
ಗುವಾಹಟಿ: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾರೀ ಶೌರ್ಯ ತೋರಿದ ಯೋಧರಿಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಭಾರತೀಯ ವಾಯಪಡೆಯ ಕಾಪ್ಟರ್‌ಗಳು ಭಾನುವಾರ ಇಲ್ಲಿನ ಆಗಸದಲ್ಲೇ ಸಿಂದೂರ ವರ್ಣವನ್ನು ಬಿಡಿಸುವ ಮೂಲಕ ಗೌರವ ಸೂಚಿಸಿದೆ. ಶನಿವಾರ ಗುವಾಹಟಿಯಲ್ಲಿ ನಡೆದ ವಾಯುಪಡೆ ದಿನದ ಅಂತಿಮ ಕಾರ್ಯಕ್ರಮದಲ್ಲಿ ವಾಯುಪಡೆಯ ಸಾರಂಗ್ ಕಾಪ್ಟರ್‌ಗಳು ಆಗಸದಲ್ಲಿ ಬಿಳಿ ಮತ್ತು ಕೆಂಪು ಬಣ್ಣವನ್ನು ಸೂಸಿ ಗೌರವ ಸೂಚಿಸಿತು.
ಜೈಪುರ: ರಾಜಸ್ಥಾನದ ಗಡಿ ಭಾಗದಲ್ಲಿ ಭದ್ರತಾ ಪಡೆಗಳು ತಾಲೀಮು ನಡೆಸುತ್ತಿದ್ದ ವೇಳೆ ಕ್ಷಿಪಣಿಯೊಂದು ಜೈಸಲ್ಮೇರ್ ಸಮೀಪದ ಹಳ್ಳಿ ಬಳಿ ಬಿದ್ದಿದ್ದು, ಭಾರಿ ಸದ್ದು ಕೇಳಿಬಂದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಭಾನುವಾರ ಸೇನಾಪಡೆಗಳು ಪೋಖ್ರಣ್ ಪ್ರದೇಶದಲ್ಲಿ ಸಾಮಾನ್ಯ ಅಭ್ಯಾಸ ನಡೆಸುತ್ತಿದ್ದವು. ಈ ವೇಳೆ ಹಾರಿಬಿಟ್ಟ ಕ್ಷಿಪಣಿಯೊಂದು ನಿಗದಿತ ವ್ಯಾಪ್ತಿಯನ್ನು ದಾಟಿ ಬದಾರಿಯಾ ಹಳ್ಳಿಯಿಂದ 500 ಮೀಟರ್ ದೂರದಲ್ಲಿ ಬಿದ್ದಿದೆ. ಪರಿಣಾಮ ಭಾರಿ ಸದ್ದು ಕೇಳಿಸಿದೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಬಳಿಕ ಸೇನಾಧಿಕಾರಿಗಳು, ಪೊಲೀಸರು ಸ್ಥಳಕ್ಕಾಗಮಿಸಿ, ಕ್ಷಿಪಣಿಯ ಭಾಗಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟವು ದಿನೇ ದಿನವೇ ಪಾತಾಳಮುಖವಾಗಿದ್ದು, ವಾಯುಗುಣಮಟ್ಟವು ‘ಅತ್ಯಂತ ಅಪಾಯಕಾರಿ’ ಹಂತಕ್ಕೆ ತಿರುಗಿದೆ. ಪರಿಣಾಮ ಉಸಿರಾಡಲೂ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ. 22 ವಾಯುಗುಣಮಟ್ಟ ಕೇಂದ್ರಗಳು ಕಳಪೆ ಎಂದು ಸೂಚಿಸಿವೆ.ಆದರೆ ದೆಹಲಿಯ ದ್ವಾರಕಾ ಪ್ರಾಂತ್ಯದಲ್ಲಿ ಮಾತ್ರ ಗಾಳಿಗುಣಮಟ್ಟವು ಬೆಳಗ್ಗೆ 198 ದಾಖಲಾಗಿದ್ದು, ಇದು ದೆಹಲಿಯಲ್ಲಿಯೇ ಉತ್ತಮ ಗುಣಮಟ್ಟದ್ದಾಗಿದೆ. ಮಿಕ್ಕಂತೆ ಎಲ್ಲೆಡೆಯೂ 400ಕ್ಕೂ ಹೆಚ್ಚು ಸೂಚ್ಯಂಕ ದಾಖಲಾಗಿದೆ. ಬವಾನಾ ಪ್ರಾಂತ್ಯದಲ್ಲಿ 438 ಅಂಕ ದಾಖಲಾಗಿದ್ದು, ಇದು ಅತ್ಯಂತ ಕಳಪೆಗುಣಮಟ್ಟದ್ದಾಗಿದೆ.
ಪರಿಣಾಮ ಅಧಿಕಾರಿಗಳು ಗ್ರಾಸ್ಪ್ 2 ಹಂತದ ಕ್ರಮಗಳನ್ನು ಕೈಗೊಂಡಿದ್ದಾರೆ. ದೀಪಾವಳಿ ಬಳಿಕ ದೆಹಲಿಯ ಸ್ಥಿತಿ ವಿಷಮ ಸ್ಥಿತಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿನಿಂದ ಕರ್ನಾಟಕ, ತ.ನಾಡಿಗೆ ಕೇರಳ ಟೂರಿಸ್ಟ್ ಬಸ್ ಬಂದ್
ಕೊಚ್ಚಿ: ನಿಯಮ ಉಲ್ಲಂಘನೆ ಆರೋಪದಡಿ ಕೇರಳದಲ್ಲಿ ಅನ್ಯ ರಾಜ್ಯಗಳ ಖಾಸಗಿ ಬಸ್‌ಗಳ ಮೇಲೆ ಭಾರೀ ದಂಡ ವಿಧಿಸಲಾಗುತ್ತಿದೆ ಎಂದು ಆರೋಪಿಸಿ ಅಲ್ಲಿಗೆ ನಿತ್ಯ ಸಂಚರಿಸುವ ಬಸ್ ಸೇವೆ ಸ್ಥಗಿತಕ್ಕೆ ತಮಿಳುನಾಡಿನ ಖಾಸಗಿ ಬಸ್ ಆಪರೇಟರ್‌ಗಳು ನಿರ್ಧರಿಸಿದ ಬೆನ್ನಲ್ಲೇ, ಕರ್ನಾಟಕ ಮತ್ತು ತಮಿಳುನಾಡಿಗೆ ಸಂಚರಿಸುವ ಅಂತರರಾಜ್ಯ ಬಸ್ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಕೇರಳದ ಐಷಾರಾಮಿ ಬಸ್ ಮಾಲೀಕರ ಸಂಘ ತಿಳಿಸಿದೆ. ಈ ಸ್ಥಗಿತ ಸೋಮವಾರ ಸಂಜೆ 6 ಗಂಟೆಯಿಂದ ಶುರುವಾಗಲಿದೆ. ‘ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೇರಳದ ವಾಹನಗಳ ಮೇಲೆ ಭಾರೀ ದಂಡ, ಕಾನೂನುಬಾಹಿರ ರಾಜ್ಯ ಮಟ್ಟದ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಕೇರಳ ನಿರ್ವಾಹಕರಿಗೆ ಸೇರಿದ ಅಖಿಲ ಭಾರತ ಪ್ರವಾಸಿ ಪರವಾನಗಿ(ಎಐಟಿಪಿ) ಬಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ’ ಎಂದು ಬಸ್ ಆಪರೇಟರ್‌ಗಳ ಸಂಘದ ರಾಜ್ಯಾಧ್ಯಕ್ಷ ಎ.ಜೆ. ರಿಜಾಸ್ ಆರೋಪಿಸಿದ್ದಾರೆ.==
‘ಕಳೆದ 1 ವರ್ಷದಿಂದ ತಮಿಳುನಾಡಿನಲ್ಲಿ ಕೇರಳದ ಬಸ್ಸುಗಳಿಂದ ದಂಡ ವಸೂಲಿ ಮಾಡಲಾಗುತ್ತಿದ್ದು, ಇದರಿಂದ ನಿರ್ವಾಹಕರು ಮತ್ತು ಪ್ರಯಾಣಿಕರಿಗೆ ಕಿರುಕುಳವಾಗುತ್ತಿದೆ. ಆರ್ಥಿಕ ನಷ್ಟ ಮತ್ತು ವಾಹನ ಮುಟ್ಟುಗೋಲಿನ ಭಯದಿಂದ ಅಂತರರಾಜ್ಯ ಸೇವೆ ನೀಡುತ್ತಿದ್ದವರು ಹಿಂಜರಿಯುತ್ತಿದ್ದಾರೆ. ವಾಹನ, ಚಾಲಕ, ಪ್ರಯಾಣಿಕರ ಸುರಕ್ಷತೆಗೆ ಸೇವೆ ಸ್ಥಗಿತದ ನಿರ್ಧಾರ ಅತ್ಯಗತ್ಯ’ ಎಂದು ಸಂಘ ಹೇಳಿದೆ. ಜತೆಗೆ, ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ಹಾಗೂ ಸಾರಿಗೆ ಇಲಾಖೆಯೊಂದಿಗೆ ಸೇರಿ ಇಂತಹ ಕಾನೂನುಬಾಹಿರ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದೆ.ಕೇರಳದಲ್ಲಿ ಖಾಸಗಿ ಬಸ್‌ಗಳಿಗೆ ನ.7ರಂದು ಏಕಾಏಕಿ ಲಕ್ಷಾಂತರ ರು. ದಂಡ ವಿಧಿಸಿದ ಆರೋಪ ಕೇಳಿ ಬಂದಿದ್ದರಿಂದ, ನಿತ್ಯವೂ ರಾಜ್ಯಕ್ಕೆ ಸಂಚರಿಸುವ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲು ತಮಿಳುನಾಡಿನ ಖಾಸಗಿ ಬಸ್ ಆಪರೇಟರ್‌ಗಳು ಶನಿವಾರ ನಿರ್ಧರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ