* ಶೀಘ್ರ ಮೊಬೈಲ್ ಕರೆ, ಇಂಟರ್ನೆಟ್ ದುಬಾರಿ?
* ಏರ್‌ಟೆಲ್‌ನಿಂದ 20%-25% ದರ ಏರಿಕೆ
* ವೊಡಾಫೋನ್‌ನಿಂದಲೂ ಹೆಚ್ಚಳ ಸಾಧ್ಯತೆ
ನವದೆಹಲಿ(ನ.23): ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಯಾದ ಏರ್‌ಟೆಲ್ (Bharti Airtel, Telecommunications Company) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ (Prepaid Users) ಆಘಾತ ನೀಡಿದ್ದು, ಕರೆ, ಡೇಟಾ ದರವನ್ನು (Call And data Price) ಶೇ.20 ರಿಂದ 25ರಷ್ಟುಏರಿಕೆ ಮಾಡಿದೆ. ಹೀಗಾಗಿ ಆರ್ಥಿಕ ಸಂಕಷ್ಟದ (Financial Crisis) ಮಾತುಗಳನ್ನಾಡುತ್ತಿರುವ ವೊಡಾಫೋನ್ ಐಡಿಯಾ (Vodafone Idea) ಸೇರಿದಂತೆ ಉಳಿದ ಮೊಬೈಲ್ ಸೇವಾ ಕಂಪನಿಗಳೂ ಶೀಘ್ರ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಏರ್‌ಟೆಲ್ ಪರಿಷ್ಕೃತ ದರವು ನ.26ರಿಂದ ಜಾರಿಗೆ ಬರಲಿದೆ. ಕರೆ ದರವನ್ನು ಶೇ.25ರಷ್ಟುಮತ್ತು ಅನಿಯಮಿತ ಕರೆ, ಡೇಟಾ ದರವನ್ನು ಶೇ.20ರಷ್ಟುಏರಿಕೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಆರ್ಥಿಕವಾಗಿ ಆರೋಗ್ಯಕರ ಉದ್ಯಮದ ಮಾದರಿಯನ್ನು ಅನುಸರಿಸಲು ಹಾಗೂ ಬಂಡವಾಳಕ್ಕೆ ತಕ್ಕ ಲಾಭಕ್ಕಾಗಿ ಪ್ರತಿ ಬಳಕೆದಾರನಿಂದ 200 ರು. ಹಾಗೂ ಗರಿಷ್ಠ 300 ರು. ಸರಾಸರಿ ಆದಾಯ (ಎಪಿಆಪಿರ್‌ಯು) ಬರುವಂತೆ ಏರ್‌ಟೆಲ್ ನೋಡಿಕೊಳ್ಳುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
undefined
ಹೊಸ ದರ ಹೇಗಿದೆ?:
28 ದಿನಗಳ ವಾಯ್ಸ್ ಕರೆ ಸೌಲಭ್ಯಕ್ಕೆ ಸದ್ಯ 79 ರು. ದರ ಇದ್ದು ಇದನ್ನು 99 ರು.ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಶೇ 50ರಷ್ಟುಹೆಚ್ಚುವರಿ ಟಾಕ್‌ಟೈಮ್, 200 ಎಂಬಿ ಡೇಟಾ ಹಾಗೂ 1ಪೈಸೆ/ಸೆಕೆಂಡ್ ವಾಯ್ಸ್ ಟಾರಿಫ್ (Voice Tarrif) ದೊರೆಯಲಿದೆ. ಅದೇ ರೀತಿ ಅನ್‌ಲಿಮಿಟೆಡ್ ವಾಯ್‌್ಸ ಕರೆ ಸೌಲಭ್ಯ ವಿಭಾಗದಲ್ಲಿ ಈಗಿರುವ 149 ರು. ಯೋಜನೆಯನ್ನು ಪರಿಷ್ಕರಿಸಿ ದರವನ್ನು 179ರು. ಗೆ ಹೆಚ್ಚಿಸಲಾಗಿದೆ. 2,498 ರು. ಯೋಜನೆಯನ್ನು ಪರಿಷ್ಕರಿಸಿ 2,999 ರು. ನಿಗದಿಪಡಿಸಲಾಗಿದೆ. 48 ರು. ಡೇಟಾ ಟಾಪ್-ಅಪ್‌ಗೆ 58 ರು. ನಿಗದಿಪಡಿಸಲಾಗಿದೆ. 12 ಜಿಬಿ ಡೇಟಾ ಯೋಜನೆಯ ದರವನ್ನು 98ರು. ಬದಲು 118 ರು. ಗೆ ಹೆಚ್ಚಿಸಲಾಗಿದೆ. ದೇಶಾದ್ಯಂತ 33.2 ಕೋಟಿ ಜನರು ಏರ್‌ಟೆಲ್ ಬಳಕೆದಾರರಾಗಿದ್ದಾರೆ.
ಪ್ಲ್ಯಾನ್ ದರ ಎಷ್ಟು ಏರಿಕೆ?
ಹಾಲಿ | ಪರಿಷ್ಕೃತ |
79 ರೂ. | 99 ರೂ. |
149 ರೂ. | 179 ರೂ. |
48 ರೂ. | 58 ರೂ. |
98 ರೂ. | 118 ರೂ. |
2498 ರೂ. | 2999 ರೂ. |
ಪ್ರತಿ ಬಳಕೆದಾರರಿಂದ ಪಡೆಯುವ ಸರಾಸರಿ ಆದಾಯ (ಎಆರ್‌ಪಿಯು) 200 ರೂ. ಇರಬೇಕು ಎಂದು ಭಾರ್ತಿ ಏರ್‌ಟೆಲ್ ಪ್ರತಿಪಾದಿಸುತ್ತಾ ಬಂದಿದೆ. ಅಂತಿಮವಾಗಿ ಇದು 300 ರೂ. ಇರಬೇಕು ಎಂದು ಏರ್‌ಟೆಲ್ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲೇ ಏರ್‌ಟೆಲ್‌ನ ಎಆರ್‌ಪಿಯು ಗರಿಷ್ಠ ಮಟ್ಟದಲ್ಲಿದ್ದು 150 ರೂ. ಆಸುಪಾಸಿನಲ್ಲಿದೆ.
ಕನಿಷ್ಠ ಮೊತ್ತ 99 ರೂ ರೀಚಾರ್ಜ್ ಮಾಡಲೇಬೇಕು
ಭಾರತದ ಟೆಲಿಕಾಂಕ್ಷೇತ್ರದಲ್ಲಿ ಉಂಟಾದ ದರಸಮರ ಪರಿಣಾಮದಿಂದ ಈಗಲೂ ಚೇತರಿಸಿಕೊಳ್ಳಲು ಒದ್ದಾಡುತ್ತಿರುವ ಏರ್‌ಟೆಲ್ ಕಂಪೆನಿ ಪ್ರಿಪೇಯ್ಡ್ ಸುಂಕಗಳನ್ನು ಹೆಚ್ಚಿಸುವ ಮೂಲಕ ಮತ್ತೆ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಇಷ್ಟೇ ಅಲ್ಲದೇ, ನೀವು ಏರ್‌ಟೆಲ್ ಸಿಮ್ ಸೇವೆಗಳನ್ನು ಪಡೆಯಲು ಕನಿಷ್ಠ ಮೊತ್ತ 99 ರೂ.ಷ್ಟು ಹಣವನ್ನು ರಿಚಾರ್ಜ್ ಮಾಡಿಸಲೇಬೇಕಿದೆ. ಈ ಮೂಲಕ ಏರ್‌ಟೆಲ್ ಸಿಮ್ ಅನ್ನು ಗ್ರಾಹಕರ ಮೊಬೈಲ್‌ನಲ್ಲಿನ ಎರಡನೇ ಸ್ಲಾಟ್ ಸಿಮ್ ಆಗಿ ಬದಲಾಯಿಸದೇ ಇರುವಂತೆ ನೋಡಿಕೊಳ್ಳುವಂತಹ ವಿಶೇಷ ಯೋಜನೆ ರೂಪಿಸಿದೆ. ಆದರೆ, ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡುವ ಏರ್‌ಟೆಲ್ ತಂತ್ರಕ್ಕೆ ಬಳಕೆದಾರರು ಆಕ್ರೊಶ ವ್ಯಕ್ತಪಡಿಸಿದ್ದಾರೆ.