ಮೀಸಲು ಕುರಿತು ನೆಹರು ಬರೆದಿದ್ದ ಪತ್ರಗಳನ್ನು ಮೋದಿ ತಿರುಚಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ. ದೇಶವನ್ನು ದಿಕ್ಕು ತಪ್ಪಿಸಿದ್ದಕ್ಕಾಗಿ ಮೋದಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ನವದೆಹಲಿ : ಮೀಸಲು ಕುರಿತಂತೆ ರಾಜ್ಯಗಳಿಗೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಬರೆದಿದ್ದ ಪತ್ರಗಳಲ್ಲಿನ ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ತಿರುಚಿದ್ದಾರೆ ಎಂದು ಆರೋಪಿಸಿರುವ ರಾಜ್ಯಸಭೆಯ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಈ ವಿಷಯದಲ್ಲಿ ದೇಶವನ್ನು ದಿಕ್ಕು ತಪ್ಪಿಸಿದ್ದಕ್ಕಾಗಿ ಮೋದಿ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ಸೋಮವಾರ ಮಾತನಾಡಿದ ಖರ್ಗೆ, ‘ಮೋದಿ ತಮ್ಮ ಭಾಷಣದಲ್ಲಿ 1947-1952ರ ನಡುವೆ ದೇಶದಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲ. ಈ ವೇಳೆ ಕಾಂಗ್ರೆಸ್, ಸಂವಿಧಾನಕ್ಕೆ ಅಕ್ರಮವಾಗಿ ತಿದ್ದುಪಡಿ ತಂದಿತ್ತು ಎಂದು ಆರೋಪಿಸಿದ್ದಾರೆ. ಆದರೆ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿದ್ದು ಶ್ಯಾಮ್‌ಪ್ರಸಾದ್ ಮುಖರ್ಜಿ ಅವರನ್ನು ಒಳಗೊಂಡಿದ್ದ ಸಂವಿಧಾನಿಕ ಸಭೆಯ ಸದಸ್ಯರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲು ನೀಡಲು, ಉದ್ಯೋಗ ಮತ್ತು ಶಿಕ್ಷಣದ ಕುರಿತ ಇದ್ದ ಸಮಸ್ಯೆ ಪರಿಹರಿಸಲು ಮತ್ತು ಜಮೀನ್ದಾರಿ ಪದ್ಧತಿಯನ್ನು ತೊಡೆದು ಹಾಕಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು’ ಎಂದರು.
‘ತಿದ್ದುಪಡಿಯ ಇತರೆ ಅಂಶಗಳೆಂದರೆ, ಕೋಮುವಾದಿ ಪ್ರಾಪಗೆಂಡಾಕ್ಕೆ ಬ್ರೇಕ್ ಹಾಕುವುದಾಗಿತ್ತು. 1950ರ ಜು.3ರಂದು ಸರ್ದಾರ್ ಪಟೇಲ್ ಅವರು ನೆಹರು ಅವರಿಗೆ ಬರೆದ ಪತ್ರದಲ್ಲಿ, ‘ಮೇಲ್ಕಂಡ ಸಮಸ್ಯೆಗಳಿಗೆ ಸಾಂವಿಧಾನಿಕ ತಿದ್ದುಪಡಿಯೊಂದೇ ಪರಿಹಾರ ಎಂದು ತಿಳಿಸಿದ್ದರು’ ಎಂಬುದನ್ನು ಸದನದ ಗಮನಕ್ಕೆ ತರಲು ಬಯಸುತ್ತೇನೆ’ ಎಂದು ಖರ್ಗೆ ಹೇಳಿದರು. ‘ಈ ಕಾರಣಕ್ಕಾಗಿಯೇ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೆಹರೂ ಅವರು ಪತ್ರ ಬರೆದಿದ್ದರು. ಇದೇ ಅಂಶವನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ವಾಸ್ತವ ಅಂಶಗಳನ್ನು ತಿರುಚಿ ಮೀಸಲಾತಿ ವಿರುದ್ಧ ಸಿಎಂಗಳಿಗೆ ನೆಹರು ಸಿಎಂಗಳಿಗೆ ಪತ್ರ ಬರೆದಿದ್ದರು ಎಂದು ಹೇಳಿ ನೆಹರು ಅವರ ಮಾನಹಾನಿಗೆ ಯತ್ನಿಸಿದ್ದಾರೆ. ಹೀಗೆ ಮಾಡಿದ್ದಾರೆ. ಹೀಗಾಗಿ ಮೋದಿ, ಈ ಸದನ ಮತ್ತು ದೇಶದ ಮುಂದೆ ಕ್ಷಮೆ ಯಾಚಿಸಬೇಕು’ ಎಂದು ಖರ್ಗೆ ಆಗ್ರಹಿಸಿದರು.
’ಜೊತೆಗೆ, ಪ್ರಧಾನಿ ಭೂತಕಾಲದಲ್ಲಿ ವಾಸಿಸುತ್ತಿದ್ದಾರೆಯೇ ಹೊರತೂ ವರ್ತಮಾನದಲ್ಲಲ್ಲ. ಪ್ರಧಾನಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಈಗ ಏನು ಮಾಡಲಾಗಿದೆ ಎಂಬುದನ್ನು ವಿವರಿಸಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು’ ಎಂದು ಖರ್ಗೆ ಮೋದಿಗೆ ಛಾಟಿ ಬೀಸಿದರು.
undefined
ಆರೆಸ್ಸೆಸ್ ಸಂವಿಧಾನ ವಿರೋಧಿ:ಇದೇ ವೇಳೆ ಆರ್‌ಎಸ್‌ಎಸ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ‘ಆರ್‌ಎಸ್‌ಎಸ್ ಹಿಂದಿನ ನಾಯಕರು ಸಂವಿಧಾನಕ್ಕೆ ವಿರುದ್ಧವಾಗಿದ್ದರು. ಮನುಸ್ಮೃತಿ ಆಧಾರದಲ್ಲಿ ಸಂವಿಧಾನ ರಚನೆಯಾಗಿಲ್ಲ ಎಂಬ ಕಾರಣಕ್ಕೆ 1949ರಲ್ಲಿ ಆರ್‌ಎಸ್‌ಎಸ್ ಸಂವಿಧಾನವನ್ನು ವಿರೋಧಿಸಿತ್ತು ಎಂಬ ವಿಷಯ ಇಡೀ ದೇಶಕ್ಕೇ ಗೊತ್ತಿತ್ತು. ಆರ್‌ಎಸ್‌ಎಸ್‌ನ ಮುಖವಾಣಿಯಾದ ಆರ್ಗನೈಜರ್ 1949ರ ನ.30ರ ತನ್ನ ಸಂಚಿಕೆಯಲ್ಲಿ ಈ ಕುರಿತು ಬರೆದಿತ್ತು. ಅಷ್ಟು ಮಾತ್ರವಲ್ಲ, ಸಾಂವಿಧಾನಿಕ ಸಭೆ ಚರ್ಚೆಗಳನ್ನು ಗಮನಿಸಿದರೆ ಹಿಂದಿನ ಆರ್‌ಎಸ್‌ಎಸ್ ನಾಯಕರು ಸಂವಿಧಾನಕ್ಕೆ ವಿರೋಧ ಹೊಂದಿದ್ದರು ಎಂಬುದೂ ಕಂಡುಬರುತ್ತದೆ’ ಎಂದು ಖರ್ಗೆ ಆರೋಪಿಸಿದರು.
‘ರಾಷ್ಟ್ರಧ್ವಜ, ಅಶೋಕಚಕ್ರ ಮತ್ತು ಸಂವಿಧಾನವನ್ನು ವಿರೋಧಿಸಿದವರು ಇಂದು ನಮಗೆ ಸಂವಿಧಾನದ ಪಾಠ ಮಾಡುತ್ತಿದ್ದಾರೆ. ವಿಶ್ವದ ಶಕ್ತಿಶಾಲಿ ದೇಶಗಳೇ ಸಮಾಜದಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡದೇ ಇದ್ದ ಹೊತ್ತಿನಲ್ಲೇ, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ಸಮುದಾಯದ ಜನರಿಗೂ ಭಾರತದಲ್ಲಿ ಸಂವಿಧಾನದ ಮೂಲಕ ಮತದಾನದ ಹಕ್ಕು ನೀಡಲಾಗಿತ್ತು. ಇದನ್ನು ಸಾಧ್ಯ ಮಾಡಿದ್ದು ಕಾಂಗ್ರೆಸ್ ಸರ್ಕಾರ’ ಎಂದು ಖರ್ಗೆ ಬಣ್ಣಿಸಿದರು. ಸರ್ಕಾರದ ನಾಯಕರು ತಮಗೆ ಬೇಕಾದ ಅಂಶಗಳನ್ನಷ್ಟೇ ಆಯ್ದುಕೊಂಡು, ತಮಗೆ ಬೇಕಾದಂತೆ ವಾಸ್ತವತೆಯನ್ನು ತಿರುಚಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ದೇಶಕ್ಕಾಗಿ ಹೋರಾಡದೇ ಇದ್ದವರಿಗೆ ಸ್ವಾತಂತ್ರ್ಯ ಮತ್ತು ಸಂವಿಧಾನದ ಮಹತ್ವವಾದರೂ ಹೇಗೆ ಅರ್ಥವಾಗಬೇಕು ಎಂದು ಬಿಜೆಪಿ ನಾಯಕರಿಗೆ ಖರ್ಗೆ ಪರೋಕ್ಷವಾಗಿ ತಿವಿದರು.ಬಿಜೆಪಿ ಮೀಸಲಿಗೆ ವಿರೋಧ ಹೊಂದಿದೆ. ಈ ಕಾರಣಕ್ಕಾಗಿಯೇ ಅದು ಜಾತಿಗಣತಿಯನ್ನು ವಿರೋಧಿಸುತ್ತಿದೆ. ಬಿಜೆಪಿಗಿಂತ ಹೆಚ್ಚು ವೇಗವಾಗಿ ಮಹಿಳಾ ಮೀಸಲು ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಖರ್ಗೆ ಹೇಳಿದರು.
ಮೋದಿ ಹೇಳಿದ್ದೇನು?:
ಲೋಕಸಭೆಯ ನಡೆದ ಸಂವಿಧಾನದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಪ್ರಧಾನಿ ಮೋದಿ, ‘ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರು ಸಂವಿಧಾನವು ತಮ್ಮ ಕ್ರಮಗಳಿಗೆ ಅಡ್ಡಿಯಾದರೆ ಅದನ್ನು ಬದಲಿಸಬೇಕೆಂದು ಸಿಎಂಗಳಿಗೆ ಪತ್ರ ಬರೆದಿದ್ದರು. ಮೀಸಲು ವಿರುದ್ಧವೂ ಸಿಎಂಗಳಿಗೆ ಪತ್ರ ಬರೆದಿದ್ದರು’ ಎಂದು ಆರೋಪಿಸಿದ್ದರು.
ನಾಯಕರ ರಕ್ಷಣೆಗೆ ಕಾಂಗ್ರೆಸ್ಸಿಂದ ಸಂವಿಧಾನ ತಿದ್ದುಪಡಿ: ನಿರ್ಮಲಾ
ಪಿಟಿಐ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬೆನ್ನಲ್ಲೇ ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಸಂವಿಧಾನ ತಿದ್ದುಪಡಿ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ನಾಯಕರನ್ನು ರಕ್ಷಿಸಲು ಸಂವಿಧಾನ ತಿದ್ದುಪಡಿ ಮಾಡಿತೇ ಹೊರತು ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಲ್ಲ ಎಂದು ಕಿಡಿಕಾರಿದ್ದಾರೆ.
ದೇಶದ ಸಂವಿಧಾನದ 75 ವರ್ಷಗಳ ಹಾದಿ ಕುರಿತು ರಾಜ್ಯಸಭೆಯಲ್ಲಿ ಸೋಮವಾರ ಚರ್ಚೆ ಆರಂಭಿಸಿದ ಅವರು, ಸಂವಿಧಾನ ತಿದ್ದುಪಡಿ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಮತ್ತು ವಂಶಾಡಳಿತಕ್ಕೆ ಅನುಕೂಲವಾಗುವಂತೆ ಮಾತ್ರ ಪ್ರತಿಬಾರಿ ನಿರ್ಲಜ್ಜವಾಗಿ ಸಂವಿಧಾನ ತಿದ್ದುಪಡಿ ಮಾಡಿದೆ ಎಂದರು.
ಮಿತ್ರಪಕ್ಷಗಳ ಒತ್ತಡದಿಂದ ಮಹಿಳಾ ಮೀಸಲು ಮಸೂದೆಯನ್ನೂ ಕಾಂಗ್ರೆಸ್ ಬೆಂಬಲಿಸಲಿಲ್ಲ. ಇದು ಕಾಂಗ್ರೆಸ್‌ನ ಮಹಿಳಾ ವಿರೋಧಿ ನಡೆ ಎಂದು ನಿರ್ಮಲಾ ಅರೋಪಿಸಿದರು.ಶಾಬಾನೋ ಪ್ರಕರಣಕ್ಕೆ ಸಂಬಂಧಿಸಿದ 42 ತಿದ್ದುಪಡಿ ಸೇರಿ ವಿವಿಧ ತಿದ್ದುಪಡಿಗಳನ್ನು ಈ ವೇಳೆ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಅವಧಿಯಲ್ಲಾದ ತಿದ್ದುಪಡಿಗಳು ಪ್ರಜಾಪ್ರಭುತ್ವವನ್ನು ಬಲವಡಿಸಲಿಲ್ಲ, ಬದಲಾಗಿ ಅಧಿಕಾರದಲ್ಲಿದ್ದವರ ರಕ್ಷಣೆ ಮತ್ತು ಕುಟುಂಬದ ಬಲವರ್ಧನೆಯ ಉದ್ದೇಶವನ್ನಷ್ಟೇ ಹೊಂದಿತ್ತು ಎಂದರು.
ದೇಶವು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಈಗಲೂ ಹೆಮ್ಮೆಪಟ್ಟುಕೊಳ್ಳುತ್ತದೆ. ಆದರೂ ಸಂವಿಧಾನವನ್ನು ಒಪ್ಪಿಕೊಂಡ ಒಂದೇ ವರ್ಷದಲ್ಲಿ ಅಧಿಕಾರಕ್ಕೆ ಬಂದ ದೇಶದ ಮೊದಲ ಮಧ್ಯಂತರ ಸರ್ಕಾರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಸಂವಿಧಾನ ತಿದ್ದುಪಡಿ ತಂದಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಕೆಲಸ 1949ರ ಮೊದಲು ಮತ್ತು ನಂತರದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿತ್ತು ಎಂದರು.
1949ರಲ್ಲಿ ಕವಿ ಮಜರೂಹ್ ಸುಲ್ತಾನ್‌ಪುರಿ ಮತ್ತು ಬಲ್‌ರಾಜ್ ಸೈನಿ ಬಂಧನವನ್ನು ತಮ್ಮ ಮಾತಿನಲ್ಲಿ ಸ್ಮರಿಸಿದ ನಿರ್ಮಲಾ ಸೀತಾರಾಮನ್, ಮಿಲ್ ಕಾರ್ಮಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಲ್ತಾನ್‌ಪುರಿ ಅವರು ನೆಹರು ವಿರುದ್ಧ ಕವಿತೆ ಓದಿದ್ದರು. ಇದಕ್ಕಾಗಿ ಕ್ಷಮೆ ಕೇಳಲು ಒಪ್ಪದ ಸುಲ್ತಾನ್‌ಪುರಿ ಅವರನ್ನು ಆ ಕಾಲದ ಹೆಸರಾಂತ ನಟ ಸೈನಿ ಅವರ ಜತೆಗೆ ಜೈಲಿಗಟ್ಟಲಾಯಿತು. ಇದು ಕಾಂಗ್ರೆಸ್‌ನ ಸಹಿಷ್ಣುತೆಯ ಮಟ್ಟ ಎಂದು ವ್ಯಂಗ್ಯವಾಡಿದ ಅವರು, ಈಗ ಕೆಲವರು ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದುಕೊಂಡು ವಾಕ್‌ಸ್ವಾತಂತ್ರ್ಯ, ದೇಶದಲ್ಲಿ ಭಯದ ವಾತಾವರಣ ಇದೆ ಎಂದೆಲ್ಲ ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.