
ಅಹಮದಾಬಾದ್ (ಏ.6): ನಗರದ ಹೋಟೆಲ್‌ಗಳಲ್ಲಿ ಕಲಬೆರಕೆ ಆಹಾರದ ಬಗ್ಗೆ ಹತ್ತಾರು ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಾರುಕಟ್ಟೆಯಿಂದ ತಂದಿದ್ದ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಚಾಂದ್‌ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ದಂಪತಿಗಳು ಸ್ಥಳೀಯ ಡೈರಿಯಿಂದ ದೋಸೆ ಹಿಟ್ಟನ್ನು ಖರೀದಿಸಿ ತಂದಿದ್ದರು. ಇದನ್ನು ಸೇವಿಸಿದ ಇಡೀ ಕುಟುಂಬಕ್ಕೆ ತೀವ್ರವಾಗಿ ವಾಂತಿ-ಭೇದಿಯಾಗಿ ಫುಡ್ ಪಾಯ್ಸನ್ ಆಗಿ ಪರಿಣಮಿಸಿದೆ. ಈ ದುರಂತದಲ್ಲಿ ಮೂರು ತಿಂಗಳ ಶಿಶು ರಾಹಾ ಮತ್ತು ನಾಲ್ಕು ವರ್ಷದ ಬಾಲಕಿ ಮಿಶ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿ ಭಾವನಾ ಮತ್ತು ತಂದೆ ವಿಮಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಮೂರು ತಿಂಗಳ ಮಗುವಿಗೆ ದೋಸೆಯಂತಹ ಘನ ಆಹಾರವನ್ನು ನೀಡುವುದಿಲ್ಲ. ಹಾಗಿದ್ದರೂ ಮಗು ಸಾವನ್ನಪ್ಪಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ತಾಯಿ ದೋಸೆ ಸೇವಿಸಿ ವಿಷಾಹಾರದ ಸಮಸ್ಯೆಗೆ ತುತ್ತಾದ ನಂತರ ಮಗುವಿಗೆ ಸ್ತನ್ಯಪಾನ ಮಾಡಿಸಿರಬಹುದು, ಇದರಿಂದ ಮಗುವಿನ ಮೇಲೆ ಪರಿಣಾಮ ಬೀರಿದೆ ಎಂಬ ಸಂಶಯ ವ್ಯಕ್ತವಾಗಿದೆ.
ವಿಮಲ್ ಅವರ ತಂದೆ ಗೌರಿಶಂಕರ್ ಪ್ರಜಾಪತಿ ಮಾತನಾಡಿ, "ನನ್ನ ಮಗ ಐಓಸಿ ರಸ್ತೆಯಲ್ಲಿರುವ ಘನಶ್ಯಾಮ್ ಡೈರಿಯಿಂದ ಏಪ್ರಿಲ್ 1ರ ರಾತ್ರಿ 8 ಗಂಟೆಗೆ ಹಿಟ್ಟು ತಂದಿದ್ದ. ಅದನ್ನು ತಿಂದ ಮರುದಿನ ಬೆಳಗ್ಗೆ ಅವನಿಗೆ ವಾಂತಿಯಾದ ಕಾರಣ ಆಸ್ಪತ್ರೆಗೆ ಸೇರಿಸಿದೆವು. ಆದರೆ ಹಿಟ್ಟಿನಿಂದಲೇ ಈ ಸಮಸ್ಯೆಯಾಗಿದೆ ಎಂದು ತಿಳಿಯದ ಸೊಸೆ, ಅದೇ ಹಿಟ್ಟನ್ನು ಬಳಸಿ ಮಗಳಿಗೂ ದೋಸೆ ನೀಡಿದ್ದಾಳೆ. ನಂತರ ಅವರಿಗೂ ವಾಂತಿಯಾಗಿದೆ," ಎಂದು ವಿವರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.
ಈ ಆರೋಪವನ್ನು ಅಲ್ಲಗಳೆದಿರುವ ಘನಶ್ಯಾಮ್ ಡೈರಿಯ ಮಾಲೀಕ ಕೇತನ್ ಪಟೇಲ್, "ನಾವು ದಿನಕ್ಕೆ 100 ರಿಂದ 125 ಕೆಜಿ ಹಿಟ್ಟು ಮಾರಾಟ ಮಾಡುತ್ತೇವೆ. ಅದೇ ಬ್ಯಾಚ್‌ನ ಹಿಟ್ಟನ್ನು ನಮ್ಮ ಸಂಬಂಧಿಕರು ಮತ್ತು ನೂರಾರು ಗ್ರಾಹಕರು ಬಳಸಿದ್ದಾರೆ, ಯಾರಿಗೂ ತೊಂದರೆಯಾಗಿಲ್ಲ," ಎಂದಿದ್ದಾರೆ. ಮಾಲೀಕನ ಸಹೋದರ ವಿಪುಲ್‌ಭಾಯಿ ಮಾತನಾಡಿ, "ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ದಂಪತಿಗಿಂತ ಮೊದಲು 10 ಮಂದಿ ಮತ್ತು ನಂತರ 10 ಮಂದಿ ಅದೇ ಡ್ರಮ್‌ನಿಂದ ಹಿಟ್ಟು ಖರೀದಿಸಿದ್ದಾರೆ. ನಾನು ವೈಯಕ್ತಿಕವಾಗಿ ಅವರನ್ನೆಲ್ಲಾ ವಿಚಾರಿಸಿದ್ದೇನೆ, ಯಾರಿಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ. ಹಿಟ್ಟು ಕೆಟ್ಟಿದ್ದರೆ ಕೇವಲ ಒಂದು ಕುಟುಂಬಕ್ಕೆ ಮಾತ್ರ ಸಮಸ್ಯೆ ಆಗುತ್ತಿರಲಿಲ್ಲ," ಎಂದು ವಾದಿಸಿದ್ದಾರೆ.
ಚಾಂದ್‌ಖೇಡಾ ಪೊಲೀಸರು ಮತ್ತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನ ಆಹಾರ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನಿಖರ ಕಾರಣ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ (FSL) ನೆರವು ಪಡೆಯಲಾಗುತ್ತಿದೆ. ಮಕ್ಕಳ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಇದು ಕೇವಲ ಫುಡ್ ಪಾಯ್ಸನಿಂಗ್ ಅಥವಾ ಆಹಾರದಲ್ಲಿನ ಕಲಬೆರಕೆಯೇ ಎಂಬುದು ಸ್ಪಷ್ಟವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ