
ಬೆಂಗಳೂರು (ಜೂ.13): ಅಹಮದಾಬಾದ್ ವಿಮಾನ ದುರಂತವಾಗಿ 24 ಗಂಟೆಗಳು ಆಗುತ್ತಿದ್ದಂತೆ ಹೃದಯವಿದ್ರಾವಕ ಎನ್ನುವ ಕಥೆಗಳು ಹೊರಬರುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಕಥೆಗಳು. ಒಂದಕ್ಕಿಂತ ಒಂದು ಹೃದಯಬಿರಿಯುವಂಥದ್ದು. ಇದರ ನಡುವೆ ಒಂದು ಮನೆಯ ಕಥೆ ಮಾತ್ರ ವಿಧಿಯ ಕ್ರೂರ ತಿರುವು ಎನ್ನುವಂತೆ ಕಂಡಿದೆ. ವಾರದ ಹಿಂದೆ ಲಂಡನ್‌ನಲ್ಲಿ ಸಾವು ಕಂಡಿದ್ದ ಪತ್ನಿಯ ಕೊನೆಯ ಆಸೆಯಂತೆ ಆಕೆಯ ಅಸ್ಥಿಯನ್ನು ಭಾರತಕ್ಕೆ ತಂದು ವಿಸರ್ಜನೆ ಮಾಡಿದ್ದ ಪತಿ ಕೂಡ ವಿಮಾನ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿದ್ದ ಆತ, ಪತ್ನಿಯ ಅಸ್ಥಿಯನ್ನು ವಿಸರ್ಜನೆ ಮಾಡಿದ ಬಳಿಕ ಗುರುವಾರ ಲಂಡನ್‌ಗೆ ವಾಪಾಸಾಗಬೇಕಿತ್ತು. ಆದರೆ, ವಿಧಿಯ ಆಟಕ್ಕೆ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಇನ್ನು ಲಂಡನ್‌ನಲ್ಲಿ ತಂದೆಯ ಬರುವಿಕೆಗೆ ಕಾದಿದ್ದ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ವಾಡಿಯಾ ಗ್ರಾಮದ ಮೂಲದ ಮತ್ತು ಲಂಡನ್ ನಿವಾಸಿ ಅರ್ಜುನ್‌ಭಾಯ್ ಮನುಭಾಯ್ ಪಟೋಲಿಯಾ ಕೆಲವೇ ದಿನಗಳ ಹಿಂದೆ ಅಹಮದಾಬಾದ್‌ಗೆ ಆಗಮಿಸಿದ್ದರು. ಅವರ ಪತ್ನಿ ಭಾರತಿಬೆನ್ ಕೇವಲ ಒಂದು ವಾರದ ಹಿಂದೆ ಲಂಡನ್‌ನಲ್ಲಿ ನಿಧನರಾದರು. ತನ್ನ ಚಿತಾಭಸ್ಮವನ್ನು ಪೂರ್ವಜರ ಗ್ರಾಮದ ನೀರಿನಲ್ಲಿ ವಿಸರ್ಜಿಸಬೇಕೆಂಬುದು ಆಕೆಯ ಅಂತಿಮ ಆಸೆಯಾಗಿತ್ತು. ಇದಕ್ಕಾಗಿ ಅರ್ಜುನ್ ಒಬ್ಬಂಟಿಯಾಗಿ ಭಾರತಕ್ಕೆ ಬಂದಿದ್ದರು. ಕೇವಲ 8 ಮತ್ತು 4 ವರ್ಷ ವಯಸ್ಸಿನ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಲಂಡನ್‌ನಲ್ಲಿ ಬಿಟ್ಟು ಬಂದಿದ್ದ ಅರ್ಜುನ್, ಪತ್ನಿ ಭಾರತಿಬೆನ್ ಅಂತಿಮ ವಿಧಿಗಳನ್ನು ನೆರವೇರಿಸಿದ್ದರು.
ಕುಟುಂಬದ ಮೂಲಗಳ ಪ್ರಕಾರ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ತನ್ನ ಪತ್ನಿಯ ಇಚ್ಛೆಯಂತೆ ಆಕೆಯ ಚಿತಾಭಸ್ಮವನ್ನು ಹಳ್ಳಿಯ ಕೊಳ ಮತ್ತು ನದಿಯಲ್ಲಿ ವಿಸರ್ಜಿಸಿದ ನಂತರ, ಅರ್ಜುನ್ ಲಂಡನ್‌ಗೆ ವಾಪಾಸಗಲು ಗುರುವಾರ ಏರ್ ಇಂಡಿಯಾ ವಿಮಾನ ಏರಿದ್ದರು. ಆದರೆ ವಿಧಿ ಬೇರೆಯದೇ ಯೋಜನೆಗಳನ್ನು ಹೊಂದಿತ್ತು. ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾಗಿ, 241 ಮಂದಿ ಸಾವು ಕಂಡಿದ್ದು ಅದರಲ್ಲಿ ಅರ್ಜುನ್ ಕೂಡ ಒಬ್ಬರಾಗಿದ್ದಾರೆ.
ಇನ್ನು ಲಂಡನ್‌ನಲ್ಲಿ ತನ್ನ ತಂದೆ ಬರುವುದನ್ನೇ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಕಾಯುತ್ತಿದ್ದು, ಒಂದೇ ವಾರದೊಳಗೆ ತಂದೆ-ತಾಯಿಯನ್ನು ಕಳೆದುಕೊಂಡಿದ್ದೇವೆ ಅನ್ನೋದರ ದುಃಖವನ್ನೂ ಮಾಡಲಾಗದ್ಟು ಮುಗ್ಧರಾಗಿದ್ದಾರೆ. ಸದ್ಯಕ್ಕೆ ಯಾವುದೇ ಪೋಷಕರಿಲ್ಲದ ಕಾರಣ, ಅವರ ಭವಿಷ್ಯವು ಈಗ ಅನಿಶ್ಚಿತತೆಯಲ್ಲಿದೆ.
ಅಮ್ರೇಲಿಯಲ್ಲಿ, ಅರ್ಜುನ್‌ಭಾಯ್ ಅವರ ನಿಧನದ ಸುದ್ದಿ ಅವರ ಕುಟುಂಬ ಮತ್ತು ಸಮುದಾಯದ ಸದಸ್ಯರನ್ನು ದಿಗ್ಭ್ರಮೆಗೊಳಿಸಿದೆ ಮತ್ತು ದುಃಖಿತರನ್ನಾಗಿ ಮಾಡಿದೆ. ಕೆಲವು ದಿನಗಳ ಹಿಂದೆ ಭಾರತಿಬೆನ್ ಅವರ ಚಿತಾಭಸ್ಮವನ್ನು ವಿಸರ್ಜಿಸಲು ಗ್ರಾಮಸ್ಥರು ಸೇರಿದ್ದ ವಾಡಿಯಾ ಗ್ರಾಮದಾದ್ಯಂತ ಶೋಕ ಹರಡಿದೆ.
ಅರ್ಜುನ್‌ಭಾಯ್ ಅವರ ತಂದೆ ಮೊದಲೇ ನಿಧನರಾಗಿದ್ದರು, ಮತ್ತು ಸೂರತ್‌ನಲ್ಲಿ ವಾಸಿಸುವ ಅವರ ವೃದ್ಧ ತಾಯಿ ಈ ಸುದ್ದಿ ಕೇಳಿ ತೀವ್ರ ಆಘಾತದಲ್ಲಿದ್ದಾರೆ. ಅವರಿಗೆ ಈಗ ತನ್ನ ಮೊಮ್ಮಕ್ಕಳನ್ನು ನೋಡಿಕೊಳ್ಳಲು ಲಂಡನ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯೆಂದರೆ, ಅರ್ಜುನ್ ಅವರ ಅಂತ್ಯಕ್ರಿಯೆಯನ್ನು ಯಾರು ಮಾಡುತ್ತಾರೆ ಮತ್ತು ಲಂಡನ್‌ನಲ್ಲಿ ಅವರ ಹೆಣ್ಣುಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಎನ್ನುವುದಾಗಿದೆ.
ಕೆಲವೇ ದಿನಗಳಲ್ಲಿ ಒಂದೇ ಕುಟುಂಬಕ್ಕೆ ಎರಗಿದ ಎರಡು ಆಘಾತ, ಇಬ್ಬರು ಚಿಕ್ಕಮಕ್ಕಳು, ಇದನ್ನು ಅಹಮದಾಬಾದ್ ವಿಮಾನ ಅಪಘಾತದಿಂದ ಹೊರಹೊಮ್ಮಿದ ಅತ್ಯಂತ ಭಾವನಾತ್ಮಕ ಹಾಗೂ ಎದೆಬಿರಿಯುವಂಥ ಕಥೆಗಳಲ್ಲಿ ಒಂದು ಎಂದು ವಿವರಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ