿ ಕಾಣಿಸಿತು. ಅದರೆ ಅದು ಎಲ್ಲಿಗೆ ಕರೆದೊಯ್ಯಲಿದೆ ಎಂಬುದು ಗೊತ್ತಿರಲಿಲ್ಲ. ಆದರೆ ಅಲ್ಲಿಂದ ಉಸಿಡಾಡಲು ಸಣ್ಣ ಪ್ರಮಾಣ ಗಾಳಿ ಬರುತ್ತಿರುವುದಂತೂ ಸ್ಪಷ್ಟವಾಗಿತ್ತು. ಅಷ್ಟರಲ್ಲಿ ನಮ್ಮಲ್ಲಿ ಒಬ್ಬರ ಮೊಬೈಲ್‌ಗೆ ಸಿಗ್ನಲ್‌ ಕೂಡಾ ಲಭ್ಯವಾಯಿತು. ನಾವು ಕೂಡಲೇ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿಕೊಂಡೆವು. ಮುಂದೆ ಕೆಲ ಗಂಟೆಗಳಲ್ಲೇ ರಕ್ಷಣಾ ಸಿಬ್ಬಂದಿ ನಮ್ಮನ್ನು ಅಲ್ಲಿಂದ ಹೊರತೆಗೆದರು’ ಎಂದು ಕುಮಾರ್‌ ಹೇಳಿದರು.

ಇನ್ನೂ 175 ಜನ ನಾಪತ್ತೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಇನ್ನೂ 5 ಜನರ ಶವ ಮಂಗಳವಾರ ಪತ್ತೆಯಾಗಿದೆ. ಇದರೊಂದಿಗೆ ದುರ್ಘಟನೆಯಲ್ಲಿ ಬಲಿಯಾದವರ ಸಂಖ್ಯೆ 31ಕ್ಕೆ ಏರಿದೆ. ಮತ್ತೊಂದೆಡೆ 175 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಘಟನಾ ಸ್ಥಳದಲ್ಲಿ ಐಟಿಬಿಪಿ, ಎನ್‌ಡಿಆರ್‌ಎಫ್‌, ಸೇನೆ, ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಸಾವಿರಾರು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಂಗಾಪುರದ ಕೋತಿ ಬ್ಯೂಟಿಗೆ ಮನಸೋತ ಯುವತಿ: ಇದು ಕಾಸ್ಟ್ಯುಮ್ ಅಲ್ಲ ದೇವರೇ ಕೊಡಿಸಿದ ಸೊಗಸಾದ ಬಟ್ಟೆ
ನರಕಕ್ಕೆ ಬನ್ನಿ ಅಂತ ಕರೆಯುತ್ತೆ ಈ ವೀಡಿಯೋ: ಅನೇಕರ ತಲೆ ಕೆಡಿಸಿದ 140 ವರ್ಷಗಳ ಅವಧಿಯ ವಿಚಿತ್ರ ಯುಟ್ಯೂಬ್ ವೀಡಿಯೋ