ನಿಗದಿಗಿಂತ ದೂರದಲ್ಲಿ ಇಳಿದಿದ್ದೇ ಅಪಘಾತಕ್ಕೆ ಕಾರಣ?

By Kannadaprabha NewsFirst Published Aug 9, 2020, 8:27 AM IST
Highlights

ನಿಗದಿಗಿಂತ ದೂರದಲ್ಲಿ ಇಳಿದಿದ್ದೇ ಅಪಘಾತಕ್ಕೆ ಕಾರಣ?| ರನ್‌ವೇ ಸರಿಯಾಗಿ ಕಾಣಿಸದ ಕಾರಣ ನಿಗದಿತ ಸ್ಥಳಕ್ಕಿಂತ 1000 ಮೀಟರ್‌ ದೂರದಲ್ಲಿ ರನ್‌ವೇ ಸಂಪರ್ಕ| ಅತ್ಯಂತ ವೇಗದಲ್ಲಿ ಲ್ಯಾಂಡಿಂಗ್‌:

ನವದೆಹಲಿ(ಆ.09): ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಪತನಗೊಂಡ ವಿಮಾನವು, ರನ್‌ವೇನಲ್ಲಿ ಭೂಮಿಯನ್ನು ಸಂಪರ್ಕಿಸುವ ನಿಗದಿತ ಸ್ಥಳಕ್ಕಿಂತ 1000 ಮೀಟರ್‌ ದೂರದಲ್ಲಿ ಸಂಪರ್ಕ ಮಾಡಿತ್ತು. ಈ ಸಂಗತಿಯೇ ವಿಮಾನವು ರನ್‌ವೇನಿಂದ ಜಾರಿ ಕಂದಕಕ್ಕೆ ಬೀಳಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ವಿಮಾನ ದುರಂತ: ಮಾನವೀಯತೆ, ಒಗ್ಗಟ್ಟು ಪ್ರದರ್ಶಿಸಿದ ದೇವರ ನಾಡಿನ ಜನತೆ!

ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟೇಬಲ್‌ ಟಾಪ್‌ ವಿಮಾನ ನಿಲ್ದಾಣವಾಗಿದ್ದು, ಇಲ್ಲಿನ ರನ್‌ವೇಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ವಿಮಾನಗಳು ಇಳಿಯುತ್ತವೆ. ಅಂತೆಯೇ ಶುಕ್ರವಾರ ರಾತ್ರಿ ಕೂಡ ದುಬೈನಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವನ್ನು ಮೊದಲಿಗೆ ಪೂರ್ವದಿಂದಲೇ ಇಳಿಸಲು ಪೈಲಟ್‌ ಯತ್ನಿಸಿದ್ದಾರೆ. ಆದರೆ, ಜೋರಾಗಿ ಮಳೆ ಹೊಯ್ಯುತ್ತಿದ್ದುದರಿಂದ ರನ್‌ವೇ ಕಾಣಿಸಲಿಲ್ಲ. ಹೀಗಾಗಿ ವಿಮಾನವನ್ನು ಮತ್ತೆ ಟೇಕಾಫ್‌ ಮಾಡಿ, ಆಗಸದಲ್ಲಿ ಸುತ್ತು ಹೊಡೆಸಿದ್ದಾರೆ.

ಏನಿದು ಟೇಬಲ್‌ಟಾಪ್‌ ರನ್‌ವೇ? ಮಂಗಳೂರು ದುರಂತ ನೆನಪಿಸಿದ ಕಲ್ಲಿಕೋಟೆ ವಿಮಾನ ಅಪಘಾತ!

ಬಳಿಕ ಏರ್‌ಟ್ರಾಫಿಕ್‌ ಕಂಟ್ರೋಲ್‌ ನೆರವನ್ನು ಪಡೆದು ಸಂಪೂರ್ಣ ವಿರುದ್ಧ ದಿಕ್ಕಿನಿಂದ, ಅಂದರೆ ಪಶ್ಚಿಮದಿಂದ ಇಳಿಸಿದ್ದಾರೆ. ಆಗಲೂ ರನ್‌ವೇ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ವಿಮಾನವು ರನ್‌ವೇ ಆರಂಭವಾಗುವ ಸ್ಥಳದಿಂದ 1000 ಮೀಟರ್‌ ದೂರವಿರುವ ಟ್ಯಾಕ್ಸಿವೇದಲ್ಲಿ ನೆಲಕ್ಕಿಳಿದಿದೆ. ಅಲ್ಲಿಂದ ಮುಂದೆ ಜಾರಿ ಕಂದಕಕ್ಕೆ ಬಿದ್ದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಅತ್ಯಂತ ವೇಗದಲ್ಲಿ ಲ್ಯಾಂಡಿಂಗ್‌:

ದುರಂತಕ್ಕೀಡಾದ ವಿಮಾನ ಲ್ಯಾಂಡ್‌ ಆಗುವಾಗ ಸಾಮಾನ್ಯ ವೇಗಕ್ಕಿಂತ ಬಹಳ ಹೆಚ್ಚು ವೇಗದಲ್ಲಿತ್ತು ಎಂದು ಬದುಕುಳಿದ ಪ್ರಯಾಣಿಕರು ಹೇಳಿದ್ದಾರೆ. ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್‌ ಕಂಟ್ರೋಲ್‌ ವಿಭಾಗದ ಮೂಲಗಳು ಕೂಡ ಈ ವಿಮಾನ ಲ್ಯಾಂಡ್‌ ಆಗುವಾಗ 240 ಮೈಲಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಹೇಳಿವೆ. ಸಾಮಾನ್ಯವಾಗಿ ವಿಮಾನ ಲ್ಯಾಂಡ್‌ ಆಗುವಾಗ ಅದರ ವೇಗ ಗಂಟೆಗೆ 200 ಮೈಲಿಗಿಂತ ಕಡಿಮೆ ಇರುತ್ತದೆ.

ಇನ್ನು, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೋಳಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಮುನ್ನ ಎರಡು ಬಾರಿ ಲ್ಯಾಂಡಿಂಗ್‌ಗೆ ಯತ್ನಿಸಿತ್ತು ಎಂಬ ಮಾಹಿತಿ ಜಗತ್ತಿನ ಎಲ್ಲ ವಾಣಿಜ್ಯ ವಿಮಾನಗಳನ್ನು ಟ್ರ್ಯಾಕ್‌ ಮಾಡುವ ಸ್ವೀಡನ್‌ನ ಫ್ಲೈಟ್‌ರಾಡಾರ್‌24 ಸಂಸ್ಥೆಯ ವೆಬ್‌ಸೈಟಿನಲ್ಲೂ ದಾಖಲಾಗಿದೆ.

click me!