ಪಶ್ಚಿಮ ಬಂಗಾಳದ ಬಳಿಕ ಅಸ್ಸಾಂನಲ್ಲೂ ವಕ್ಫ್ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಕಚಾರ್ ಜಿಲ್ಲೆಯಲ್ಲಿ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಗುವಾಹಟಿ: ಪಶ್ಚಿಮ ಬಂಗಾಳದ ಬಳಿಕ ಇದೀಗ ನೆರೆಯ ಅಸ್ಸಾಂನಲ್ಲೂ ವಕ್ಫ್ ವಿರೋಧಿ ಹೋರಾಟಗಾರರು ಹಿಂಸಾಚಾರ ನಡೆಸಿದ್ದಾರೆ. ಭಾನುವಾರ ಕಚಾರ್ ಜಿಲ್ಲೆಯಲ್ಲಿ ಗುಂಪೊಂದು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸಿದೆ. ಕಚಾರ್ ಜಿಲ್ಲೆಯ ಸಿಲ್ಚಾರ್ ಪ್ರದೇಶದಲ್ಲಿ ವಕ್ಫ್ ತಿದ್ದುಪಡಿ ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ಕೈಗೊಂಡಿದ್ದರು. ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಭಿತ್ತಿಪತ್ರಗಳನ್ನು ಹಿಡಿದು ಈ ಇಸ್ಲಾಂ ವಿರೋಧಿ ಎನ್ನುವ ಘೋಷಣೆಗಳನ್ನು ಕೂಗುತ್ತಾ, ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿದ್ದರು.
ಪೊಲೀಸರಿಂದ ಲಾಠಿ ಚಾರ್ಜ್:
ಈ ನಡುವೆ ಪ್ರತಿಭಟನೆಯ ಗುಂಪಿಗೆ ಪ್ರವೇಶಿಸಿದ ಕೆಲ ಯುವಕರು ಪೊಲೀಸರ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಆ ಬಳಿಕ ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಚಾರ್ಚ್ ನಡೆಸಬೇಕಾಯಿತು. ಆ ಬಳಿಕ ಇದ್ದಕ್ಕಿದಂತೆ ಪ್ರತಿಭಟನೆ ಹಿಂಸೆಗೆ ತಿರುಗಿತು. ಸಿಲ್ಚಾರ್‌ನ ಚಾಮ್ರಗುಡಂ, ಬೆರೆಂಗಾ ಮತ್ತು ಹಳೆಯ ಲಖೀಪುರ ರಸ್ತೆಗಳಲ್ಲಿ ಹಿಂಸಾಚಾರ ನಡೆಯಿತು.
ಈ ಬಗ್ಗೆ ಕ್ಯಾಚರ್ ಎಸ್ಪಿ ನುಮಲ್ ಮಹತ್ತಾ ಪ್ರತಿಕ್ರಿಯಿಸಿ, ‘ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. 300-400 ಜನರು ಸೇರಿದ್ದರು. ಆದರೆ ಕೆಲವರು ರ್‍ಯಾಲಿ ಪ್ರವೇಶಿಸಿ ಕಾನೂನು ಸುವ್ಯವಸ್ಥೆಗೆ ತೊಂದರೆ ಕೊಡಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಿದ್ದೇವೆ. ಜನಸಮೂಹವನ್ನು ಚದರಿಸಲು ಪೊಲೀಸರು ಸಮಂಜಸ ಬಲ ಪ್ರಯೋಗಿಸಿದರು’ ಎಂದರು.
ಶನಿವಾರಷ್ಟೇ ಅಸ್ಸಾಂ ಸಿಎಂ ಹಿಮಂತ ಶರ್ಮಾ ಅಸ್ಸಾಂನಲ್ಲಿ ವಕ್ಫ್ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಿದ್ದಕ್ಕೆ ಮುಸ್ಲಿಂ ಸಮುದಾಯಕ್ಕೆ ಧನ್ಯವಾದ ತಿಳಿಸಿದ್ದರು. ಅಲ್ಲದೇ ಪೊಲೀಸರ ಕ್ರಮಗಳನ್ನು ಶ್ಲಾಘಿಸಿದ್ದರು. ಈ ಬೆನ್ನಲ್ಲೇ ಹಿಂಸಾಚಾರ ನಡೆದಿದೆ.
ಇದನ್ನೂ ಓದಿ: ಇದು ಜಾತಿ ಗಣತಿ ಅಲ್ಲವೇ ಅಲ್ಲ, ಸಮೀಕ್ಷೆ ಅಷ್ಟೇ: ಸಚಿವ ಶಿವರಾಜ ತಂಗಡಗಿ
ಚಹಾ ಆಸ್ವಾದಿಸುವ ಪೋಸ್ಟ್ ಹಾಕಿದ ಸಂಸದ ಪಠಾಣ್, ಕೆಲವರಿಂದ ಆಕ್ಷೇಪ
ವಕ್ಫ್ ಬೋರ್ಡ್ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆಯಿಂದಾಗಿ ಪಶ್ಚಿಮ ಬಂಗಾಳವು ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲೇ ಸ್ಥಳೀಯ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಚಹಾ ಆಸ್ವಾದಿಸುವ ಪೋಸ್ಟ್ ಹಾಕಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ದಿನಗಳ ಹಿಂದಷ್ಟೇ ಪಠಾಣ್ ಅವರು ಇನ್‌ಸ್ಟಾಗ್ರಾಂನಲ್ಲಿ ತಾವು ಚಹಾ ಸೇವಿಸುತ್ತಿರುವ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದರು. ಅದಕ್ಕೆ ''''ನೆಮ್ಮದಿಯ ಮಧ್ಯಾಹ್ನ, ಒಳ್ಳೆಯ ಚಹಾ ಮತ್ತು ಶಾಂತ ವಾತಾವರಣ'''' ಎಂದು ಅಡಿಬರಹ ಹಾಕಿದ್ದರು. ಇದಕ್ಕೆ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೆರೆಯ ಮುರ್ಷಿದಾಬಾದ್‌ನಲ್ಲಿ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು, ನಿಮಗೆ ಏನಾದರೂ ನಾಚಿಕೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಯೂಸುಫ್ ಪಠಾಣ್ ಅವರ ಈ ಪೋಸ್ಟ್ ಮುಂದಿಟ್ಟುಕೊಂಡು ಬಿಜೆಪಿ ಕೂಡ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಂಗಾಳದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದ್ದರೆ ಸಂಸದರೂ ಆದ ಯೂಸುಫ್ ಪಠಾಣ್ ಅವರು ಟೀ ಆಸ್ವಾದಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮ ವಿರೋಧಿಸುವವರು ಬೇರೆ ಧರ್ಮ ವಿರೋಧಿಸುವುದಿಲ್ಲ ಏಕೆ?: ಪ್ರಲ್ಹಾದ್ ಜೋಶಿ